ADVERTISEMENT

ಪತ್ರಿಕಾ ವಿತರಕರ ದಿನ: ‘ವರ್ತಮಾನ’ ಹೊತ್ತು ತರುವ ಯೋಧರು

ಬಸೀರ ಅಹ್ಮದ್ ನಗಾರಿ
Published 4 ಸೆಪ್ಟೆಂಬರ್ 2025, 6:34 IST
Last Updated 4 ಸೆಪ್ಟೆಂಬರ್ 2025, 6:34 IST
ಕಲಬುರಗಿಯ ಕೆಕೆಸಿಸಿಐ ಕಚೇರಿ ಬಳಿ ಬೆಳಂಬೆಳಿಗ್ಗೆ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆಗಳನ್ನು ಹೊಂದಿಸಿಕೊಳ್ಳುವಲ್ಲಿ ನಿರತರಾದ ಪತ್ರಿಕಾ ವಿತರಕರು –ಪ್ರಜಾವಾಣಿ ಚಿತ್ರಗಳು: ತಾಜುದ್ದೀನ್ ಆಜಾದ್‌
ಕಲಬುರಗಿಯ ಕೆಕೆಸಿಸಿಐ ಕಚೇರಿ ಬಳಿ ಬೆಳಂಬೆಳಿಗ್ಗೆ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆಗಳನ್ನು ಹೊಂದಿಸಿಕೊಳ್ಳುವಲ್ಲಿ ನಿರತರಾದ ಪತ್ರಿಕಾ ವಿತರಕರು –ಪ್ರಜಾವಾಣಿ ಚಿತ್ರಗಳು: ತಾಜುದ್ದೀನ್ ಆಜಾದ್‌   

ಕಲಬುರಗಿ: ಮಹಾನಗರವೆಲ್ಲ ಇನ್ನೂ ಕತ್ತಲೆ ಹೊದ್ದು ಮಲಗಿರುತ್ತೆ. ನಾಗರಿಕರೆಲ್ಲ ಸವಿನಿದ್ದೆಯಲ್ಲಿ ಗೊರಕೆ ಹೊಡೆಯುವ ಹೊತ್ತು. ಆದರೆ, ನಗರದ ಕೆಲವು ತಾಣಗಳಲ್ಲಿ ಮಾತ್ರ ವಿಪರೀತ ಗಡಿಬಿಡಿ. ಯುವಕರು, ವೃದ್ಧರು ಬಂಡಲ್‌ ಹೊಂದಿಸುವಲ್ಲಿ ಬ್ಯುಸಿ. ಪಟಪಟನೆ ದಿನಪತ್ರಿಕೆಗಳನ್ನು ಲೆಕ್ಕಹಾಕಿ, ಒಪ್ಪವಾಗಿ ಜೋಡಿಸಿ, ಸೈಕಲ್‌–ಬೈಕ್‌ಗಳ ಹೆಗಲೇರಿಸುತ್ತಿರುತ್ತಾರೆ. ಆಗಸದಲ್ಲಿ ಬೆಳಕು ಮೂಡಿ, ಜನರು ಎದ್ದೇಳುವ ಮುನ್ನ ಸೈಕಲ್‌, ಬೈಕ್‌–ಸ್ಕೂಟರ್‌ಗಳ ಮೇಲೆ ಏರಿಸಿದ ಭಾರ ಇಳಿಸಿಕೊಳ್ಳುವ ಧಾವಂತ ಅವರದು. ಇಲ್ಲದಿದ್ದರೆ ವಾಕಿಂಗ್‌ ಮುಗಿಸಿ ಬರುವ, ಎದ್ದು ಚಹಾ–ಕಾಫಿ ಹೀರುವ ಹೊತ್ತಿಗೆ ಪೇಪರ್‌ ಹೇಗೆ ಸಿಗುತ್ತೆ?

