ADVERTISEMENT

ಕಲಬುರಗಿ | ಮೇಲ್ದರ್ಜೆಗೇರದ ಸಿಎಚ್‌ಸಿ: ರೋಗಿಗಳ ಪರದಾಟ

ತುರ್ತು ಚಿಕಿತ್ಸೆಗೆ ವೈದ್ಯರ ಕೊರತೆಯೇ ಸವಾಲು: ಕಮಲಾಪುರದಲ್ಲಿ ತಾಲ್ಲೂಕು ಆರೋಗ್ಯ ಕೇಂದ್ರವೇ ಇಲ್ಲ

ಮಲ್ಲಪ್ಪ ಪಾರೇಗಾಂವ
Published 19 ಆಗಸ್ಟ್ 2024, 5:39 IST
Last Updated 19 ಆಗಸ್ಟ್ 2024, 5:39 IST
ಯಡ್ರಾಮಿ ಸಮುದಾಯ ಆರೋಗ್ಯ ಕೇಂದ್ರ
ಯಡ್ರಾಮಿ ಸಮುದಾಯ ಆರೋಗ್ಯ ಕೇಂದ್ರ   

ಕಲಬುರಗಿ: ಜಿಲ್ಲೆಯಲ್ಲಿರುವ ಹಲವು ಸಮುದಾಯ ಆರೋಗ್ಯ ಕೇಂದ್ರಗಳು, ಅರ್ಹತೆಯಿದ್ದರೂ ತಾಲ್ಲೂಕು ಆರೋಗ್ಯ ಕೇಂದ್ರಗಳಾಗಿ ಮೇಲ್ದರ್ಜೆಗೇರಿಲ್ಲ. ಜತೆಗೆ ವೈದ್ಯರು ಹಾಗೂ ಸಿಬ್ಬಂದಿ ಕೊರತೆಯಿಂದಾಗಿ ರೋಗಿಗಳು ಗುಣಮಟ್ಟದ ಚಿಕಿತ್ಸೆಗಾಗಿ ಪರದಾಡುವಂತಾಗಿದೆ.

ಕಮಲಾಪುರ, ಕಾಳಗಿ, ಯಡ್ರಾಮಿ ಹಾಗೂ ಶಹಬಾದ್‌ ಹೊಸ ತಾಲ್ಲೂಕುಗಳಾಗಿ 7 ವರ್ಷಗಳು ಕಳೆದಿವೆ. ಆದರೆ ಈವರೆಗೂ ಅಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಗಳು ಮೇಲ್ದರ್ಜೆಗೇರಿಲ್ಲ. ತಾಲ್ಲೂಕು ಕೇಂದ್ರಗಳಲ್ಲಿರುವ ರೋಗಿಗಳು ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಕೇಂದ್ರವನ್ನು ಅವಲಂಬಿಸುವಂತಾಗಿದೆ.

