ADVERTISEMENT

ವಾಡಿ: ತೊಗರಿ ಬೆಳೆಗೆ ನೆಟೆ ರೋಗ ಭೀತಿ

ಸತತ ಮಳೆಯಿಂದ ಜಮೀನುಗಳು ಜಲಾವೃತ; ಬೆಳೆ ಹಾನಿ ಹೆಚ್ಚಳ ಸಂಭವ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2020, 4:02 IST
Last Updated 15 ಸೆಪ್ಟೆಂಬರ್ 2020, 4:02 IST
ವಾಡಿಯ ಹೊಲವೊಂದರಲ್ಲಿ ತೊಗರಿ ಬೆಳೆಯ ಮಧ್ಯೆ ನೀರು ನಿಂತಿರುವುದು
ವಾಡಿಯ ಹೊಲವೊಂದರಲ್ಲಿ ತೊಗರಿ ಬೆಳೆಯ ಮಧ್ಯೆ ನೀರು ನಿಂತಿರುವುದು   

ವಾಡಿ: ನಾಲವಾರ ವಲಯದಲ್ಲಿ ಕಳೆದ ಕೆಲ ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿದ್ದು, ತೊಗರಿ ಸಾಲುಗಳ ಮಧ್ಯೆ ಮಳೆ ನೀರು ನಿಂತಿದೆ. ಇದರಿಂದ ತೊಗರಿ ಬೆಳೆದ ರೈತರಲ್ಲಿ ನೆಟೆ ರೋಗ ಭೀತಿ ಕಾಡುತ್ತಿದೆ.

ಮಳೆ ನೀರು ಹಿಡಿದಿಟ್ಟುಕೊಳ್ಳುವ ಕಪ್ಪು ಮಣ್ಣಿನಲ್ಲಿ ಬಿತ್ತನೆ ಮಾಡಲಾಗಿದ್ದ ತೊಗರಿ ಬೆಳೆಗಳ ಮಧ್ಯೆ ನಿಂತ ನೀರು ನೆಟೆ ರೋಗಕ್ಕೆ ಆಹ್ವಾನ ನೀಡುತ್ತಿದೆ. ತೊಗರಿ ಗಿಡಗಳಿಗೆ ಅಲ್ಲಲ್ಲಿ ನೆಟೆ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತಿದೆ.

ತರಕಸ್ ಪೇಟ್, ಕೊಲ್ಲೂರು, ರಾವೂರು, ಚಾಮನೂರು, ಬಳವಡ್ಗಿ, ಅಳ್ಳೊಳ್ಳಿ ಕರದಳ್ಳಿ ಹಾಗೂ ಕಡಬೂರು ಗ್ರಾಮಗಳಲ್ಲಿ ಕಪ್ಪು ಮಿಶ್ರಿತ ಭೂಮಿ ಇದ್ದು, ಹಸಿ ತೇವಾಂಶ ಸಮಸ್ಯೆ ಕಾಡುತ್ತಿದೆ. ಮಳೆ ಇದೆ ರೀತಿ ಮುಂದುವರಿದರೆ ಸಮಸ್ಯೆ ಮತ್ತಷ್ಟು ಉಲ್ಬಣಿಸಲಿದೆ. ನೀರು ಬಸಿದು ಹೋಗುವ ಮಸಾರಿ ಜಮೀನುಗಳಲ್ಲಿ ಬಿತ್ತಿರುವ ತೊಗರಿಗೂ ಸಹ ಆಪತ್ತು ಎದುರಾಗಲಿದೆ ಎಂಬುದು ರೈತರ ಚಿಂತೆಗೆ ಕಾರಣವಾಗಿದೆ.

ADVERTISEMENT

ಜೂನ್, ಜುಲೈ ತಿಂಗಳಿನಲ್ಲಿ ಬಿತ್ತಿರುವ ತೊಗರಿ ಈಗ 60– 70 ದಿನಗಳ ಬೆಳೆ ಇದ್ದು, ಕೆಲವು ಕಡೆ ಹೂವು ಬಿಡುವ ಹಂತದಲ್ಲಿದೆ. ಉಳಿದ ಕಡೆ ಬೆಳವಣಿಗೆ ಹಂತದಲ್ಲಿದೆ. ಸತತ ಮಳೆಯಿಂದ ಬೆಳೆಗಳ ಮಧ್ಯೆ ಕಳೆ ಯಥೇಚ್ಚವಾಗಿ ಬೆಳೆದು ನಿಂತಿದೆ. ತೊಗರಿ ಮಧ್ಯೆ ಅಂತರ ಬೆಳೆಯಾಗಿ ಹೆಸರು ಬಿತ್ತಿದ್ದ ಹಲವು ರೈತರು, ಹೆಸರು ರಾಶಿ ನಂತರ ಜಮೀನು ಸ್ವಚ್ಚಗೊಳಿಸಲು ಮಳೆ ಅವಕಾಶ ನೀಡುತ್ತಿಲ್ಲ ಎಂದು ಹಲಬುತ್ತಿದ್ದಾರೆ.

ತೊಗರಿ ಬಿತ್ತಿರುವ ಜಮೀನು ಕಳೆಗಳಿಂದ ಮುಕ್ತವಾಗಿರಬೇಕು. ಕಾಲಕಾಲಕ್ಕೆ ಎಡೆಕುಂಟೆ ಹೊಡೆದು ಸ್ವಚ್ಚಗೊಳಿಸಬೇಕು. ಮಳೆ ಅವಕಾಶ ನೀಡುತ್ತಿಲ್ಲ ಎನ್ನುತ್ತಾರೆ ರೈತರು.

ನಾಲವಾರ ವಲಯದಲ್ಲಿ 14,500 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಲಾಗಿದೆ. ಜಿಆರ್‌ಜಿ– 811 ಜಿಆರ್ ಹಾಗೂ ಟಿಎಸ್‌3ಆರ್ ಹೆಸರಿನ ತಳಿಗಳನ್ನು ನಾಲವಾರ ರೈತ ಸಂಪರ್ಕ ಕೇಂದ್ರದಲ್ಲಿ ವಿತರಿಸಲಾಗಿದ್ದು, ನೆಟೆ ರೋಗ ನಿರೋಧಕ ಸಾಮರ್ಥ್ಯ ಹೊಂದಿದೆ ಎನ್ನುತ್ತಾರೆ ಕೃಷಿ ಅಧಿಕಾರಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.