ಇದು ಪತ್ರಿಕಾ ವಿತರಕರ ನಿತ್ಯ ಪ್ರಪಂಚದ ನೋಟ. ಮೂಡಣದಲ್ಲಿ ಸೂರ್ಯ ಮೂಡಲಿ ಬಿಡಲಿ, ಈ ಕಾಯಕ ಜೀವಿಗಳ ಕೆಲಸಕ್ಕೆ ಮಾತ್ರ ಬಿಡುವಿಲ್ಲ. ಗಾಳಿ ಬೀಸುತ್ತಿರಲಿ, ಮಳೆ ಸುರಿಯುತ್ತಿರಲಿ, ಇಲ್ಲವೇ ಚಳಿ ಮುತ್ತುತ್ತಿರಲಿ. ಇವರ ಕೆಲಸ ಮಾತ್ರ ನಿಲ್ಲುವುದಿಲ್ಲ. ಓದುಗರು ಹಾಗೂ ಸುದ್ದಿಮನೆಗಳ ನಡುವೆ ಕೊಂಡಿಯಾಗಿ ಪತ್ರಿಕಾ ವಿತರಕರು ಕೆಲಸ ಮಾಡುತ್ತಾರೆ.

ನಾವೆಲ್ಲ ನಸುಕಿನ ಸವಿನಿದ್ದೆಯಲ್ಲಿ ಇರುವಾಗಲೇ ಅವರನ್ನು ‘ಕರ್ತವ್ಯ’ ಎಚ್ಚರಿಸಿ ಬಿಡುತ್ತೆ. ಬೆಳಿಗ್ಗೆ 4 ಗಂಟೆ ಹೊತ್ತಿಗೆಲ್ಲ ಅವರು ಸೈಕಲ್‌, ಬೈಕ್‌–ಸ್ಕೂಟರ್‌ಗಳೇರಿ ಮನೆಗಳಿಂದ ಹೊರಟು ನಿಗದಿತ ಜಾಗ ಸೇರುತ್ತಾರೆ.

ADVERTISEMENT

ಅಷ್ಟೊತ್ತಿಗೆಲ್ಲ ಸುದ್ದಿ ಮನೆಗಳಲ್ಲಿ ಸಿದ್ಧವಾಗಿ ಮುದ್ರಣಾಲಯಲ್ಲಿ ಪ್ರಿಂಟ್‌ ಆದ ಪತ್ರಿಕೆಗಳ ಬಂಡಲ್‌ಗಳನ್ನು ವಾಹನಗಳು ‘ಧೊಪ್ಪ–ಧೊಪ್ಪ’ವೆಂದು ಬಿಸಾಡಿ ಹೋಗಿರುತ್ತವೆ. ಆ ಬಂಡಲ್‌ಗಳನ್ನು ಒಡೆದು, ಅದರಲ್ಲಿರುವ ಬರುವ ಪತ್ರಿಕೆಗಳನ್ನು ಒಪ್ಪವಾಗಿ ಪೇರಿಸಿಕೊಂಡು ಹಂಚಲು ಅವರೆಲ್ಲ ಅಣಿಯಾಗುತ್ತಾರೆ. ತಮ್ಮಲ್ಲಿನ ಕೊನೆಯ ಪತ್ರಿಕೆಯನ್ನು ಓದುಗರ ಮನೆಗೆ ‘ಧೊಪ್’ ಎಂದು ಹಾಕಿದಾಗಲೇ ಅವರಿಗೆ ನೆಮ್ಮದಿ. ತಿಂಡಿ ತಿಂದು ಅಲ್ಲಲ್ಲಿ ಬಿಲ್‌ ಸಂಗ್ರಹಿಸಿದ ಬಳಿಕವೇ ಒಂದಿಷ್ಟು ವಿಶ್ರಾಂತಿ.

ಪೇಪರ್‌ ಹಾಕುವುದು ಕೆಲವೇ ತಾಸುಗಳ ಪಾರ್ಟ್‌ಟೈಂ ಕೆಲಸ ಎನಿಸಿದರೂ ಪತ್ರಿಕಾ ವಿತರಕರು ತಮ್ಮ ಕೆಲಸವನ್ನು ಇನ್ನಿಲ್ಲದಂತೆ ಪ್ರೀತಿಸುತ್ತಾರೆ. ಕೋವಿಡ್‌ ಆವರಿಸಿದಾಗ ದೇಶದಲ್ಲಿ ಜನ ಮನೆ ಸೇರಿ ಬೀದಿಗಳೆಲ್ಲ ನಿರ್ಜನವೇ ಆಗಿದ್ದವು. ಅಂಥ ಅಂಥ ಸಮಯದಲ್ಲಿ ಹಲವರು ವೃತ್ತಿಗಳನ್ನೇ ಬದಲಿಸಿದ್ದರು. ಆದರೆ, ಪತ್ರಿಕಾ ವಿತರಕರು ಆ ಸವಾಲು ಧೈರ್ಯದಿಂದ ಮೀರಿ ನಿಂತರು. ಕೋವಿಡ್‌ ವಾರಿಯರ್‌ಗಳೆಂಬ ಮೆಚ್ಚುಗೆಗೂ ಪಾತ್ರವಾಗಿದ್ದು ಈಗ ಇತಿಹಾಸ.

