ADVERTISEMENT

ಕೋನಾ ಹಿಪ್ಪರಗಾ ಗ್ರಾಮಸ್ಥರ ರಕ್ಷಣೆ

ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಕಾರ್ಯಾಚರಣೆ

ವೆಂಕಟೇಶ ಆರ್.ಹರವಾಳ
Published 19 ಅಕ್ಟೋಬರ್ 2020, 15:22 IST
Last Updated 19 ಅಕ್ಟೋಬರ್ 2020, 15:22 IST
ಜೇವರ್ಗಿ ತಾಲ್ಲೂಕಿನ ಕೋನಾ ಹಿಪ್ಪರಗಾ ಗ್ರಾಮಕ್ಕೆ ಭೀಮಾ ನದಿ ನೀರು ಸುತ್ತುವರಿದುದರಿಂದ ಶಾಸಕ ಡಾ.ಅಜಯಸಿಂಗ್, ತಹಶೀಲ್ದಾರ್ ಸಿದರಾಯ ಭೋಸಗಿ ಸೋಮವಾರ ದೋಣಿಯಲ್ಲಿ ಹೋಗಿ ಸುರಕ್ಷಿತ ಪ್ರದೇಶಕ್ಕೆ ತೆರಳುವಂತೆ ಗ್ರಾಮಸ್ಥರ ಮನ ಒಲಿಸಿದರು
ಜೇವರ್ಗಿ ತಾಲ್ಲೂಕಿನ ಕೋನಾ ಹಿಪ್ಪರಗಾ ಗ್ರಾಮಕ್ಕೆ ಭೀಮಾ ನದಿ ನೀರು ಸುತ್ತುವರಿದುದರಿಂದ ಶಾಸಕ ಡಾ.ಅಜಯಸಿಂಗ್, ತಹಶೀಲ್ದಾರ್ ಸಿದರಾಯ ಭೋಸಗಿ ಸೋಮವಾರ ದೋಣಿಯಲ್ಲಿ ಹೋಗಿ ಸುರಕ್ಷಿತ ಪ್ರದೇಶಕ್ಕೆ ತೆರಳುವಂತೆ ಗ್ರಾಮಸ್ಥರ ಮನ ಒಲಿಸಿದರು   

ಜೇವರ್ಗಿ: ಮಹಾರಾಷ್ಟ್ರದ ಜಲಾಶಯಗಳಿಂದ ಭೀಮಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಿದ್ದರಿಂದ ಪ್ರವಾಹ ಉಂಟಾಗಿ ತಾಲ್ಲೂಕಿನ ಭೀಮಾ ನದಿ ದಂಡೆಯ 37 ಗ್ರಾಮಗಳ ನಿವಾಸಿಗಳು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ತಾಲ್ಲೂಕಿನ ಕೋಳಕೂರ ಜಿಲ್ಲಾ ಪಂಚಾಯಿತಿ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕೋನಾ ಹಿಪ್ಪರಗಾ, ಮಂದ್ರವಾಡ, ಕೂಡಿ, ಕೋಬಾಳ, ರಾಸಣಗಿ, ಹಂದನೂರ ಸೇರಿದಂತೆ ಹಲವು ಗ್ರಾಮಗಳಿಗೆ ಭೀಮಾ ಪ್ರವಾಹ ನುಗ್ಗಿದೆ. ಕೋಬಾಳ ಮತ್ತು ಮಂದ್ರವಾಡ ಗ್ರಾಮಸ್ಥರು ಭಾನುವಾರ ಸಂಜೆ ಗ್ರಾಮವನ್ನು ತೊರೆದು ಸುರಕ್ಷಿತ ಸ್ಥಳಗಳಿಗೆ ತೆರಳಿದ್ದಾರೆ. ಇನ್ನು ಕೆಲವರು ಕೂಡಿ ದರ್ಗಾ ಬಳಿಯಿರುವ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ.

ಜಲ ದಿಗ್ಭಂದನಕ್ಕೆ ಒಳಗಾದ ಕೋನಾ ಹಿಪ್ಪರಗಾ ಗ್ರಾಮಸ್ಥರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲು ಕೋನಾ ಹಿಪ್ಪರಗಾ- ಸರಡಗಿ ಸೇತುವೆ ಹತ್ತಿರ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಎರಡು ತುಕಡಿಗಳು ಹಾಗೂ ತುರ್ತು ನಿರ್ವಹಣಾ ತಂಡದ ಒಂದು ತುಕಡಿ ಸ್ಥಳೀಯ ಪೊಲೀಸರ ನೆರವಿನೊಂದಿಗೆ ಮೂರು ಯಾಂತ್ರೀಕೃತ ದೋಣಿಗಳಲ್ಲಿ ಕಾರ್ಯಾಚರಣೆ ನಡೆಸಿ ಸುರಕ್ಷಿತ ಸ್ಥಳಕ್ಕೆ ತಲುಪಿಸಿದರು.

