ADVERTISEMENT

ತಾರತಮ್ಯ ನಿವಾರಣೆಗೆ 14 ಹೊಸ ಬಿಇಒ: ಕಲಬುರಗಿ ವಿಭಾಗದಿಂದ ಪ್ರಸ್ತಾವಕ್ಕೆ ಸಿದ್ಧತೆ

ಮಲ್ಲಿಕಾರ್ಜುನ ನಾಲವಾರ
Published 15 ಮೇ 2025, 5:31 IST
Last Updated 15 ಮೇ 2025, 5:31 IST
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕಲಬುರಗಿ ವಿಭಾಗೀಯ ಕಚೇರಿ
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕಲಬುರಗಿ ವಿಭಾಗೀಯ ಕಚೇರಿ   

ಕಲಬುರಗಿ: ಪ್ರಾಥಮಿಕ ಶಾಲಾ ಹಂತದಿಂದಲೇ ವಿದ್ಯಾರ್ಥಿಗಳಿಗೆ ಉತ್ತಮ ಕಲಿಕಾ ಅಡಿಪಾಯ, ಶಿಕ್ಷಕರ ಬೋಧನಾ ಚಟುವಟಿಕೆಗಳ ಮೇಲೆ ನಿಗಾ ಮತ್ತು ಮೇಲ್ವಿಚಾರಣೆಯ ಸರಳೀಕರಣ, ತಾರತಮ್ಯ ನಿವಾರಣೆಗಾಗಿ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಹೊಸದಾಗಿ 14 ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸ್ಥಾಪನೆಯ ಪ್ರಸ್ತಾವ ಸಿದ್ಧವಾಗುತ್ತಿದೆ.

ರಾಜ್ಯದ ಅನ್ಯ ವಿಭಾಗಗಳಿಗೆ ಹೋಲಿಸಿದರೆ ಅತಿ ಕಡಿಮೆ ಬಿಇಒಗಳು ಕಲಬುರಗಿ ವಿಭಾಗದಲ್ಲಿವೆ. ಬೆಳಗಾವಿ ವಿಭಾಗದಲ್ಲಿ 59, ಬೆಂಗಳೂರು ವಿಭಾಗದಲ್ಲಿ 58 ಮತ್ತು ಮೈಸೂರು ವಿಭಾಗದಲ್ಲಿ 54 ಬಿಇಒ ಕಚೇರಿಗಳಿವೆ. ಆದರೆ, ಕಲಬುರಗಿ ವ್ಯಾಪ್ತಿಯಲ್ಲಿ 34 ಕಚೇರಿಗಳಿದ್ದು, ಅವುಗಳಲ್ಲಿ 20ರಿಂದ 25 ಬಿಇಒಗಳಲ್ಲಿ ಮಾತ್ರ ಅಧಿಕಾರಿಗಳಿರುತ್ತಾರೆ. ಕರ್ತವ್ಯ ಲೋಪದಂತಹ ನಡೆಯಿಂದಾಗಿ ಕೆಲವರು ಅಮಾನತು, ಇಲಾಖೆಯ ವಿಚಾರಣೆ ಎದುರಿಸುತ್ತಿರುತ್ತಾರೆ. ಹೀಗಾಗಿ, ಆರೇಳು ಹುದ್ದೆಗಳು ಸದಾ ಖಾಲಿ ಇರುತ್ತವೆ.