ಕೋವಿಡ್‌ ಇಲ್ಲದಿದ್ದರೂ, ಮಳೆ–ಚಳಿ, ಬೀದಿ ನಾಯಿಗಳ ಕಾಟ, ಕೆಸರು ತುಂಬಿದ ರಸ್ತೆಗಳಂಥ ಹಲವು ಸವಾಲುಗಳನ್ನು ನಿತ್ಯ ಎದುರಿಸುತ್ತ ನಿತ್ಯ ಮನೆ–ಮನೆಗೆ ಜ್ಞಾನದ ಹೂರಣ ಒಳಗೊಂಡ ಪತ್ರಿಕೆಗಳನ್ನು ಜನರಿಗೆ ತಲುಪಿಸುವ ಈ ಕಾಯಕ ಜೀವಿಗಳಿಗೊಂದು ‘ಸಲಾಂ’.

ಪ್ರಜಾವಾಣಿ ಪತ್ರಿಕೆ ಹಂಚಲು ಸೈಕಲ್‌ ಏರಿ ಹೊರಟ ಪತ್ರಿಕಾ ವಿತರಕ... 

‘ಕ್ಷೇಮ ನಿಧಿ ಸ್ಥಾಪಿಸಲಿ ಪಿಂಚಣಿ ಕೊಡಲಿ’

‘ಪತ್ರಿಕಾ ವಿತರಕರಿಗೆ ಸರ್ಕಾರ ಕ್ಷೇಮನಿಧಿ ಸ್ಥಾಪಿಸಬೇಕು. 70 ವರ್ಷ ಮೀರಿದ ಹಿರಿಯ ಪತ್ರಿಕಾ ವಿತರಕರಿಗೆ ತಿಂಗಳಿಗೆ ₹5 ಸಾವಿರ ಪಿಂಚಣಿ ಕೊಡಬೇಕು. ಪತ್ರಿಕಾ ವಿತರಕರ ಸೇವೆ ಗುರುತಿಸಿ ಜಿಲ್ಲಾ ಹಾಗೂ ತಾಲ್ಲೂಕುಮಟ್ಟದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಪರಿಗಣಿಸಬೇಕು. ತಾತ್ಕಾಲಿಕವಾಗಿ ಸ್ಥಗಿತಗೊಂಡಿರುವ ಸ್ವ–ನಿಧಿ ಯೋಜನೆಯನ್ನು ಪ್ರಾರಂಭಿಸಬೇಕು. ಪತ್ರಿಕಾ ವಿತರಕರ ಪ್ರತಿಭಾನ್ವಿತ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಸರ್ಕಾರ ಆರ್ಥಿಕ ನೆರವು ನೀಡಬೇಕು. ಪತ್ರಿಕೆಗಳನ್ನು ಮನೆ–ಮನೆಗೆ ತಲುಪಿಸಲು ಸರ್ಕಾರ ಸಬ್ಸಿಡಿ ದರದಲ್ಲಿ ಎಲೆಕ್ಟ್ರಾನಿಕ್‌ ಬೈಕ್‌ ಒದಗಿಸಬೇಕು’ ಎನ್ನುತ್ತಾರೆ ಕಲಬುರಗಿ ಜಿಲ್ಲಾ ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ರಮಾಕಾಂತ್ ಜಿಡಗೇಕರ್.

ಪತ್ರಿಕಾ ವಿತರಕರ ಅಂಬೋಣ...

