
ಕಲಬುರಗಿ: ಇಲ್ಲಿನ ಎಸ್‌ಬಿಆರ್ ಪಬ್ಲಿಕ್ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಭೂಮಿಕಾ ಎಂ. ಬೆಳ್ಳೆ ರಾಷ್ಟ್ರಮಟ್ಟದ ಯಂಗ್ ಇನ್ನೊವೇಟರ್ಸ್ ಹಾಗೂ ಇನ್ವೆಂಟರ್ಸ್ ಚಾಲೆಂಜ್–2025 ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದು, ಯಂಗ್ ಇನೋವೇಟರ್ ಹಾಗೂ ಯಂಗ್ ಸೈಂಟಿಸ್ಟ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಛತ್ತೀಸಗಡ ರಾಜ್ಯದ ರಾಯಪುರದಲ್ಲಿ ನವೆಂಬರ್ 7ರಂದು ನಡೆದ ಕಾರ್ಯಕ್ರಮದಲ್ಲಿ ಛತ್ತೀಸ್‌ಗಡ ಮುಖ್ಯಮಂತ್ರಿ ವಿಷ್ಣುದೇವ ಸಾಯ್ ಅವರು, ವಿದ್ಯಾರ್ಥಿನಿ ಭೂಮಿಕಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಭೂಮಿಕಾ ಅವರು, ದೃಷ್ಟಿದೋಷ ಇರುವವರಿಗೆ ದೈನಂದಿನ ಜೀವನದಲ್ಲಿ ಸುರಕ್ಷಿತವಾಗಿ ಸಂಚರಿಸಲು ನೆರವಾಗುವ ಉದ್ದೇಶದಿಂದ ಸಿದ್ಧಪಡಿಸಿದ ‘ಸ್ಮಾರ್ಟ್ ವಾಕ್ ಫಾರ್ ದಿ ವಿಷುವಲಿ ಇಂಪೇರ್ಡ್’ ಎಂಬ ಸಾಧನವು ವೈಜ್ಞಾನಿಕ, ಮಾನವೀಯ ಹಾಗೂ ತಾಂತ್ರಿಕತೆ ದೃಷ್ಟಿಕೋನದಿಂದ ‘ಅತ್ಯುತ್ತಮ ಆವಿಷ್ಕಾರ’ ಎಂದು ಗುರುತಿಸಲ್ಪಟ್ಟಿತು. ನವೀನ ಚಿಂತನೆ ಹಾಗೂ ಸಂಶೋಧನಾತ್ಮಕ ದೃಷ್ಟಿಯಿಂದ ಭೂಮಿಕಾ ಅವರ ಆವಿಷ್ಕಾರವು ವಿಮರ್ಶಕರಿಂದ ವಿಶೇಷ ಮೆಚ್ಚುಗೆ ಗಳಿಸಿತು. ಸ್ಪರ್ಧೆಯಲ್ಲಿ ದೇಶದ ವಿವಿಧೆಡೆಯಿಂದ ಹಲವು ಆವಿಷ್ಕಾರಗಳು ಬಂದಿದ್ದವು.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ದಾಕ್ಷಾಯಿಣಿ ಅಪ್ಪಾ, 9ನೇ ಪೀಠಾಧಿಪತಿ ದೊಡ್ಡಪ್ಪ ಅಪ್ಪಾ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಎಸ್‌ಬಿಆರ್ ಪಬ್ಲಿಕ್ ಶಾಲೆ ಪ್ರಾಂಶುಪಾಲ ಎನ್.ಎಸ್.ದೇವರಕಲ್ ಅವರು ವಿದ್ಯಾರ್ಥಿನಿ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.