
ಕಲಬುರಗಿ: ತಾಲ್ಲೂಕಿನ ಬಬಲಾದ ಗ್ರಾಮ ವ್ಯಾಪ್ತಿಯ ಡಾನ್ ಬಾಸ್ಕೊ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಗುರು ನಾಗಪ್ಪ ಹಡಪದ (15) ಶಾಲಾ ಆವರಣದ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ಕಾಳಗಿ ತಾಲ್ಲೂಕಿನ ಸಾಸರಗಾಂವ ಮೂಲದ ಗುರು ಹಲವು ವರ್ಷಗಳಿಂದ ಡಾನ್‌ಬಾಸ್ಕೊ ಶಾಲೆಯಲ್ಲಿ ಓದುತ್ತಿದ್ದ. ಕಳೆದ ಮೂರು ದಿನಗಳ ಹಿಂದೆ ಶಾಲೆಯಿಂದ ನಾಪತ್ತೆಯಾಗಿದ್ದ. ಮಂಗಳವಾರ ಮೃತದೇಹ ನೀರಿನಲ್ಲಿ ತೇಲಿದ ಬಳಿಕ ಆತ್ಮಹತ್ಯೆ ವಿಷಯ ಗೊತ್ತಾಗಿದೆ ಎನ್ನಲಾಗಿದೆ.
ಈ ಕುರಿತ ಪ್ರತಿಕ್ರಿಯಿಸಿರುವ ನಗರ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ., ‘ಪ್ರಾಥಮಿಕ ಮಾಹಿತಿ ಪ್ರಕಾರ, ಎರಡು ದಿನಗಳ ಹಿಂದೆ ವಿದ್ಯಾರ್ಥಿ ಗುರು ಶಾಲೆಯ ಚಾಲಕರೊಬ್ಬರ ಬೈಕ್ ತೆಗೆದುಕೊಂಡು ಹೋಗಿ ಗೋಡೆಗೆ ಡಿಕ್ಕಿ ಹೊಡೆಸಿದ್ದ. ಘಟನೆಯಲ್ಲಿ ಬೈಕ್ ಜಖಂಗೊಂಡಿತ್ತು. ದುರಸ್ತಿ ವೆಚ್ಚ ಭರಿಸುವಂತೆ ಶಿಕ್ಷಕರು ತಾಕೀತು ಮಾಡಿದ್ದರು ಎಂದು ತಿಳಿದು ಬಂದಿದೆ. ಇದೇ ಕಾರಣಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಆದರೆ, ಬಾಲಕನ ಮನೆಯವರು ನೀಡುವ ದೂರು ಆಧರಿಸಿ ಕ್ರಮವಹಿಸಲಾಗುವುದು’ ಎಂದರು.
ಈ ಘಟನೆ ಕುರಿತು ಬಾಲಕನ ಅಕ್ಕ ಸುರೇಖಾ ಹಡಪದ ನೀಡಿದ ದೂರಿನನ್ವಯ ಸಬರ್ಬನ್ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.