ಅನ್ಯ ವಿಭಾಗಗಳ ಸರಿಸಮನ ತಲುಪಲು, ಫಲಿತಾಂಶ ಸುಧಾರಣೆ ಹಾಗೂ ಮೇಲ್ವಿಚಾರಣೆಯನ್ನು ಸರಳೀಕರಣ ಮಾಡಲು ಕಲಬುರಗಿ ವಿಭಾಗದ ಹೆಚ್ಚುವರಿ ಆಯುಕ್ತ ಡಾ.ಆಕಾಶ ಶಂಕರ್ ಅವರು ಹೊಸ ಬಿಇಒಗಳ ಪ್ರಸ್ತಾಪವನ್ನು ಶಿಕ್ಷಣ ಇಲಾಖೆಯ ಮುಂದೆ ಇರಿಸಲು ಸಜ್ಜು ಮಾಡಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ಎಲ್ಲ ಜಿಲ್ಲೆಗಳಿಂದ ಪೂರಕ ಮಾಹಿತಿಯನ್ನು ತರಿಸಿಕೊಳ್ಳುತ್ತಿದ್ದಾರೆ.

ADVERTISEMENT

ಕಚೇರಿ ಸ್ಥಾಪನೆಗೆ ಬೇಕಾದ ಸಂಪನ್ಮೂಲಗಳ ನೆರವು ಪಡೆಯಲು ಈಚೆಗೆ ನಡೆದ ಕೆಕೆಆರ್‌ಡಿಬಿ ಸಭೆಯಲ್ಲಿಯೂ ಈ ಬಗ್ಗೆ ಅಂಕಿಅಂಶಗಳ ಸಮೇತ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಸಭೆಯಲ್ಲಿ ಪಾಲ್ಗೊಂಡಿದ್ದ ಸಚಿವರು, ಶಾಸಕರು ಹೊಸ ಬಿಇಒ ಕಚೇರಿಗಳಿಗೆ ಸಹಮತ ವ್ಯಕ್ತಪಡಿಸಿದ್ದಾರೆ. 

ಬಿಇಒ ಕಚೇರಿಗಳ ವ್ಯಾಪ್ತಿ ಕಿರಿದಾದಷ್ಟು ಮೇಲ್ವಿಚಾರಣೆ ಮತ್ತು ಆಡಳಿತ ಸುಲಭವಾಗುತ್ತದೆ. ಶಾಲೆಯ ಪ್ರತಿಯೊಂದು ಚಟುವಟಿಕೆಗಳ ಮೇಲೆ ನಿಗ ಇರಿಸಬಹುದು, ಹೊಸ ಕಲಿಕಾ ತಂತ್ರಗಳನ್ನೂ ಅನುಷ್ಠಾನಕ್ಕೂ ತರಬಹುದು ಎನ್ನುತ್ತಾರೆ ಅಧಿಕಾರಿಗಳು.

ಬೀದರ್‌ ಜಿಲ್ಲೆಯಲ್ಲಿ ಚಿಟಗುಪ್ಪ ಮತ್ತು ಕಮಲನಗರ, ಕಲಬುರಗಿಯಲ್ಲಿ ಕಾಳಗಿ, ಕಮಲಾಪುರ ಮತ್ತು ಯಡ್ರಾಮಿ, ಯಾದಗಿರಿಯಲ್ಲಿ ಗುರುಮಠಕಲ್ ಮತ್ತು ಹುಣಸಗಿ, ರಾಯಚೂರಲ್ಲಿ ಅರಕೇರಾ, ಮಸ್ಕಿ ಮತ್ತು ಸಿರವಾರ, ಕೊಪ್ಪಳದಲ್ಲಿ ಕಾರಟಗಿ ಮತ್ತು ಕುಕನೂರು, ಬಳ್ಳಾರಿಯಲ್ಲಿ ಕುರುಗೋಡು ಹಾಗೂ ವಿಜಯನಗರದ ಕೊಟ್ಟೂರಿನಲ್ಲಿ ಹೊಸ ಬಿಒಇ ಸ್ಥಾಪನೆಗೆ ಕಲಬುರಗಿ ವಿಭಾಗ ಮುಂದಾಗಿದೆ.

