ಕಲಬುರಗಿ: ಉತ್ತಮ ಮುಂಗಾರಿನ ಮುನ್ಸೂಚನೆ ಕೃಷಿಕರಲ್ಲಿ ಮಂದಹಾಸ ಮೂಡಿಸಿದೆ. ಕೃಷಿ ಚಟುವಟಿಕೆಗಳಿಗೆ ಪೂರಕವಾಗಿ ಬಿತ್ತನೆ ಬೀಜ, ಗೊಬ್ಬರ ಖರೀದಿಯಲ್ಲಿ ನಿರತವಾಗಿರುವ ರೈತರಿಗೆ ‘ನಕಲಿ’ ಗೊಬ್ಬರ ಮತ್ತು ಬೀಜಗಳು ಆತಂಕವನ್ನು ತಂದೊಡ್ಡಿವೆ. ಗೊಬ್ಬರದ ಕೃತಕ ಅಭಾವವೂ ಅವರನ್ನು ಕಾಡುತ್ತಿದೆ.
ನೆರೆಯ ಮಹಾರಾಷ್ಟ್ರದ ಅಕ್ಕಲಕೋಟ ಮಾರ್ಗವಾಗಿ ಅಫಜಲಪುರ ಮತ್ತು ಆಳಂದ ತಾಲ್ಲೂಕುಗಳಿಗೆ ನಕಲಿ ಹತ್ತಿ, ಸೊಯಾಬೀನ್, ತೊಗರಿ, ಸೂರ್ಯಕಾಂತಿ ಮತ್ತು ತರಕಾರಿ ಬೀಜಗಳು ನುಗ್ಗುತ್ತಿವೆ. ಕಡಿಮೆ ದರದ ಕಾರಣಕ್ಕೆ ಜಿಲ್ಲೆಯ ಕೆಲವು ರೈತರು ಮತ್ತು ಮಧ್ಯ ವರ್ತಿಗಳು ಆಂಧ್ರಪ್ರದೇಶದ ಅದೋನಿಗೆ ಹೋಗಿ ಕಳಪೆ, ಪ್ರಮಾಣೀಕರಣ ಆಗದ ಬೀಜಗಳನ್ನು ಖರೀದಿಸಿ ತಂದು ಬಿತ್ತನೆ ಮಾಡಿ ಸಂಕಷ್ಟಕ್ಕೆ ಸಿಲುಕುತ್ತಿರುವುದು ಅವ್ಯಾಹತವಾಗಿದೆ.
ಕೆಲವು ಸ್ಥಳೀಯ ಗೊಬ್ಬರ ತಯಾರಕರು ಸಾಮಾನ್ಯವಾದ ಕ್ಯಾಲ್ಸಿಯಂ, ಮೆಗ್ನೀಷಿಯಂ, ಸಲ್ಫರ್ ಮಿಶ್ರಣವನ್ನೇ ಚೀಲಗಳಲ್ಲಿ ತುಂಬಿ ಡಿಎಪಿ ಎಂದು ಬರೆಯದೆಯೇ ಕಡಿಮೆ ದರಕ್ಕೆ ಗ್ರಾಮೀಣ ಭಾಗದಲ್ಲಿ ಮಾರಾಟ ಮಾಡುತ್ತಾರೆ. ಸಟ್ರೈಟ್ ಎನ್ನುವ ವಸ್ತುವಿಗೆ ಕಪ್ಪು ಬಣ್ಣ ಹಾಕಿ ಮಂಗಳ ಹೆಸರಿನ ಗೊಬ್ಬರ ಎಂದು ಮಾರಿದ್ದ ವ್ಯಕ್ತಿಯನ್ನು ಈ ಹಿಂದೆಯೇ ಹಿಡಿದು ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು ಎನ್ನುತ್ತಾರೆ ಕೃಷಿ ಅಧಿಕಾರಿಗಳು.
ಮೂರು ಮಾದರಿಯಲ್ಲಿ ‘ಕಳಪೆ’ ಬೀಜ ಮಾರಾಟ: ಕೃಷಿ ಇಲಾಖೆಯ ಅಧಿಕಾರಿಗಳ ಪ್ರಕಾರ, ನಕಲಿ ಬೀಜಗಳ ಮಾರಾಟ ಜಾಲವು ಅಧಿಕೃತವಾದ ಕಂಪನಿಗೆ ವಂಚಿಸಿ ಅಡ್ಡ ಮಾರ್ಗದಲ್ಲಿ ಖರೀದಿ, ಹೈಬ್ರೀಡ್ ಎಫ್–2 ಬೀಜಗಳ ಮಾರಾಟ ಮತ್ತು ಪರವಾನಗಿ ಇಲ್ಲದೆ ಬಿಡಿ (ಲೂಸ್) ಬಿತ್ತನೆ ಬೀಜಗಳ ಮಾರಾಟದ ಮೂಲಕ ವ್ಯಾಪಿಸಿಕೊಂಡಿದೆ.