ನಾನು ಮೂಲತಃ ಅನುಕೂಲಸ್ಥೆ. ತಕ್ಕ ಆಸ್ತಿಯೂ ಇದೆ. ಮನೆಯಲ್ಲಿ ಊಟ ಬಡಿಸಿ ಕೊಡುವ ತನಕ ತಿನ್ನುತ್ತಿರಲಿಲ್ಲ. ಅಂಥವಳು ಪತ್ರಿಕಾ ವಿತರಕಿಯಾಗುವೆ ಎಂದಾಗ ಎಲ್ಲರೂ ಆಡಿಕೊಂಡಿದ್ದೇ ಹೆಚ್ಚು. ಆದರೆ ನನ್ನ ನಿರ್ಧಾರ ಅಚಲವಾಗಿತ್ತು. ಧೈರ್ಯದಿಂದ ಪತ್ರಿಕೆ ವಿತರಣೆ ಆರಂಭಿಸಿದೆ. ನನ್ನ ಜಡತ್ವಕ್ಕೆ ಅದು ಮದ್ದು ಅರೆದು ಬದುಕಿಗೆ ಚೈತನ್ಯವೂ ನೀಡಿತು. ನನಗೀಗ ಹೆಮ್ಮೆಯಿದೆ.
ಶಾರದಾ ಪಾಟೀಲ ರಾಮಮಂದಿರ ವೃತ್ತ ಕಲಬುರಗಿ
ಪ್ರಜಾವಾಣಿ’ ಪತ್ರಿಕೆಗೆ ₹1 ಇದ್ದಾಗಿನಿಂದ ಪೇಪರ್‌ ಮಾರುತ್ತಿದ್ದೇನೆ. ಆಕಸ್ಮಿಕವಾಗಿ ಈ ಕ್ಷೇತ್ರಕ್ಕೆ ಬಂದೆ. ‘ಪ್ರಜಾವಾಣಿ’ ಬಿಟ್ಟು ಬೇರೆ ಪೇಪರನ್ನೇ ನಾನು ಮಾರಲ್ಲ. ಐದು ಪೇಪರ್‌ನಿಂದ ಈಗ 35 ಪೇಪರ್‌ಗಳಿಗೆ ಹೆಚ್ಚಿದೆ. 3–4ನೇ ತರಗತಿ ಕಲಿತಿದ್ದ ನನಗೆ ಅಕ್ಷರ ಜ್ಞಾನ ಕೊಟ್ಟಿದ್ದು ಪ್ರಜಾವಾಣಿ ಎನ್ನಬಹುದು.
ಬಸವರಾಜ ಹುಬ್ಬಳ್ಳಿ ಬಿಳವಾರ ಯಡ್ರಾಮಿ ತಾಲ್ಲೂಕು
ಪತ್ರಿಕಾ ವಿತರಣೆ ನನ್ನ ಪಾಲಿಗೆ ಸರ್ಕಾರಿ ಕೆಲಸಕ್ಕೆ ಸಮ. ಸ್ನೇಹಿತನೊಬ್ಬ ಈ ಕ್ಷೇತ್ರಕ್ಕೆ ಪರಿಚಯಿಸಿದ. ಕಳೆದ 20 ವರ್ಷಗಳಲ್ಲಿ ಪ್ರಾಮಾಣಿಕವಾಗಿ ಸೈಕಲ್‌ ಹೊಡೆದಿದ್ದೇನೆ. ಗೌರವಯುತ ಬದುಕಿಗೆ ಅಗತ್ಯವಾದ ಎಲ್ಲವನ್ನೂ ಈ ಕಾಯಕ ಕೊಟ್ಟಿದೆ.
ಪ್ರವೀಣಕುಮಾರ ವಿ.ಕೆ. ಹೊಸ ಜೇವರ್ಗಿ ರಸ್ತೆ ಕಲಬುರಗಿ
ನನ್ನನ್ನೂ ಸೇರಿ ಎಂಟು ಜನರ ತುಂಬು ಕುಟುಂಬ ನನ್ನದು. ನನ್ನ ಬದುಕಿನ ಅಗತ್ಯಗಳನ್ನು ಈ ಕಾಯಕ ಪೂರೈಸಿದೆ. ಈ ಕೆಲಸ ಎಂದಿಗೂ ಬೇಸರವಾಗಿಲ್ಲ. ನಸುಕಿನಲ್ಲೇ ಕರ್ತವ್ಯ ಪ್ರಜ್ಞೆ ಜಾಗೃತಗೊಳಿಸುವ ಚೈತನ್ಯಶೀಲ ಕಾಯಕವಿದು