ಜಿಲ್ಲೆಯಲ್ಲಿರುವ ಪಿಎಚ್‌ಸಿ, ಸಿಎಚ್‌ಸಿ, ಟಿಎಚ್‌ಸಿಗಳಲ್ಲಿ ಪೂರ್ಣ ಪ್ರಮಾಣದಲ್ಲಿ ವೈದ್ಯರು ಹಾಗೂ ಸಿಬ್ಬಂದಿ ನೇಮಕವಾಗಿಲ್ಲ. ಹೀಗಾಗಿ ರೋಗಿಗಳಿಗೆ ಗುಣಮಟ್ಟದ ಹಾಗೂ ತುರ್ತು ಚಿಕಿತ್ಸೆ ಸವಾಲಾಗಿ ಪರಿಣಮಿಸಿದೆ. ಸದ್ಯ ಕಾರ್ಯನಿರ್ವಹಿಸುತ್ತಿರುವ ವೈದ್ಯರಿಗೆ ಕಾರ್ಯಭಾರವೂ ಹೆಚ್ಚಿದ್ದು, ರೋಗಿಗಳನ್ನು ನಿಭಾಯಿಸಲು ಹರಸಾಹಸ ಪಡುವಂತಾಗಿದೆ. ಜಿಲ್ಲೆಯಲ್ಲಿ ವೈದ್ಯರು ಹಾಗೂ ಅಗತ್ಯ ಸಿಬ್ಬಂದಿ ನೇಮಕಗೊಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಆರೋಗ್ಯ ಕೇಂದ್ರಗಳ ಮೇಲ್ದರ್ಜೆಗೇರಿಸಲು ಕ್ರಮ: ‘ಮಹಗಾಂವ, ಹಿರೇಸಾವಳಗಿ, ಫರತಾಬಾದ, ಜೇವರ್ಗಿ ತಾಲ್ಲೂಕಿನ ಇಜೇರಿ, ಅಫಜಲಪುರ ತಾಲ್ಲೂಕಿನ ಗೊಬ್ಬುರ(ಆರ್‌) ಗ್ರಾಮಗಳಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಲು ಕ್ರಮಕೈಗೊಳ್ಳಲಾಗಿದೆ. ಅಲ್ಲದೇ ಮೇಲ್ದರ್ಜೆಗೇರಲಿರುವ ಆರೋಗ್ಯ ಕೇಂದ್ರಗಳಿಗೆ ಕೆಕೆಆರ್‌ಡಿಬಿ ವತಿಯಿಂದ ಕಟ್ಟಡ ನಿರ್ಮಾಣಕ್ಕೆ ಅನುದಾನವೂ ಮಂಜೂರಾಗಿದ್ದು, ಶೀಘ್ರ ಕಾಮಗಾರಿ ಆರಂಭವಾಗಲಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರತಿಕಾಂತ ಸ್ವಾಮಿ ಹೇಳಿದರು.

‘ಶಹಬಾದ್‌, ಯಡ್ರಾಮಿ, ಕಾಳಗಿ, ಕಮಲಾಪುರ ತಾಲ್ಲೂಕುಗಳಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಗಳನ್ನು ತಾಲ್ಲೂಕು ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಲು ಪ್ರಸ್ತಾವ ಸಲ್ಲಿಸಲಾಗಿದೆ. ಶೀಘ್ರದಲ್ಲಿಯೇ ತಾಲ್ಲೂಕು ಆರೋಗ್ಯ ಕೇಂದ್ರಗಳಾಗಿ ಮೇಲ್ದರ್ಜೆಗೇರಿಸಲಾಗುವುದು. ಕೇಂದ್ರಗಳಲ್ಲಿ ಅಗತ್ಯವಿರುವ ಡಿಜಿಟಲ್‌ ಯಂತ್ರೋಪಕರಣ ಒದಗಿಸಲು ಕ್ರಮಕೈಗೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.

‘ಸಿಬ್ಬಂದಿ, ಔಷಧ ಕೊರತೆಯಿಲ್ಲ’

ಜೇವರ್ಗಿ: ನೆಲೋಗಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಒಟ್ಟು 7 ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಅದರಲ್ಲಿ ಒಬ್ಬರು ಸ್ತ್ರೀರೋಗ ತಜ್ಞ, ದಂತ ವೈದ್ಯಾಧಿಕಾರಿ, ಅರವಳಿಕೆ ತಜ್ಞ, ಮಕ್ಕಳ ತಜ್ಞ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ.

‘ಕೇಂದ್ರದಲ್ಲಿ ನಿತ್ಯ 100ಕ್ಕೂ ಹೆಚ್ಚು ಹೊರ ರೋಗಿಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ನೆಲೋಗಿ ಸಮುದಾಯ ಕೇಂದ್ರದಲ್ಲಿ ಔಷಧ ಪೂರೈಕೆಯಿದ್ದು, ಸಮಸ್ಯೆಯಿಲ್ಲ. ಆರೋಗ್ಯ ಕೇಂದ್ರಗಳಲ್ಲಿ ಸಿಬ್ಬಂದಿ ಕೊರತೆಯಿಲ್ಲ’ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ತಿಳಿಸಿದ್ದಾರೆ.