ಅಡ್ಡ ಖರೀದಿ: ‘ಬಿತ್ತನೆ ಬೀಜಗಳ ಕಂಪನಿಯವರು ವಿಜ್ಞಾನಿಗಳು ಮತ್ತು ಪರಿಣಿತರನ್ನು ಬಳಸಿಕೊಂಡು ಎಫ್–1 ಗುಣಮಟ್ಟದ ಹೈಬ್ರೀಡ್ ಬೀಜ ತಯಾರಿಸುತ್ತಾರೆ. ಹೆಚ್ಚಿನ ಬೀಜಗಳ ಉತ್ಪಾದನೆಗಾಗಿ ಆಯ್ದ ರೈತರೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಾರೆ. ಉದಾಹರಣೆಗೆ 10 ಎಕರೆ ಜಮೀನು ಹೊಂದಿರುವ ರೈತನೊಂದಿಗೆ ಒಂದು ಕೆ.ಜಿ. ಹೈಬ್ರೀಡ್ ಹತ್ತಿ ಬೀಜಕ್ಕೆ ₹ 300 ನಿಗದಿಪಡಿಸಿ ಒಪ್ಪಂದವಾಗುತ್ತದೆ. ಒಂದು ಎಕರೆಗೆ 1 ಕ್ವಿಂಟಲ್‌ನಂತೆ 10 ಎಕರೆಗೆ 10 ಕ್ವಿಂಟಲ್ ಹತ್ತಿ ಬೀಜ ಉತ್ಪಾದಿಸುವ ರೈತ, 8 ಕ್ವಿಂಟಲ್ ಬೀಜಗಳನ್ನು ಮಾತ್ರವೇ ಕಂಪನಿಗೆ ಮಾರುತ್ತಾನೆ. ಉತ್ಪಾದನೆಯಲ್ಲಿ ನಷ್ಟವಾಗಿದೆ ಎಂದು ನೆಪ ಹೇಳಿ ಉಳಿದ 2 ಕ್ವಿಂಟಲ್ ಬೀಜಗಳನ್ನು ಕಾಳಸಂತೆಯಲ್ಲಿ ಒಂದು ಕೆ.ಜಿ.ಗೆ ₹ 500 ರಂತೆ ಮಾರುತ್ತಾನೆ’ ಎನ್ನುತ್ತಾರೆ ಕೃಷಿ ಅಧಿಕಾರಿಗಳು.
‘ಕಂಪನಿಯು ರೈತರಿಂದ ಪಡೆದಿದ್ದ 8 ಕ್ವಿಂಟಲ್ ಬೀಜಗಳನ್ನು ಸಂಸ್ಕರಿಸಿ, ಪ್ಯಾಕಿಂಗ್ ಮಾಡಿ, ತನ್ನ ಬ್ರಾಂಡ್ ಹೆಸರಿನಡಿ ಒಂದು ಕೆ.ಜಿ.ಗೆ ಸುಮಾರು ₹ 860 ದರ ನಿಗದಿಪಡಿಸಿ ಮಾರುತ್ತದೆ. ಇದು ಅಧಿಕೃತ. ಕಾಳಸಂತೆಯಲ್ಲಿ 2 ಕ್ವಿಂಟಲ್ ಖರೀದಿಸಿದ್ದ ಮಧ್ಯವರ್ತಿ ಯಾವುದೇ ಸಂಸ್ಕರಣೆ ಮಾಡದೆ, ಪರವಾನಗಿ ಇಲ್ಲದೆ ಅನಧಿಕೃತವಾಗಿ ₹ 600ಕ್ಕೆ ಮಾರುತ್ತಾನೆ. ಕಡಿಮೆ ಬೆಲೆ ಎಂದು ಮಧ್ಯವರ್ತಿಯಿಂದ ಬೀಜ ಖರೀದಿಸಿದ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ’ ಎಂದರು.
