ADVERTISEMENT

ಇರಾನಿ ಕಪ್‌ ಕ್ರಿಕೆಟ್‌ ಟೂರ್ನಿ ನಾಳೆಯಿಂದ

ಜ.17ರಿಂದ 28ರವರೆಗೆ ನಡೆಯಲಿರುವ ಟೂರ್ನಿ; 12 ತಂಡಗಳು ಭಾಗಿ

​ಪ್ರಜಾವಾಣಿ ವಾರ್ತೆ
Published 16 ಜನವರಿ 2026, 6:53 IST
Last Updated 16 ಜನವರಿ 2026, 6:53 IST
ಕಲಬುರಗಿಯಲ್ಲಿ ನೆವಿಲ್‌ ಹೋಮಿ ಇರಾನಿ ಕಪ್‌ ಕ್ರಿಕೆಟ್ ಟೂರ್ನಿಯ ಟ್ರೋಫಿಗಳನ್ನು ಗುರುವಾರ ಅನಾವರಣಗೊಳಿಸಲಾಯಿತು
ಕಲಬುರಗಿಯಲ್ಲಿ ನೆವಿಲ್‌ ಹೋಮಿ ಇರಾನಿ ಕಪ್‌ ಕ್ರಿಕೆಟ್ ಟೂರ್ನಿಯ ಟ್ರೋಫಿಗಳನ್ನು ಗುರುವಾರ ಅನಾವರಣಗೊಳಿಸಲಾಯಿತು   

ಕಲಬುರಗಿ: ನೂತನ ವಿದ್ಯಾಲಯ ಸಂಸ್ಥೆಯ ಮಾಜಿ ವಿದ್ಯಾರ್ಥಿಗಳ ಸಂಘದಿಂದ ಜನವರಿ 17ರಿಂದ 28ರವರೆಗೆ ‘ನೆವಿಲ್ ಹೋಮಿ ಇರಾನಿ ಕಪ್‌’ ನೂತನ ಪ್ರಿಮಿಯರ್‌ ಲೀಗ್‌ ಟಿ20 ಕ್ರಿಕೆಟ್‌ ಟೂರ್ನಿ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಗಿರೀಶ ಗಲಗಲಿ ಹೇಳಿದರು.

‘ನಗರದ ಎನ್‌.ವಿ. ಮೈದಾನದಲ್ಲಿ ಪಂದ್ಯಗಳು ನಡೆಯಲಿದ್ದು, ಟೂರ್ನಿಯಲ್ಲಿ 12 ಪುರುಷರ ತಂಡಗಳು ಹಾಗೂ ಮೂರು ವನಿತೆಯರ ತಂಡಗಳು ಪಾಲ್ಗೊಳ್ಳಲಿವೆ’ ಎಂದು ನಗರದ ನೂತನ ವಿದ್ಯಾಲಯ ಸಂಸ್ಥೆಯ ಸಭಾಂಗಣದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

‘ಕೆಎಸ್‌ಸಿಎ ನಿಯಮಾವಳಿಯಂತೆ ಟಿ–20 ಮಾದರಿಯಲ್ಲಿ ನಿತ್ಯ ಎರಡು ಪಂದ್ಯಗಳು ಜರುಗಲಿವೆ. ಬೆಳಿಗ್ಗೆ 9 ಗಂಟೆಗೆ ಮೊದಲ ಹಾಗೂ ಮಧ್ಯಾಹ್ನ 1 ಗಂಟೆ ಎರಡನೇ ಪಂದ್ಯ ನಡೆಯಲಿದೆ. 12 ತಂಡಗಳನ್ನು ನಾಲ್ಕು ಗುಂಪುಗಳಲ್ಲಿ ವಿಂಗಡಿಸಲಾಗಿದ್ದು, ಪ್ರತಿಯೊಂದು ತಂಡವು ತಲಾ ಎರಡು ಲೀಗ್‌ ಪಂದ್ಯಗಳನ್ನಾಡಲಿದೆ. ಬಳಿಕ ಕ್ವಾರ್ಟರ್‌ ಫೈನಲ್‌, ಸೆಮಿಫೈನಲ್‌ ಹಾಗೂ ಫೈನಲ್‌ ಪಂದ್ಯಗಳು ನಡೆಯಲಿವೆ’ ಎಂದು ವಿವರಿಸಿದರು.