‘ತಾಲ್ಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಿ’

ಶಹಾಬಾದ್: ನಗರದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರವನ್ನು ತಾಲ್ಲೂಕು ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಬೇಕು. ಜತೆಗೆ ಅಗತ್ಯ ಮೂಲಸೌಲಭ್ಯ ವೈದ್ಯರು ಶುಶ್ರೂಷಕಿಯರು ಹಾಗೂ ಸಿಬ್ಬಂದಿಯನ್ನು ಒದಗಿಸಬೇಕು ಎಂದು ಸಾರ್ವಜನಿಕರ ಒತ್ತಾಯವಾಗಿದೆ. ಸದ್ಯ ಆರೋಗ್ಯ ಕೇಂದ್ರದಲ್ಲಿ 30 ಹಾಸಿಗೆ ಸೌಲಭ್ಯವಿದ್ದು ನಿತ್ಯ 400 ರಿಂದ 500 ರೋಗಿಗಳ ಒಪಿಡಿ ನೋಂದಣಿ ಆಗುತ್ತದೆ. ತಪಾಸಣೆಗೆ 4 ಕಾಯಂ ಮತ್ತು 3 ವೈದ್ಯರು ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿದ್ದಾರೆ. ವೈದ್ಯರ ಮೇಲೆ ಒತ್ತಡ ಹೆಚ್ಚಿದ್ದು ಇನ್ನಷ್ಟು ಸಿಬ್ಬಂದಿಯ ಅಗತ್ಯವಿದೆ. ಪ್ರಥಮ ಮತ್ತು ದ್ವಿತೀಯ ದರ್ಜೆ ಸಹಾಯಕರಾಗಿ ತಲಾ ಒಬ್ಬರು 5 ಶುಶ್ರೂಷಕಾಧಿಕಾರಿಗಳು 2 ಎಕ್ಸ್‌ರೇ ತಂತ್ರಜ್ಞರು 5 ಆರೋಗ್ಯ ನಿರೀಕ್ಷಕರು ಮತ್ತು 5 ಡಿ ಗ್ರೂಪ್ ನೌಕರರು ಇದ್ದಾರೆ.

‘100 ಹಾಸಿಗೆ ಸೌಲಭ್ಯದ ಆಸ್ಪತ್ರೆ ನಿರ್ಮಿಸಿ’