ADVERTISEMENT

ನದಿ ನೀರು ಸುತ್ತುವರಿದರೂ ಗ್ರಾಮಸ್ಥರು ತಮ್ಮ ಜಾನುವಾರುಗಳನ್ನು ಬಿಟ್ಟು ಗ್ರಾಮ ತೊರೆಯುವುದಿಲ್ಲ ಎಂದು ಮನೆಗಳಲ್ಲೇ ಕುಳಿತುಕೊಂಡಿದ್ದರು. ಗ್ರಾಮಸ್ಥರ ಮನ ಒಲಿಸಿದ ಅಧಿಕಾರಿಗಳು ಮಹಿಳೆಯರು, ಮಕ್ಕಳು ಹಾಗೂ ಗ್ರಾಮದಲ್ಲಿ ಸಿಲುಕಿಕೊಂಡಿದ್ದ ಜನರನ್ನು ದೋಣಿಗಳ ಮೂಲಕ ಸುರಕ್ಷಿತ ಪ್ರದೇಶಕ್ಕೆ ತಲುಪಿಸಿದರು.

ಅಜಯಸಿಂಗ್ ಭೇಟಿ: ಕ್ಷೇತ್ರದ ಶಾಸಕ ಡಾ.ಅಜಯಸಿಂಗ್ ಅವರು ಸೋಮವಾರ ಪ್ರವಾಹ ಪೀಡಿತ ಕೋನಾ ಹಿಪ್ಪರಗಾ, ಕೂಡಿ, ಮಂದ್ರವಾಡ, ಹಂದನೂರ, ರಾಸಣಗಿ, ಇಟಗಾ, ಅಂಕಲಗಾ, ಕೋಬಾಳ, ಭೋಸಗಾ (ಬಿ), ಭೋಸಗಾ (ಕೆ), ಹಂಚಿನಾಳ ಗ್ರಾಮಗಳಿಗೆ ಭೇಟಿ ನೀಡಿ ಪ್ರವಾಹ ಸಂತ್ರಸ್ತರ ನೆರವಿಗೆ ಧಾವಿಸುವಂತೆ ತಹಶೀಲ್ದಾರ್‌ ಸಿದರಾಯ ಭೋಸಗಿ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.

ಡಾ.ಅಜಯಸಿಂಗ್ ಹಾಗೂ ಸಿದರಾಯ ಭೋಸಗಿ ದೋಣಿಯಲ್ಲಿ ತೆರಳಿ ಗ್ರಾಮಸ್ಥರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮಾಡಲು ನೆರವಾದರು.

ಸಿದರಾಯ ಭೋಸಗಿ ಮಾತನಾಡಿ, ತಾಲ್ಲೂಕಿನ ಭೀಮಾ ನದಿ ಪಾತ್ರದ 26 ಗ್ರಾಮಗಳ 6,200 ನಿರಾಶ್ರಿತರಿಗೆ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ನೀಡಲಾಗಿದೆ. ಪ್ರವಾಹ ಪರಿಸ್ಥಿತಿ ಎದುರಿಸಲು ಎರಡು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡಗಳು ಹಾಗೂ ತುರ್ತು ನಿರ್ವಹಣಾ ತಂಡವನ್ನು ಕರೆಸಲಾಗಿದೆ. ಕೂಡಿ ಭಾಗದ ಗ್ರಾಮಸ್ಥರಿಗೆ ಕೂಡಿ ದರ್ಗಾ ಹತ್ತಿರ ಆರಂಭಿಸಿದ ಕಾಳಜಿ ಕೇಂದ್ರದಲ್ಲಿ ಊಟ, ಉಪಚಾರದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.

ಸಂಸದ ವಿರುದ್ಧ ಆಕ್ರೋಶ

ಸಂಸದ ಡಾ. ಉಮೇಶ ಜಾಧವ ಸೋಮವಾರ ತಾಲ್ಲೂಕಿನ ನೆರೆ ಪೀಡಿತ ಗ್ರಾಮಗಳಾದ ಹರವಾಳ, ರಾಸಣಗಿ, ಕೂಡಿ, ಹಂದನೂರ ಗ್ರಾಮಗಳಿಗೆ ಭೇಟಿ ನೀಡಿ ಕಲಬುರ್ಗಿ ನಗರಕ್ಕೆ ತೆರಳುತ್ತಿದ್ದಾಗ ಕೋನಾ ಹಿಪ್ಪಗಾ ಹತ್ತಿರ ಭೀಮಾ ನದಿ ಪ್ರವಾಹದ ಹಿನ್ನೀರಿನಲ್ಲಿ ದೋಣಿಗಳ ಮೂಲಕ ರಸ್ತೆಗೆ ಬಂದ ಗ್ರಾಮಸ್ಥರು ಸಂಸದರ ಕಾರನ್ನು ತಡೆದು ಸಮಸ್ಯೆಗಳನ್ನು ಹೇಳಲು ಗ್ರಾಮಸ್ಥ ರಾಜಶೇಖರ ಜಾಡಿ ಮುಂದಾದರು. ಆದರೆ ಸಂಸದರು ಅವರ ಸಂಕಷ್ಟಗಳನ್ನು ಆಲಿಸದೆ ಕಾರಿನಲ್ಲಿ ಮುಂದೆ ಸಾಗಿದರು. ಸಂಸದರ ವರ್ತನೆ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.

ಈ ಸಂದರ್ಭದಲ್ಲಿ ಸಿಪಿಐ ರಮೇಶ ರೊಟ್ಟಿ, ಜೇವರ್ಗಿ ಪಿಎಸ್‌ಐ ಮಂಜುನಾಥ ಹೂಗಾರ, ಅಪರಾಧ ವಿಭಾಗದ ಪಿಎಸ್‌ಐ ಸಂಗಮೇಶ ಅಂಗಡಿ ಹಾಗೂ ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.