ADVERTISEMENT

ಬೆಂಗಳೂರು–ಕಲಬುರ್ಗಿ ಮಧ್ಯೆ ಅಲಯನ್ಸ್‌ ಏರ್‌ ವಿಮಾನ ಆರಂಭ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2019, 13:29 IST
Last Updated 27 ಡಿಸೆಂಬರ್ 2019, 13:29 IST
ಬೆಂಗಳೂರಿನಿಂದ ಕಲಬುರ್ಗಿ ವಿಮಾನ ನಿಲ್ದಾಣಕ್ಕೆ ಶುಕ್ರವಾರ ಬಂದ ಅಲಯನ್ಸ್‌ ಏರ್‌ ವಿಮಾನಕ್ಕೆ ವಾಟರ್‌ ಸೆಲ್ಯೂಟ್‌ ನೀಡುವ ಮೂಲಕ ಸ್ವಾಗತಿಸಲಾಯಿತು
ಬೆಂಗಳೂರಿನಿಂದ ಕಲಬುರ್ಗಿ ವಿಮಾನ ನಿಲ್ದಾಣಕ್ಕೆ ಶುಕ್ರವಾರ ಬಂದ ಅಲಯನ್ಸ್‌ ಏರ್‌ ವಿಮಾನಕ್ಕೆ ವಾಟರ್‌ ಸೆಲ್ಯೂಟ್‌ ನೀಡುವ ಮೂಲಕ ಸ್ವಾಗತಿಸಲಾಯಿತು   

ಕಲಬುರ್ಗಿ: ಕಲಬುರ್ಗಿ–ಬೆಂಗಳೂರು ಮಧ್ಯೆ ಶುಕ್ರವಾರದಿಂದ ಏರ್‌ ಇಂಡಿಯಾದ ಅಂಗ ಸಂಸ್ಥೆ ಅಲಯನ್ಸ್‌ ಏರ್‌ ವಿಮಾನ ಸಂಚಾರ ಆರಂಭಿಸಿದ್ದು, ವಾರದ ಎಲ್ಲ ದಿನವೂ ಸಂಚಾರ ನಡೆಸಲಿದೆ.

ಬೆಳಿಗ್ಗೆ 9.50ಕ್ಕೆ ಬೆಂಗಳೂರಿನಿಂದ ಹೊರಟು 11.25ಕ್ಕೆ ಕಲಬುರ್ಗಿ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿತ್ತು. ಆದರೆ, ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಜು ಕವಿದಿದ್ದರಿಂದ 11.50ಕ್ಕೆ ಅಲ್ಲಿಂದ ಟೇಕಾಫ್‌ ಆಗಿ ಮಧ್ಯಾಹ್ನ 12.45ಕ್ಕೆ ಕಲಬುರ್ಗಿಯಲ್ಲಿ ಇಳಿಯಿತು.

ಎಟಿಆರ್‌–72 ಮಾದರಿಯ ವಿಮಾನ ನಗರದ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ವಾಟರ್‌ ಸೆಲ್ಯೂಟ್‌ ಮೂಲಕ ಎರಡು ಅಗ್ನಿಶಾಮಕ ದಳದ ವಾಹನಗಳು ವಿಮಾನವನ್ನು ಸ್ವಾಗತಿಸಿದವು.

ADVERTISEMENT

ಅಲಯನ್ಸ್ ಏರ್‌ನ ಮುಖ್ಯ ಪೈಲಟ್ ಎ.ಮಾಕನ್, ಸಹ ಪೈಲಟ್ ಶಾಲು ಅವರು ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಿದರು.ನವೆಂಬರ್‌ 22ರಿಂದ ಸ್ಟಾರ್‌ ಏರ್‌ನ ವಿಮಾನ ವಾರದಲ್ಲಿ ಮೂರು ದಿನ ಹಾರಾಟ ನಡೆಸುತ್ತಿದೆ.

ಅಲಯನ್ಸ್ ಏರ್ ಸಂಸ್ಥೆಯ ಈ ವಿಮಾನ ಮಂಗಳವಾರ ಹೊರತುಪಡಿಸಿ ಉಳಿದ ಆರು ದಿನ ಮೈಸೂರಿನಿಂದ ಬೆಳಿಗ್ಗೆ 8.30ಕ್ಕೆ ಹೊರಟು 9.10ಕ್ಕೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲಿದೆ. ಇದೇ ವಿಮಾನ ಬೆಂಗಳೂರಿನಿಂದ 9.50ಕ್ಕೆ ಹೊರಟು 11.25ಕ್ಕೆ ಕಲಬುರ್ಗಿ ತಲುಪಲಿದೆ.

ಕಲಬುರ್ಗಿಯಿಂದ ಬೆಳಿಗ್ಗೆ 11.50ಕ್ಕೆ ಹೊರಟು ಮಧ್ಯಾಹ್ನ 1.30ಕ್ಕೆ ಬೆಂಗಳೂರು ತಲುಪಲಿದೆ. ಬೆಂಗಳೂರಿನಿಂದ ಮಧ್ಯಾಹ್ನ 2ಕ್ಕೆ ಹೊರಟು 2.50ಕ್ಕೆಮೈಸೂರು ತಲುಪಲಿದೆ.

ಪ್ರತಿ ಮಂಗಳವಾರ ಮೈಸೂರಿನಿಂದ ಬೆಳಿಗ್ಗೆ 10.25ಕ್ಕೆ ಹೊರಟು 11.05ಕ್ಕೆ ಬೆಂಗಳೂರು ತಲುಪಲಿದೆ. ಬೆಂಗಳೂರಿನಿಂದ 11.40ಕ್ಕೆ ಹೊರಟು ಕಲಬುರ್ಗಿಗೆ ಮಧ್ಯಾಹ್ನ 1.20ಕ್ಕೆ ಬರಲಿದೆ. ಕಲಬುರ್ಗಿಯಿಂದ ಮಧ್ಯಾಹ್ನ 1.45ಕ್ಕೆ ಹೊರಟು 3.25ಕ್ಕೆ ಬೆಂಗಳೂರು ತಲುಪಲಿದೆ. ಬೆಂಗಳೂರಿನಿಂದ 3.45ಕ್ಕೆ ಹೊರಟು ಮೈಸೂರಿಗೆ ಸಂಜೆ 4.40ಕ್ಕೆ ತಲುಪಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.