ಕಮಲಾಪುರ: ತಾಲ್ಲೂಕಿನಲ್ಲಿ ಒಟ್ಟು 6 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ತಾಲ್ಲೂಕು ಕೇಂದ್ರದಲ್ಲಿಯೂ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರವಿದೆ. ಆದರೆ ಸಂಬಂಧಿಸಿದ ಅಧಿಕಾರಿಗಳು ಈವರೆಗೂ ಸಮುದಾಯ ಆರೋಗ್ಯ ಕೇಂದ್ರ(ಸಿಎಚ್‌ಸಿ)ವಾಗಿ ಮೇಲ್ದರ್ಜೆಗೇರಿಸುವ ಗೋಜಿಗೆ ಹೋಗಿಲ್ಲ. ಹೀಗಾಗಿ ತಾಲ್ಲೂಕು ಹಾಗೂ ಸುತ್ತಲಿನ ಹಳ್ಳಿಗಳ ರೋಗಿಗಳು ಉನ್ನತ ಹಾಗೂ ಗುಣಮಟ್ಟದ ಚಿಕಿತ್ಸೆಗಾಗಿ ಪರದಾಡುವಂತಾಗಿದೆ. ಕೋವಿಡ್‌ ಸಂದರ್ಭದಲ್ಲಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಮುರುಗೇಶ ನಿರಾಣಿಯವರು 100 ಹಾಸಿಗೆಯ ತಾಲ್ಲೂಕು ಆಸ್ಪತ್ರೆ ಸ್ಥಾಪಿಸಲಾಗುವುದು ಎಂದು ಭರವಸೆ ನೀಡಿದ್ದರು. ಸಚಿವರ ಭರವಸೆ ಹಾಗೆ ಉಳಿದಿದೆ. ಈಚೆಗೆ ಕಮಲಾಪುರದಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಕಮಲಾಪುರಕ್ಕೆ ಸಮುದಾಯ ಆರೋಗ್ಯ ಕೇಂದ್ರ ಮಂಜೂರು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ತಿಳಿಸಿದ್ದಾರೆ. ಆದರೆ ಮೇಲ್ದರ್ಜೆಗೇರಿಸುವ ಕಾಮಗಾರಿ ಆರಂಭವಾಗಿಲ್ಲ. ಸದ್ಯ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಸಿಬ್ಬಂದಿ ಹಾಗೂ ಚಿಕಿತ್ಸಾ ಉಪಕರಣಗಳ ಕೊರತೆ ಇದೆ. ಕಾರ್ಯಭಾರ ಹೆಚ್ಚಿದೆ. ಕಮಲಾಪುರದಲ್ಲಿ ಸುಮಾರು 20 ಸಾವಿರ ಜನಸಂಖ್ಯೆಯಿದೆ. ಸುತ್ತಲಿನ ಅನೇಕ ಗ್ರಾಮಗಳ ರೋಗಿಗಳು ಇದೇ ಕೇಂದ್ರಕ್ಕೆ ಬರುತ್ತಾರೆ. ವಾರದಲ್ಲಿ ಎರಡು–ಮೂರು ಬಾರಿ ರಸ್ತೆ ಅಪಘಾತದ ಪ್ರಕರಣಗಳು ಇರುತ್ತವೆ. ಅತಿ ಹೆಚ್ಚು ಕಾರ್ಯಾಭಾರ ಇರುವುದರಿಂದ ಒಬ್ಬ ವೈದ್ಯರಿಂದ ನಿಭಾಯಿಸಲಾಗುತ್ತಿಲ್ಲ. ಕಮಲಾಪುರದಲ್ಲಿ 100 ಹಾಸಿಗೆಯ ತಾಲ್ಲೂಕು ಆಸ್ಪತ್ರೆ ಶೀಘ್ರ ನಿರ್ಮಾಣ ಮಾಡಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಜಿಲ್ಲೆಯಲ್ಲಿ ಅರ್ಹತೆಯಿರುವ ಕೆಲವು ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲು ಅಗತ್ಯ ಕ್ರಮಕೈಗೊಳ್ಳಲಾಗಿದೆ. ಕೊರತೆಯಿರುವ ಸಿಬ್ಬಂದಿ ನೇಮಕಕ್ಕೂ ಕ್ರಮಕೈಗೊಳ್ಳಲಾಗಿದೆಡಾ.

-ರತಿಕಾಂತ ಸ್ವಾಮಿ ಜಿಲ್ಲಾ ಆರೋಗ್ಯಾಧಿಕಾರಿ

ಶಹಾಬಾದ್‌ ಆಸ್ಪತ್ರೆಯು ತಾಲ್ಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿದರೆ ನೂರು ಹಾಸಿಗೆ ಬರುತ್ತವೆ. ಒಟ್ಟು 16 ಕಾಯಂ ವೈದ್ಯರು ತುರ್ತು ಸೇವೆ ಸೌಲಭ್ಯ ದೊರೆಯುತ್ತವೆ. ಹೊಸ ತಾಲ್ಲೂಕು ಆಸ್ಪತ್ರೆ ನಿರ್ಮಿಸಿದರೆ ಸಮಸ್ಯೆಗಳಿಗೆ ಪರಿಹಾರ ಸಿಕ್ಕಂತಾಗುತ್ತದೆ

