ADVERTISEMENT

ಕಲಬುರಗಿ: ಪಿಎಚ್‌.ಡಿ ಪದವಿ ಪಡೆದ ಪತ್ರಿಕಾ ವಿತರಕ!

ಕೇಂದ್ರೀಯ ವಿ.ವಿ. ಘಟಿಕೋತ್ಸವದಲ್ಲಿ ಪದವಿ ಪಡೆದ ಡಾ. ರಂಗಸ್ವಾಮಿ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2022, 15:26 IST
Last Updated 23 ಮಾರ್ಚ್ 2022, 15:26 IST
ಕೇಂದ್ರೀಯ ವಿ.ವಿ. ಘಟಿಕೋತ್ಸವದಲ್ಲಿ ಡಾ. ಕೆ. ಕಸ್ತೂರಿ ರಂಗನ್ ಅವರಿಂದ ಪಿಎಚ್‌.ಡಿ. ಪದವಿ ಪಡೆದ ಡಾ. ರಂಗಸ್ವಾಮಿ. ಕುಲಸಚಿವ ಪ್ರೊ. ಬಸವರಾಜ ಡೋಣೂರ, ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಇದ್ದರು
ಕೇಂದ್ರೀಯ ವಿ.ವಿ. ಘಟಿಕೋತ್ಸವದಲ್ಲಿ ಡಾ. ಕೆ. ಕಸ್ತೂರಿ ರಂಗನ್ ಅವರಿಂದ ಪಿಎಚ್‌.ಡಿ. ಪದವಿ ಪಡೆದ ಡಾ. ರಂಗಸ್ವಾಮಿ. ಕುಲಸಚಿವ ಪ್ರೊ. ಬಸವರಾಜ ಡೋಣೂರ, ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಇದ್ದರು   

ಕಲಬುರಗಿ: ಇಸ್ರೊ ಮಾಜಿ ಅಧ್ಯಕ್ಷ ಕೆ. ಕಸ್ತೂರಿ ರಂಗನ್ ಅವರಿಂದ ಪಿಎಚ್‌.ಡಿ. ಪದವಿ ಪಡೆದ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ಡಾ. ರಂಗಸ್ವಾಮಿ ಎಚ್. ಅವರಿಗೆ ಎಲ್ಲಿಲ್ಲದ ಸಂಭ್ರಮ.

ಎಸ್ಸೆಸ್ಸೆಲ್ಸಿಯಲ್ಲಿ ಮೂರು ಬಾರಿ ಫೇಲ್ ಆಗಿ, ದಾವಣಗೆರೆಯಲ್ಲಿ ’ಪ್ರಜಾವಾಣಿ‘ ಪತ್ರಿಕೆ ವಿತರಣೆ ಮಾಡಿ ಜೀವನ ಸಾಗಿಸುತ್ತಿದ್ದ ರಂಗಸ್ವಾಮಿ ನಂತರ ತುಮಕೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್‌ ಸ್ನಾತಕೋತ್ತರ ಪದವಿ ಪೂರೈಸಿದ ಬಳಿಕ ಪಿಎಚ್‌.ಡಿ.ಗೆ ಕಲಬುರಗಿ ಜಿಲ್ಲೆ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿನೋಂದಣಿ ಮಾಡಿಕೊಂಡಿದ್ದರು.

ದಲಿತ ಮಹಿಳೆಯರ ಆತ್ಮಕಥೆಗಳ ಕುರಿತು ಸಂಶೋಧನಾ ಪ್ರಬಂಧ ಮಂಡಿಸಿದ ರಂಗಸ್ವಾಮಿ ಅವರಿಗೆ ಪ್ರೊ. ಬಸವರಾಜ ಡೋಣೂರ ಮಾರ್ಗದರ್ಶನ ಮಾಡಿದ್ದಾರೆ. ಇವರು ಪ್ರಸ್ತುತ ಕಲಬುರಗಿ ಜಿಲ್ಲೆಯ ಯಡ್ರಾಮಿಯ ಸರ್ಕಾರಿ ಪಿ.ಯು ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ADVERTISEMENT

‘ದಾವಣಗೆರೆಯ ವೈಶಾಲಿ ಬಾರ್‌ನಲ್ಲಿ ಕೆಲಸ ಮಾಡಿ, ಹೊಸದುರ್ಗದ ಶ್ರೀನಿವಾಸ ಬೇಕರಿಯಲ್ಲಿ ಕೆಲಸ, ಬೆಂಗಳೂರಿನಲ್ಲಿ ಗಾರ್ಮೆಂಟ್ಸ್‌ನಲ್ಲಿ ಟೈಲರ್ ಕೆಲಸ ಮಾಡುತ್ತಿದ್ದೆ. ಜೊತೆಗೆ ಬಸ್ ತೊಳೆಯುವುದನ್ನೂ ಮಾಡುತ್ತಿದ್ದೆ. ಓದಿನಲ್ಲಿ ಮುಂದುವರಿಯಬೇಕು ಎಂಬ ಉದ್ದೇಶದಿಂದ ಎಂ.ಎ. ಪದವಿ ಪಡೆದೆ. ಪಿಎಚ್‌.ಡಿ. ಪದವಿ ಪಡೆಯುತ್ತೇನೆ ಎಂದು ಕನಸು ಮನಸ್ಸಿನಲ್ಲಿಯೂ ಅಂದುಕೊಂಡಿರಲಿಲ್ಲ’ ಎಂದು ರಂಗಸ್ವಾಮಿ ಪ್ರತಿಕ್ರಿಯಿಸಿದರು.