ADVERTISEMENT

‘ಪುರುಷರ ವಿಭಾಗದ ಚಾಂಪಿಯನ್ ತಂಡಕ್ಕೆ ₹1 ಲಕ್ಷ ನಗದು ಹಾಗೂ ಟ್ರೋಫಿಯನ್ನು ಬಹುಮಾನವಾಗಿ ನೀಡಲಾಗುವುದು. ರನ್ನರ್ಸ್‌ಅಪ್‌ ತಂಡಕ್ಕೆ ₹75 ಸಾವಿರ ಬಹುಮಾನ ಹಾಗೂ ಟ್ರೋಫಿ ಸಿಗಲಿದೆ. ಮಹಿಳಾ ವಿಭಾಗದಲ್ಲಿ ಚಾಂಪಿಯನ್‌ ತಂಡಕ್ಕೆ ₹25 ಸಾವಿರ ಹಾಗೂ ಟ್ರೋಫಿ ಹಾಗೂ ರನ್ನರ್ಸ್‌ಅಪ್‌ ತಂಡಕ್ಕೆ ₹15 ಸಾವಿರ ಹಾಗೂ ಟ್ರೋಫಿ ದೊರೆಯಲಿದೆ. ಇದಲ್ಲದೇ, ಬೆಸ್ಟ್‌ ಬೌಲರ್‌, ಬೆಸ್ಟ್‌ ಬ್ಯಾಟ್ಸ್‌ಮನ್‌, ಮ್ಯಾನ್‌ ಆಪ್‌ ದಿ ಸಿರೀಸ್‌ ಸೇರಿ ಹಲವು ಬಹುಮಾನಗಳು ಇರಲಿವೆ’ ಎಂದರು.

‘ಟೂರ್ನಿಯಲ್ಲಿ ಕೆಎಸ್‌ಸಿಎ ನಿಯಮಾವಳಿಯಂತೆ ಶ್ವೇತವರ್ಣದ ಲೆದರ್‌ ಬಾಲ್‌ ಬಳಸಲಾಗುವುದು. ಅಂಪೈರ್‌ಗಳು ಹಾಗೂ ಸ್ಕೋರರ್‌ ಸೇರಿ 15 ಮಂದಿ ತಂಡ ಟೂರ್ನಿಗೆ ನೆರವಾಗಲಿದೆ.

ತಂಡಗಳ ವಿವರ:

ಪುರುಷರ ವಿಭಾಗದಲ್ಲಿ ಕಲಬುರಗಿ ಜಿಲ್ಲೆಯ ಎನ್‌.ವಿ.ಪದವಿ ಕಾಲೇಜು, ಗ್ಯಾಲಕ್ಸಿ ಕ್ರಿಕೆಟ್‌ ಕ್ಲಬ್‌, ಎನ್‌.ವಿ.ಜಿಮ್ಖಾನಾ ಕ್ರಿಕೆಟ್‌ ಕ್ಲಬ್‌, ಜೇವರ್ಗಿ ತಂಡ, ಎಚ್‌ಕೆಸಿಸಿ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ತಂಡ, ಸರ್ಕಾರಿ ನೌಕರರ ಸಂಘದ ತಂಡ, ಮಾಣಿಕ್‌ ಸ್ಪೋರ್ಟ್ಸ್‌ ಅಕಾಡೆಮಿ, ಕೊಪ್ಪಳ ಸೋಷಿಯಲ್ಸ್‌ ತಂಡ, ಸೌಥ್‌ ಸೋಲಾಪುರ ಆಪ್ಟ್‌ ಗ್ರೂಪ್‌ ಹಾಗೂ ಬಾಗಲಕೋಟೆ ಕ್ರಿಕೆಟ್ ಕ್ಲಬ್‌ ತಂಡಗಳು ಪಾಲ್ಗೊಳ್ಳಲಿವೆ. ಮಹಿಳಾ ತಂಡದಲ್ಲಿ ಕಲಬುರಗಿಯ ತಂಡ, ಯಾದಗಿರಿಯ ತಂಡ ಹಾಗೂ ಶಿವಮೊಗ್ಗದ ತಂಡಗಳು ಸೆಣಸಾಟ ನಡೆಸಲಿವೆ. ಎಲ್ಲ ತಂಡಗಳಿಗೂ ವಿವಿಧ ಪ್ರಾಯೋಜಕರ ನೆರವಿನೊಂದಿಗೆ ಅವರಿಗೆ ಜರ್ಸಿ, ಊಟ, ವಸತಿ ಸೌಲಭ್ಯ ಕಲ್ಪಿಸಲಾಗಿದೆ ಎಂದು ಗಲಗಲಿ ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಸುಹಾಸ ಖಣಗೆ, ಸದಾಶಿವ ಜಿಡಗೇಕರ, ಪ್ರಲ್ಹಾದ ‍ಪೂಜಾರಿ, ರಾಮ ಶಾನುಭೋಗ, ಅನಂತ ಗುಡಿ ಸೇರಿದಂತೆ ಹಲವರು ಇದ್ದರು.