-ಡಾ. ಎಂ.ಡಿ. ರಹೀಮ್ ವೈದ್ಯಾಧಿಕಾರಿ ಸಿಎಚ್‌ಸಿ

ಶಹಾಬಾದ್‌ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಲು 6 ತಿಂಗಳ ಹಿಂದೆಯೇ ಪ್ರಸ್ತಾವ ಸಲ್ಲಿಸಲಾಗಿದೆ. ಈ ಸಂಬಂಧ ಮೇಲಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಆದರೆ ಕೇಂದ್ರದ ಕಟ್ಟಡ ಪೂರ್ಣಗೊಳ್ಳುವವರೆಗೂ ವೈದ್ಯ ಸಿಬ್ಬಂದಿ ನೇಮಕಗೊಳ್ಳುವುದಿಲ್ಲ

-ಡಾ.ಸಿದ್ದು ಪಾಟೀಲ ವೈದ್ಯಾಧಿಕಾರಿ ಯಡ್ರಾಮಿ

ಕಮಲಾಪುರ ತಾಲ್ಲೂಕು ಕೇಂದ್ರವಾಗಿದ್ದು ಸಮುದಾಯ ಆರೋಗ್ಯ ಕೇಂದ್ರದ ಅಗತ್ಯವಿಲ್ಲ. ನೇರವಾಗಿ ತಾಲ್ಲೂಕು ಆರೋಗ್ಯ ಕೇಂದ್ರವನ್ನು ಆರಂಭಿಸಬೇಕು. 100 ಹಾಸಿಗೆ ಸೇರಿದಂತೆ ಚಿಕಿತ್ಸೆಗಾಗಿ ಅತ್ಯಾಧುನಿಕ ಆರೋಗ್ಯ ತಂತ್ರಜ್ಞಾನ ಒದಗಿಸಬೇಕು. ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಕೇಂದ್ರಕ್ಕೆ ತೆರಳುವಂತಾಗಬಾರದು

-ಶಿವಕುಮಾರ ದೋಶೆಟ್ಟಿ ಬಿಜೆಪಿ ಗ್ರಾಮೀಣ ಮಂಡಲ ಉಪಾಧ್ಯಕ್ಷ

ಚಿಮ್ಮನಚೋಡ ಪ್ರಾಥಮಿಕ ಆರೋಗ್ಯ ಕೇಂದ್ರ ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆಡಾ.

-ಮಹಮದ್ ಗಫಾರ್ ಟಿಎಚ್‌ಒ ಚಿಂಚೋಳಿ

ಚಿಮ್ಮನಚೋಡ ಸುತ್ತಲಿನ 30ಕ್ಕೂ ಹೆಚ್ಚು ಹಳ್ಳಿಗಳಿಗೆ ಕೇಂದ್ರಸ್ಥಾನವಾಗಿದೆ. ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರ ಸಿಎಚ್‌ಸಿಯಾಗಿ ಮೇಲ್ದರ್ಜೆಗೇರಿಸುವ ಮೂಲಕ ಸುತ್ತಲಿನ ರೋಗಿಗಳಿಗೆ ಅನುಕೂಲ ಕಲ್ಪಿಸಬೇಕು

-ರಾಮರೆಡ್ಡಿ ಪಾಟೀಲ ಯುವ ಮುಖಂಡ

ಚಿಮ್ಮನಚೋಡ ಸುಲೇಪೇಟ ಪಿಎಚ್‌ಸಿಯನ್ನು ಮೇಲ್ದರ್ಜೆಗೇರಿಸಿ ಸಿಎಚ್‌ಸಿಯಾಗಿ ಮಾಡಿದ್ದು ಸ್ವಾಗತಾರ್ಹ. ಆದರೆ ಸಿಎಚ್‌ಸಿಗೆ ತಕ್ಕಂತೆ ಅಗತ್ಯ ಸಿಬ್ಬಂದಿ ಮಂಜೂರು ಮಾಡದಿರುವುದು ಜನರಲ್ಲಿ ನಿರಾಸೆ ಉಂಟು ಮಾಡಿದೆ