ಎಂ.ಡಿ.ಫಾರೂಕ್‌ ಕೇಂದ್ರ ಬಸ್‌ನಿಲ್ದಾಣ ಪ್ರದೇಶ ಕಲಬುರಗಿ
ಓದು ಮುಗಿಸಿ ಕೆಲಸ ಹುಡುಕುತ್ತಿದ್ದಾಗ ಈ ಕ್ಷೇತ್ರಕ್ಕೆ ಬಂದೆ. ಬಳಿಕ ಸ್ವಂತ ಲೈನ್‌ ಪಡೆದೆ. ಈಗಲೂ ಇದು ನನ್ನ ಉಪಕುಸುಬಾಗಿ ಬದುಕಿಗೆ ಆಧಾರವಾಗಿದೆ. ಮನೆಯಲ್ಲಿನ ಹಿರಿಯರು ಅಸುನೀಗಿದರೆ ಪತ್ರಿಕೆಯನ್ನೇ ನಿಲ್ಲಿಸುವ ಸ್ಥಿತಿಯಲ್ಲಿ ಯುವಜನರಿದ್ದಾರೆ. ಪತ್ರಿಕೆಯನ್ನು ಕುಟುಂಬದವರೆಲ್ಲೂ ಓದುವಂತಾಗಬೇಕಿದೆ
ಮಲ್ಲಿಕಾರ್ಜುನ ಆಣೂರ ರಾಜಾಪುರ ಪ್ರದೇಶ ಕಲಬುರಗಿ
ಡಿಪ್ಲೊಮಾ ಮುಗಿಸಿ 13 ವರ್ಷಗಳ ಹಿಂದೆ ಈ ಕ್ಷೇತ್ರಕ್ಕೆ ಬಂದೆ. ಆಗ ಬರೀ ಸೈಕಲ್‌ ಇತ್ತು. ವರ್ಷದಿಂದ ವರ್ಷಕ್ಕೆ ಬದುಕು ಸುಧಾರಿಸಿದೆ. ಇನ್ನಷ್ಟು ಕಮಿಷನ್‌ ಹೆಚ್ಚಿದರೆ ಗ್ರಾಹಕರು ನಿಗದಿತ ಸಮಯಕ್ಕೆ ಬಿಲ್‌ ಪಾವತಿಸುವಂತಾದರೆ ಬದುಕಿಗೆ ಇನ್ನಷ್ಟು ಸಂತೋಷ ತುಂಬಿದಂತಾಗುತ್ತದೆ
ಗಂಗಾಧರ ರಾಠೋಡ ಬಸವೇಶ್ವರ ಆಸ್ಪತ್ರೆ ಪ್ರದೇಶ ಕಲಬುರಗಿ
27 ವರ್ಷಗಳಿಂದ ಈ ಕಾಯಕ ಮಾಡುತ್ತಿದ್ದೇನೆ. 12 ವರ್ಷದ ಹಿಂದೆ ಅನಾರೋಗ್ಯದಿಂದ ಆಸ್ಪತ್ರೆಗೆ ಸೇರಿದ್ದ 4 ದಿನ ಬಿಟ್ಟರೆ ಒಮ್ಮೆಯೂ ಈ ಕೆಲಸ ಬಿಟ್ಟಿಲ್ಲ. 27 ವರ್ಷಗಳಲ್ಲಿ ಮೂರು ಸೈಕಲ್‌ ಬದಲಿಸಿದ್ದು ಈಗಲೂ ಸೈಕಲ್‌ ಮೇಲೆಯೇ ಪೇಪರ್‌ ಹಾಕುತ್ತೇನೆ. ಈ ಕಾಯಕ ನನ್ನ ಬದುಕಿಗೆ ಆಧಾರವಾಗಿದೆ
ಕಿರಣ ಬಾಸುತ್ಕರ ಸೇಡಂ ಪಟ್ಟಣ ಕಲಬುರಗಿ ಜಿಲ್ಲೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.