ಎಫ್–2 ಮಾರಾಟ: ‘ಹೈಬ್ರೀಡ್ ಎಫ್–1 ಬೀಜಗಳನ್ನು ಬಿತ್ತನೆ ಮಾಡಿ, ಇಳುವರಿ ಬಳಿಕ ಎಫ್–1 ಫಸಲಿನಿಂದ ಬೀಜಗಳನ್ನು ತೆಗೆದು ಹೈಬ್ರೀಡ್ ಎಫ್–2 ಬೀಜಗಳಾಗಿ ಮಾರಲಾಗುತ್ತದೆ. ಶೇ 70ರಿಂದ ಶೇ 80ರಷ್ಟು ಬೀಜಗಳು ಗುಣಮಟ್ಟದಿಂದ ಇರುತ್ತವೆ. ಇವು ಬಿತ್ತನೆಗೆ ಯೋಗ್ಯವಲ್ಲ. ಆದರೆ, ಒಂದು ಕೆ.ಜಿ. ಬೀಜ ₹ 200ರಿಂದ ₹ 300ಕ್ಕೆ ಸಿಗುತ್ತವೆ ಎಂದು ಮುಗಿಬಿದ್ದು ಖರೀದಿಸಿದ ರೈತರು ಕೈಸುಟ್ಟುಕೊಳ್ಳುತ್ತಾರೆ’ ಎಂದು ಎಚ್ಚರಿಸಿದರು.
ಲೂಸ್ ಬಿತ್ತನೆ ಬೀಜ ಮಾರಾಟ: ಧಾನ್ಯಗಳನ್ನು ಖರೀದಿಸುವ ಕೆಲವು ವರ್ತಕರು ಅನಧಿಕೃತವಾಗಿ ಲೂಸ್ ಬಿತ್ತನೆ ಬೀಜಗಳನ್ನು ಮಾರಿ, ರೈತರನ್ನು ವಂಚಿಸುವುದು ಕಂಡುಬಂದಿದೆ. ರೈತರು ನಕಲಿ ಬೀಜಗಳ ಹಾವಳಿಯಿಂದ ಪಾರಾಗಲು ರೈತ ಸಂಪರ್ಕ ಕೇಂದ್ರಗಳು, ಪರವಾನಗಿ ಹೊಂದಿದ ಅಧಿಕೃತ ಮಾರಾಟಗಾರರಿಂದ ಮಾತ್ರ ಖರೀದಿಸಬೇಕು ಎಂಬುದು ಅಧಿಕಾರಿಗಳ ಸಲಹೆ.
ಕೃಷಿ ಇಲಾಖೆಯ ನಿಯಮಗಳ ಅನುಸಾರ ಬೀಜ ಗೊಬ್ಬರ ಕೀಟನಾಶಕಗಳನ್ನು ಮಾರುತ್ತಿದ್ದೇವೆ. ನಕಲಿ ಕೃಷಿ ಪರಿಕರಗಳ ಮಾರಾಟ ಕಂಡುಬಂದಲ್ಲಿ ಕೃಷಿ ಇಲಾಖೆಗೆ ಮಾಹಿತಿ ಹಂಚಿಕೊಳ್ಳುತ್ತಿದ್ದೇವೆಬಸವರಾಜ ಚಂದ್ರಕಾಂತ ಮಂಗಲಗಿ ಕಲಬುರಗಿ ಕೃಷಿ ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷ
ಕೆಲವು ವರ್ತಕರು ಗೊಬ್ಬರದ ಕೃತಕ ಅಭಾವ ಸೃಷ್ಟಿಸುತ್ತಿದ್ದಾರೆ. ಕೃಷಿ ಇಲಾಖೆಯ ಅಧಿಕಾರಿಗಳು ಅಂತಹವರ ಮೇಲೆ ನಿಗಾ ಇರಿಸಿ ಕ್ರಮ ತೆಗೆದುಕೊಳ್ಳಲು ಮುಂದಾಗಬೇಕುಶ್ರೀಮಂತ ಬಿರಾದಾರ ಕರ್ನಾಟಕ ರೈತ ಸಂಘದ ಅಧ್ಯಕ್ಷ
ಕೃಷಿ ಕೇಂದ್ರ ಅಂಗಡಿಗಳ ಮುಂದೆ ಬಿತ್ತನೆ ಬೀಜ ಗೊಬ್ಬರ ಕೀಟನಾಶಕಗಳ ದಾಸ್ತಾನು ಮಾಹಿತಿ ಹಾಗೂ ದರ ಪಟ್ಟಿಯನ್ನು ಹಾಕಬೇಕು. ಬೀಜ ಗೊಬ್ಬರ ವಿತರಣೆಯಲ್ಲಿ ಅಡ್ಡಿಯಾಗಬಾರದುಸಂತೋಷಕುಮಾರ ಎಸ್.ಪಿ ಕನಸು ಸೇವಾ ಸಂಸ್ಥೆ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.