-ಯಲ್ಲಾಲಿಂಗ ದಂಡಿನ ಸಾಮಾಜಿಕ ಕಾರ್ಯಕರ್ತ‌

ಮೂರುಪಟ್ಟು ಕೆಲಸಕ್ಕೆ ವೈದ್ಯರು ಹೈರಾಣ

ಕಾಳಗಿ: ತಾಲ್ಲೂಕು ಕೇಂದ್ರ ಘೋಷಣೆಯಾಗಿ 7 ವರ್ಷಗಳು ಕಳೆಯುತ್ತಿವೆ. ಆದರೆ ಸಮುದಾಯ ಆರೋಗ್ಯ ಕೇಂದ್ರವು ತಾಲ್ಲೂಕು ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರುವ ಭಾಗ್ಯ ಬಂದಿಲ್ಲ. ತಾಲ್ಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿದರೆ ತುರ್ತು ಚಿಕಿತ್ಸೆ ಹಾಗೂ ಹೆಚ್ಚುವರಿ ಹಾಸಿಗೆ ಸೌಲಭ್ಯ ಸೇರಿದಂತೆ ಹಲವು ಆರೋಗ್ಯ ಸೌಲಭ್ಯಗಳು ಸಿಗುತ್ತವೆ. ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಬೇಕು ಎಂದು ಈ ಭಾಗದ ಜನರ ಬೇಡಿಕೆಯಾಗಿದೆ. ತಾಲ್ಲೂಕಿನ ಕಾಳಗಿ ಹೆಬ್ಬಾಳ ಮತ್ತು ಗಡಿಕೇಶ್ವಾರ ಗ್ರಾಮದಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳಿವೆ. ಕಾಳಗಿ ಕೇಂದ್ರದಲ್ಲಿ ಒಳ ಹಾಗೂ ಹೊರ ರೋಗಿಗಳ ಸಂಖ್ಯೆ 3–4 ಪಟ್ಟು ಹೆಚ್ಚಿದೆ. ಆದರೆ ಅಗತ್ಯವಿರುವಷ್ಟು ಆರೋಗ್ಯ ಸಿಬ್ಬಂದಿ ಇಲ್ಲ. ಹೀಗಾಗಿ ರೋಗಿಗಳನ್ನು ನಿಭಾಯಿಸಲು ವೈದ್ಯರು ಹರಸಾಹಸ ಪಡುವಂತಾಗಿದೆ. ಚಿಂಚೋಳಿ ತಾಲ್ಲೂಕಿನ ಗಡಿಭಾಗದ ಹಳ್ಳಿಗಳ ರೋಗಿಗಳೂ ಕೂಡ ಚಿಕಿತ್ಸೆಗೆಂದು ಕಾಳಗಿಗೆ ಬರುತ್ತಾರೆ. ಹೀಗಾಗಿ ನಿತ್ಯ ಸರಾಸರಿ 80 ರೋಗಿಗಳು ಆಸ್ಪತ್ರೆಯಲ್ಲಿ ದಾಖಲಾಗುತ್ತಾರೆ. ಮರಣೋತ್ತರ ಪರೀಕ್ಷೆ ಅಪಘಾತ ವಿಷ ಸೇವನೆ ಸೇರಿದಂತೆ ಕನಿಷ್ಠ 15 ತುರ್ತು ಪ್ರಕರಣಗಳು ನಿತ್ಯ ಕಂಡು ಬರುತ್ತವೆ. ಆದರೆ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಲ್ಲ. ಹೀಗಾಗಿ ಈಗಿರುವ ಸಿಬ್ಬಂದಿಯೇ ಇಂತಹ ಪ್ರಕರಣಗಳನ್ನು ನಿಭಾಯಿಸಬೇಕಿದೆ. ಜತೆಗೆ ಸ್ತ್ರೀ ತಜ್ಞರು ಎಕ್ಸ್-ರೇ ತಂತ್ರಜ್ಞ ಸರ್ಜರಿ ಔಷಧ ಅಧಿಕಾರಿ ಡಿ ದರ್ಜೆಯ ಹುದ್ದೆಗಳು ಖಾಲಿಯಿವೆ.

