ADVERTISEMENT

ಎನ್‌ಇಕೆಆರ್‌ಟಿಸಿ: ನಿತ್ಯ ₹5 ಕೋಟಿ ವರಮಾನ ಖೋತಾ

18 ದಿನಗಳಿಂದ ರಸ್ತೆಗಿಳಿಯದ 4 ಸಾವಿರಕ್ಕೂ ಅಧಿಕ ಬಸ್‌ಗಳು

​ಪ್ರಜಾವಾಣಿ ವಾರ್ತೆ
Published 16 ಮೇ 2021, 19:30 IST
Last Updated 16 ಮೇ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಲಬುರ್ಗಿ: ವೇತನ ಹೆಚ್ಚಳಕ್ಕೆ ಒತ್ತಾಯಿಸಿ ಏಪ್ರಿಲ್‌ನಲ್ಲಿ 14 ದಿನಗಳವರೆಗೆ ಸಾರಿಗೆ ಸಿಬ್ಬಂದಿಯ ಸತತ ಪ್ರತಿಭಟನೆಯಿಂದ ಬಸವಳಿದಿದ್ದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಮತ್ತೆ ಏಪ್ರಿಲ್ 28ರಿಂದ ಇಲ್ಲಿಯವರೆಗೆ ಲಾಕ್‌ಡೌನ್‌ನಿಂದಾಗಿ ತತ್ತರಿಸಿದೆ. ನಿತ್ಯ ₹ 5 ಕೋಟಿ ವರಮಾನ ಖೋತಾ ಆಗುತ್ತಿದೆ.

ಹೀಗಾಗಿ, ಕೆಲಸಕ್ಕೆ ಹಾಜರಾದ ಸಿಬ್ಬಂದಿಯ ವೇತನ ಕೊಡುವುದು ಹೇಗೆ ಎಂಬ ಚಿಂತೆ ಸಂಸ್ಥೆಯ ಆಡಳಿತ ಮಂಡಳಿಗೆ ಕಾಡುತ್ತಿದೆ. 2020ರ ಮಾರ್ಚ್‌ನಲ್ಲಿ ಲಾಕ್‌ಡೌನ್ ಘೋಷಣೆಯಾದ ಸಂದರ್ಭದಲ್ಲಿ ಬಸ್‌ಗಳ ಸಂಚಾರ ಸ್ಥಗಿತಗೊಂಡಿತ್ತು. ಆಗ ಖುದ್ದು ಆಸಕ್ತಿ ವಹಿಸಿದ್ದ ಸಾರಿಗೆ ಖಾತೆಯನ್ನೂ ಹೊಂದಿರುವ ಲಕ್ಷ್ಮಣ ಸವದಿ ಅವರು ಮುಖ್ಯಮಂತ್ರಿ ಅವರ ಮನವೊಲಿಸಿ ಸರ್ಕಾರದಿಂದಲೇ ವೇತನ ಬಿಡುಗಡೆ ಮಾಡಿಸಿದ್ದರು.

ಆದರೆ, ಈ ಬಾರಿ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿದೆ. ಸರ್ಕಾರದ ಮನವಿ ಧಿಕ್ಕರಿಸಿ ಸಾರಿಗೆ ನೌಕರರ ಒಕ್ಕೂಟದ ಮುಖಂಡರ ಮಾತು ಕೇಳಿ ಮುಷ್ಕರದಲ್ಲಿ ಪಾಲ್ಗೊಂಡಿದ್ದರಿಂದ ವೇತನ ದೊರೆಯುವುದು ಅನುಮಾನ ಎಂಬ ಮಾತುಗಳು ಕೇಳಿ ಬರುತ್ತಿವೆ.

ADVERTISEMENT

ಅಲ್ಲದೇ, ಮುಷ್ಕರದಲ್ಲಿ ಪಾಲ್ಗೊಳ್ಳುವ ಮೂಲಕ ಸಂಸ್ಥೆಯ ನಿಯಮಗಳನ್ನು ಉಲ್ಲಂಘಿಸಿದ್ದಕ್ಕೆ ಸೇವೆಯಿಂದ ವಜಾ, ಅಮಾನತುಗೊಂಡಿರುವ ಸಿಬ್ಬಂದಿಗೆ ವೇತನ ಸಿಗುವ ಸಾಧ್ಯತೆ ಕ್ಷೀಣವಾಗಿವೆ. ನೌಕರರ ವಿರುದ್ಧ ತಾನು ಏಕೆ ಶಿಸ್ತು ಕ್ರಮ ಕೈಗೊಂಡೆ ಎಂಬ ಬಗ್ಗೆ ಸಂಸ್ಥೆಯು ಎಲ್ಲ ದಾಖಲೆಗಳ ಸಮೇತ ಕರ್ನಾಟಕ ಹೈಕೋರ್ಟ್‌ನ ಪ್ರಧಾನ ಪೀಠದಲ್ಲಿ ವಿಚಾರಣೆ ಸಂದರ್ಭದಲ್ಲಿ ತನ್ನ ನಡೆಯನ್ನು ಸಮರ್ಥಿಸಿಕೊಂಡಿದೆ. ಅದರ ವಿಚಾರಣೆ ಮೇ 26ರಂದು ಬರಲಿದೆ.