ಶಿಕ್ಷಣ ಇಲಾಖೆಯು 14 ಹೊಸ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗಳ ಸ್ಥಾಪನೆ ಅನುಮೋದನೆ ನೀಡಿದರೆ ಕಟ್ಟಡ ನಿರ್ಮಾಣಕ್ಕೆ ಬೇಕಾದ ಅನುದಾನವನ್ನು ಕೆಕೆಆರ್‌ಡಿಬಿಯಿಂದ ಪಡೆಯಲಾಗುವುದು. ಹೊಸ ನೇಮಕಾತಿಗಳ ಮೊರೆ ಹೋಗದೆ ವಿಭಾಗದ ಡಯಟ್‌ನಲ್ಲಿ ಇರುವ ಹುದ್ದೆಗಳು, ಈಗಿರುವ ಕಚೇರಿಗಳಲ್ಲಿನ ಕೆಳ ಹಂತದ ನೌಕರರನ್ನು ಹಂಚಿಕೆ ಮಾಡಿಕೊಂಡು ಕಚೇರಿಗಳನ್ನು ನಡೆಸಲಾಗುವುದು ಎನ್ನುತ್ತಾರೆ ಕಲಬುರಗಿ ವಿಭಾಗದ ಅಧಿಕಾರಿಗಳು.

ಎಂ. ಸುಂದರೇಶ ಬಾಬು
ಹೊಸ ಬಿಇಒ ಕಚೇರಿ ಸಂಬಂಧ ಕಲಬುರಗಿ ವಿಭಾಗದ ಅಧಿಕಾರಿಗಳು ಏನು ಪ್ರಸ್ತಾವನೆ ಸಲ್ಲಿತ್ತಾರೆ ಎಂಬುದನ್ನು ನೋಡಿಕೊಂಡು ಮುಂದುವರೆಯುತ್ತೇವೆ
ಎಂ.ಸುಂದರೇಶ ಬಾಬು ಕೆಕೆಆರ್‌ಡಿಬಿ ಕಾರ್ಯದರ್ಶಿ
‘ಮಾಹಿತಿ ತರಿಸಿಕೊಂಡು ಪ್ರಸ್ತಾವ ಸಲ್ಲಿಕೆ’
‘ಬಿಇಒ ಕಚೇರಿ ಸ್ಥಾಪನೆಗೆ ಅಗತ್ಯವಾದ ಮಾಹಿತಿಯನ್ನು ನೀಡುವಂತೆ ಎಲ್ಲಾ ಜಿಲ್ಲೆಗಳಿಗೆ ಸೂಚಿಸಲಾಗಿದೆ. ಅರ್ಥಶಾಸ್ತ್ರಜ್ಞೆ ಛಾಯಾ ದೇಗಾಂವಕರ್‌ ನೇತೃತ್ವದ ಶಿಕ್ಷಣ ತಜ್ಞರ ಸಮಿತಿ ಕೂಡ ಹೊಸ ಬಿಇಒ ಸ್ಥಾಪನೆಗೆ ಒಲವು ತೋರುತ್ತಿದೆ’ ಎಂದು ಕಲಬುರಗಿ ವಿಭಾಗದ ಹೆಚ್ಚುವರಿ ಆಯುಕ್ತ ಡಾ.ಆಕಾಶ ಶಂಕರ್‌ ‘ಪ್ರಜಾವಾಣಿ’ಗೆ ತಿಳಿಸಿದರು. ‘ಬೆಳಗಾವಿ ವಿಭಾಗದಲ್ಲಿ 59 ಬ್ಲಾಕ್‌ಗಳಿದ್ದರೆ ಕಲಬುರಗಿ ವ್ಯಾಪ್ತಿಯಲ್ಲಿ 34 ಬ್ಲಾಕ್‌ಗಳಿವೆ. ಅರ್ಧದಷ್ಟು ಕಚೇರಿಗಳ ಅಂತರವಿದೆ. ಇಂತಹದನ್ನು ಸರಿಪಡಿಸಬೇಕಿದೆ’ ಎಂದರು.
ಡಾ.ಆಕಾಶ್ ಶಂಕರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.