Cut-off box - ತುರ್ತು ಚಿಕಿತ್ಸೆಗಾಗಿ ಜಿಲ್ಲಾ ಕೇಂದ್ರವೇ ಗತಿ ಯಡ್ರಾಮಿ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ 64 ಗ್ರಾಮಗಳ ರೋಗಿಗಳು ಚಿಕಿತ್ಸೆಗಾಗಿ ಬರುತ್ತಾರೆ. ಆದರೆ ಮೂಲಸೌಕರ್ಯ ಸೂಕ್ತ ಚಿಕಿತ್ಸೆ ಸಿಗದೇ ಪರದಾಡುವಂತಾಗಿದೆ. ತುರ್ತು ಚಿಕಿತ್ಸೆಗಾಗಿ ಜಿಲ್ಲಾ ಕೇಂದ್ರವೇ ಗತಿಯಾಗಿದೆ. ಆರೋಗ್ಯ ಕೇಂದ್ರದಲ್ಲಿ ಐವರು ವೈದ್ಯರು 9 ಡಿ ದರ್ಜೆಯ ನೌಕರರು 5 ಶುಶ್ರೂಷಕಿಯರು 30 ಹಾಸಿಗೆ 1 ಆಂಬುಲೆನ್ಸ್‌ ಇದೆ. ತುರ್ತು ಸಂದರ್ಭದಲ್ಲಿ ಆಂಬುಲೆನ್ಸ್‌ ಹಾಗೂ ಔಷಧ ಕೊರತೆ ಎದುರಿಸಬೇಕಾಗುತ್ತದೆ. ಗರ್ಭಿಣಿಯರು ನಿಯಮಿತ ತಪಾಸಣೆಗೆಂದು ಬಂದರೆ ಲ್ಯಾಬ್‌ ದುರಸ್ತಿಯಿದೆ ಎಂದು ಹೇಳಿ ವಾಪಸ್‌ ಕಳುಹಿಸುತ್ತಾರೆ ಎಂದು ರೋಗಿಗಳು ಆರೋಪಿಸಿದ್ದಾರೆ. ‘ಯಡ್ರಾಮಿ ತಾಲ್ಲೂಕು ಆಗಿದ್ದು 15 ವೈದ್ಯರು 18 ಶುಶ್ರೂಷಕಿಯರು 80 ಸಿಬ್ಬಂದಿ 3 ಆಂಬುಲೆನ್ಸ್‌ ಲ್ಯಾಬ್‌ ಟೆಕ್ನಿಷಿಯನ್‌ ಔಷಧ ಅಧಿಕಾರಿ ಹಿರಿಯ ಮತ್ತು ಕಿರಿಯ ಸಹಾಯಕ ಸ್ಕ್ಯಾನಿಂಗ್‌ ಎಕ್ಸ್‌ರೇ ಐಟಿಸಿಸಿ ಸೇರಿದಂತೆ ಹಲವು ಸೌಲಭ್ಯಗಳ ಅಗತ್ಯವಿದೆ. ಜತೆಗೆ ವೈದ್ಯರ ವಸತಿ ಗೃಹಗಳ ಸಮಸ್ಯೆಯಿದೆ. ಹೀಗಾಗಿ ಶೀಘ್ರ ತಾಲ್ಲೂಕು ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಬೇಕು’ ಎಂಬುದು ಈ ಭಾಗದ ಜನರ ಒತ್ತಾಯವಾಗಿದೆ.