‘ಇದರ ಮಧ್ಯೆ ಸಂಸ್ಥೆಯ ಮಾತಿಗೆ ಬೆಲೆ ಕೊಟ್ಟು ಕರ್ತವ್ಯಕ್ಕೆ ಹಾಜರಾದ ಸಿಬ್ಬಂದಿಗೆ ಏಪ್ರಿಲ್ ಕೊನೆ ವಾರದಲ್ಲಿ ವೇತನ ಪಾವತಿಸಲಾಗಿದೆ. ಆದರೆ, ನಂತರದ ವೇತನ ಇನ್ನೂ ಪಾವತಿಯಾಗುವ ಲಕ್ಷಣಗಳು ಕಾಣುತ್ತಿಲ್ಲ. ನೌಕರರು ನಮ್ಮ ಮಾತು ಕೇಳಲಿಲ್ಲ. ಕೋವಿಡ್‌ನಂತಹ ತುರ್ತು ಸಂದರ್ಭಗಳಲ್ಲಿ ಜನರಿಗೆ ಸೇವೆ ನೀಡಲು ನಿರಾಕರಿಸಿದರು ಹಾಗೂ ಕೋವಿಡ್‌ನಿಂದಾಗಿ ಸರ್ಕಾರಿ ಖಜಾನೆಗೆ ನಿರೀಕ್ಷಿತ ಮಟ್ಟದ ತೆರಿಗೆ ಹಣ ಇತರೆ ವರಮಾನಗಳು ಬರುತ್ತಿಲ್ಲ. ಹಾಗಾಗಿ, ಸದ್ಯಕ್ಕೆ ಸರ್ಕಾರಿಂದಲೇ ವೇತನ ಭರಿಸುವ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ’ ಎನ್ನುತ್ತಾರೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು.

ಮೇ 24ರವರೆಗೆ ₹130 ಕೋಟಿ ನಷ್ಟ

ಏಪ್ರಿಲ್‌ 28ರಿಂದಲೇ ಸಂಸ್ಥೆ ವ್ಯಾಪ್ತಿಯ ಏಳು ಜಿಲ್ಲೆಗಳ 4100 ಬಸ್‌ಗಳು ರಸ್ತೆಗಿಳಿದಿಲ್ಲ. ನಿತ್ಯ ₹ 5 ಕೋಟಿ ವರಮಾನ ಖೋತಾ ಆದರೆ, ಮೇ 24ರವರೆಗೆ ₹ 130 ಕೋಟಿಯಷ್ಟು ವರಮಾನ ನಷ್ಟವಾಗಲಿದೆ. ಸಾರಿಗೆ ಮುಷ್ಕರದಿಂದ ₹ 73.50 ಕೋಟಿ ವರಮಾನದಲ್ಲಿ ನಷ್ಟವಾಗಿತ್ತು.

ನಂತರ ಒಂದು ವಾರ ಬಸ್‌ಗಳ ಸಂಚಾರ ಆರಂಭವಾಗಿತ್ತಾದರೂ ಶೇ 50ರಷ್ಟು ಸೀಟುಗಳು ಮಾತ್ರ ಭರ್ತಿಯಾಗಬೇಕು ಎಂಬ ನಿಯಮ ಇದ್ದುದರಿಂದ ಅಲ್ಲಿಯೂ ನಿರೀಕ್ಷಿತ ಮಟ್ಟದಲ್ಲಿ ವರಮಾನ ಬಂದಿಲ್ಲ. ಒಟ್ಟಾರೆ ₹ 203 ಕೋಟಿಯಷ್ಟು ಸಂಸ್ಥೆಯ ವರಮಾನಕ್ಕೆ ಹೊಡೆತ ಬೀಳಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.