ಚಿನ್ನದ ಪದಕ: ಕಂಪ್ಯೂಟರ್ ಸೈನ್ಸ್‌ ಅಂಡ್ ಟೆಕ್ನಾಲಜಿ ವಿಭಾಗದಲ್ಲಿ ಎಂ.ಟೆಕ್‌ನಲ್ಲಿ ಅಲ್ಲದೇ, ವಿಶ್ವವಿದ್ಯಾಲಯದ ಎಲ್ಲ ವಿಭಾಗಗಳ ಪೈಕಿ ಅತಿ ಹೆಚ್ಚು ಅಂಕ ಪಡೆದಿದ್ದಕ್ಕಾಗಿ ಬಿಹಾರದ ಪಾಟ್ನಾದ ಸೌರವ್ ಸೋಳಂಕಿ ಅವರು ವಿಭಾಗದ ಚಿನ್ನದ ಪದಕದ ಜೊತೆಗೆ ವಿ.ವಿ.ಯ ಮೊದಲ ಕುಲಪತಿ ಪ್ರೊ.ಎ.ಎಂ. ಪಠಾಣ್‌ ಅವರು ಹೆಸರಿನಲ್ಲಿ ಸ್ಥಾಪಿಸಲಾದ ಮತ್ತೊಂದು ಚಿನ್ನದ ಪದಕವನ್ನು ಪಡೆದರು.

ಬಿ.ಟೆಕ್‌ನಲ್ಲಿಯೂ ಚಿನ್ನದ ಪದಕ ಪಡೆದಿದ್ದು ಅವರು ‍ಪ್ರಸ್ತುತ ಹೈದರಾಬಾದ್‌ನಲ್ಲಿ ಸ್ಟಾರ್ಟಪ್ ನಡೆಸುತ್ತಿದ್ದಾರೆ. ತಂದೆ ಜಿತೇಂದ್ರನಾಥ ಕೇಸರಿ ಜಾಹೀರಾತು ಸಂಸ್ಥೆಯನ್ನು ನಡೆಸುತ್ತಿದ್ದಾರೆ. ತಾಯಿ ಗೀತಾದೇವಿ ಗೃಹಿಣಿ.

‘ಐಐಟಿ ದೆಹಲಿಯಲ್ಲಿ ಕೆಲ ಕಾಲ ಇಂಟರ್ನ್‌ಶಿಪ್ ಮಾಡಿದ್ದೆ. ಇಂಟರ್ನೆಟ್‌ ನೆರವಿಲ್ಲದೇ ಎಲೆಕ್ಟ್ರಾನಿಕ್ ಡಿವೈಸ್‌ಗಳ ನೆರವಿನಿಂದ ದೇಹದ ಆರೋಗ್ಯವನ್ನು ಪತ್ತೆ ಹಚ್ಚುವ ಕಡಿಮೆ ವೆಚ್ಚದ ಸಾಧನವನ್ನು ಸ್ಟಾರ್ಟಪ್ ಮೂಲಕ ಅಭಿವೃದ್ಧಿಪಡಿಸುತ್ತಿದ್ದೇನೆ’ ಎಂದು ಸೋಳಂಕಿ ತಿಳಿಸಿದರು.

ರೈತನ ಮಗಳಾದ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ದುದ್ಯಾಲ ಗ್ರಾಮದ ಶ್ವೇತಾ ಪಾಟ್ಲೊಲ್ಲ ಅರ್ಥಶಾಸ್ತ್ರದಲ್ಲಿ ಚಿನ್ನದ ಪದಕ ಪಡೆದರು.

‘ತಂದೆ ಈಶ್ವರಪ್ಪ ಅವರು ನಾಲ್ಕು ಎಕರೆ ಜಮೀನಿನಲ್ಲಿ ಕೃಷಿ ಕೆಲಸ ಮಾಡುತ್ತಿದ್ದರು. ದುದ್ಯಾಲದ ಜವಾಹರ ನವೋದಯ ವಿದ್ಯಾಲಯದಲ್ಲಿ 6ರಿಂದ ಪಿಯುಸಿವರೆಗೆ ಅಧ್ಯಯನ ನಡೆಸಿದೆ. ಆಗಲೇ ಕೇಂದ್ರೀಯ ವಿ.ವಿ.ಯಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡಬೇಕು ಅಂದುಕೊಂಡಿದ್ದೆ. ಚಿನ್ನದ ಪದಕದ ಭರವಸೆ ಇತ್ತು. ನಿರಂತರ ಅಧ್ಯಯನದ ಶ್ರಮದಿಂದ ಪದಕ ಸಿಕ್ಕಿದೆ. ಮುಂದೆ ನಾಗರಿಕ ಸೇವಾ ಪರೀಕ್ಷೆಯನ್ನು ಬರೆಯುವ ಉದ್ದೇಶವಿದೆ’ ಎಂದು ಶ್ವೇತಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.