Cut-off box - ಸೌಲಭ್ಯ ಕೊರತೆಯಿಂದ ಸೊರಗಿರುವ ಕೇಂದ್ರಗಳು ಚಿಂಚೋಳಿ: ತಾಲ್ಲೂಕಿನಲ್ಲಿ ಮೂರು ಸಮುದಾಯ ಆರೋಗ್ಯ ಕೇಂದ್ರಗಳಿದ್ದರೂ ವೈದ್ಯರ ಕೊರತೆ ಸೇರಿದಂತೆ ಮೂಲಸೌಲಭ್ಯಗಳ ಕೊರತೆಯಿಂದ ಸೊರಗಿವೆ. ಒಂದು ಸಿಎಚ್‌ಸಿ ಪೂರ್ಣಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಎರಡು ಕೇಂದ್ರಗಳು ಸೇಡಂ ವಿಧಾನಸಭಾ ಮತಕ್ಷೇತ್ರದಲ್ಲಿದ್ದರೆ ಒಂದು ಚಿಂಚೋಳಿ ವಿಧಾನಸಭಾ ಕ್ಷೇತ್ರದಲ್ಲಿದೆ. ಕುಂಚಾವರಂ ಸಮುದಾಯ ಆರೋಗ್ಯ ಕೇಂದ್ರವು ದಶಕಗಳ ಹಿಂದೆಯೇ ಪಿಎಚ್‌ಸಿಯಿಂದ ಸಿಎಚ್‌ಸಿಯಾಗಿ ಮೇಲ್ದರ್ಜೆಗೇರಿಸಲಾಗಿದೆ. ಆದರೆ ಹಳೆಯ ಕಟ್ಟಡದಲ್ಲಿಯೇ ಕಾರ್ಯನಿರ್ವಹಿಸುತ್ತಿದೆ. ತಾಲ್ಲೂಕಿನ ಸುಲೇಪೇಟದ ಪಿಎಚ್‌ಸಿಯನ್ನು ಸಿಎಚ್‌ಸಿಯಾಗಿ ಮೇಲ್ದರ್ಜೆಗೇರಿಸಿ ಕಟ್ಟಡ ನಿರ್ಮಿಸಲಾಗಿದೆ. ಆದರೆ ಪೂರ್ಣಪ್ರಮಾಣದ ಹುದ್ದೆಗಳು ಮಂಜೂರಾಗಿಲ್ಲ. ಉಳಿದ ಗಡಿಕೇಶ್ವಾರ ಮತ್ತು ಕುಂಚಾವರಂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಶೇ 50ರಷ್ಟು ಸಿಬ್ಬಂದಿ ಕೊರತೆಯಿದೆ. ಹಿರಿಯ ಆರೋಗ್ಯ ಅಧಿಕಾರಿ ತಜ್ಞ ವೈದ್ಯರು ಮತ್ತು ನರ್ಸಿಂಗ್‌ ಅಧಿಕಾರಿ ಹುದ್ದೆಗಳು ಖಾಲಿಯಿವೆ. ಸ್ತ್ರೀ ರೋಗ ತಜ್ಞ ವೈದ್ಯರ ಸೇವೆ ಮತ್ತು ಮಕ್ಕಳ ರೋಗ ತಜ್ಞ ವೈದ್ಯರ ಸೇವೆ ಇದ್ದರೂ ಸಿಜೇರಿಯನ್ ಹೆರಿಗೆ ಸೌಲಭ್ಯವಿಲ್ಲ. ಸೋನೊಗ್ರಫಿ ಮತ್ತು ಎಕ್ಸ್‌ರೇ ಸೇವೆ ಲಭ್ಯವಿಲ್ಲ. ಯಂತ್ರೋಪಕರಣಗಳು ಹಳೆಯದಾಗಿದ್ದು ಹೊಸ ಡಿಜಿಟಲ್ ಯಂತ್ರೋಪಕರಣ ಒದಗಿಸಬೇಕು. ಸೊನೋಗ್ರಫಿ ಸೌಲಭ್ಯ ಕಲ್ಪಿಸಿದರೆ ಹೆಚ್ಚು ಅನುಕೂಲವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.