ಮಾಜಿ ವಿದ್ಯಾರ್ಥಿಗಳ ಸಂಘವು ಶಿಕ್ಷಣ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದೆ. ‘ವಿದ್ಯಾ ಪೋಷಣ ನಿಧಿ’ ಸ್ಥಾಪಿಸಿ ಅದರ ಬಡ್ಡಿಯಲ್ಲಿ ಬಡ ಮಕ್ಕಳ ಶಾಲಾ ಶುಲ್ಕ ಭರಿಸಲಾಗುತ್ತಿದೆ
ಗಿರೀಶ ಗಲಗಲಿ ನೂತನ ವಿದ್ಯಾಲಯ ಸಂಸ್ಥೆಯ ಮಾಜಿ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ
ಎನ್‌ವಿ ಸಂಸ್ಥೆಯಲ್ಲಿ 2026–27ನೇ ಶೈಕ್ಷಣಿಕ ವರ್ಷದಿಂದ ಬಿಎ ಬಿ.ಇಡಿ ಬಿಎಸ್ಸಿ ಬಿ.ಇಡಿ ನಾಲ್ಕು ವರ್ಷಗಳ ಇಂಟಿಗ್ರೆಟೆಡ್‌ ಕೋರ್ಸ್‌ ಪರಿಚಯಿಸಲಾಗುತ್ತಿದೆ
ಅಭಿಜಿತ್ ದೇಶಮುಖ ಎನ್‌ವಿ ಸೊಸೈಟಿ ಕಾರ್ಯದರ್ಶಿ

‘ಉದ್ಘಾಟನೆ 17ಕ್ಕೆ ಫೈನಲ್‌ 28ಕ್ಕೆ’

‘ಜನವರಿ 17ರಂದು ಬೆಳಿಗ್ಗೆ 8 ಗಂಟೆಗೆ ಟೂರ್ನಿಯ ಉದ್ಘಾಟನೆ ನಡೆಯಲಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಹೆಚ್ಚುವರಿ ಆಯುಕ್ತ ರಾಹುಲ್ ಪಾಂಡ್ವೆ ಹಾಗೂ ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂದೆ ಟೂರ್ನಿಯ ಪ್ರಧಾನ ಪ್ರಾಯೋಜಕ ನೌಷದ್‌ ನೆವಿಲ್ ಇರಾನಿ ಗೌತಮ ಜಹಗೀರದಾರ್‌ ಸೇರಿದಂತೆ ಹಲವರು ಪಾಲ್ಗೊಳ್ಳುವರು’ ಎಂದು ಗಿರೀಶ ಗಲಗಲಿ ತಿಳಿಸಿದರು. ‘ಜನವರಿ 28ರಂದು ಫೈನಲ್‌ ಪಂದ್ಯಗಳು ಹಾಗೂ ಟ್ರೋಫಿ ವಿತರಣಾ ಸಮಾರಂಭ ಜರುಗಲಿದೆ. ಅಂದು ಬೆಳಿಗ್ಗೆ ಮೊದಲಿಗೆ ಮಹಿಳಾ ಫೈನಲ್‌ ಪಂದ್ಯ ನಡೆಯಲಿದೆ. ಮಧ್ಯಾಹ್ನ ಪುರುಷರ ತಂಡದ ಫೈನಲ್‌ ಪಂದ್ಯ ಜರುಗಲಿದೆ. ಬಳಿಕ ಬಹುಮಾನ ವಿತರಣೆ ಸಮಾರಂಭ ನಡೆಯಲಿದೆ’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.