ADVERTISEMENT

‘ಪ್ರಯತ್ನದಲ್ಲಿ ಅಡಗಿದೆ ಪ್ರತಿ ಸಾಧನೆ’

ನೂತನ ವಿದ್ಯಾಲಯ ಸಂಸ್ಥೆಯ ಸಾಂಸ್ಕೃತಿಕ ಉತ್ಸವಕ್ಕೆ ತೆರೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2026, 7:13 IST
Last Updated 18 ಜನವರಿ 2026, 7:13 IST
ಕಲಬುರಗಿಯ ನೂತನ ವಿದ್ಯಾಲಯ ಸಂಸ್ಥೆಯ ಸಾಂಸ್ಕೃತಿಕ ಉತ್ಸವದಲ್ಲಿ ಬಾಲಕರ ಪ್ರೌಢಶಾಲೆ ಮಕ್ಕಳು ಪ್ರದರ್ಶಿಸಿದ ‘ಜೀವನ ಜಾತ್ರೆ’ ನಾಟಕ ಗಮನ ಸೆಳೆಯಿತು
–ಪ್ರಜಾವಾಣಿ ಚಿತ್ರ
ಕಲಬುರಗಿಯ ನೂತನ ವಿದ್ಯಾಲಯ ಸಂಸ್ಥೆಯ ಸಾಂಸ್ಕೃತಿಕ ಉತ್ಸವದಲ್ಲಿ ಬಾಲಕರ ಪ್ರೌಢಶಾಲೆ ಮಕ್ಕಳು ಪ್ರದರ್ಶಿಸಿದ ‘ಜೀವನ ಜಾತ್ರೆ’ ನಾಟಕ ಗಮನ ಸೆಳೆಯಿತು –ಪ್ರಜಾವಾಣಿ ಚಿತ್ರ   

ಕಲಬುರಗಿ: ‘ಪ್ರತಿಯೊಂದು ಸಾಧನೆ ನಿಮ್ಮ ಪ್ರಯತ್ನದ ಮೇಲೆ ನಿಂತಿರುತ್ತದೆ. ಹಾಗಾಗಿ, ವಿದ್ಯಾರ್ಥಿಗಳು ಅಭಿರುಚಿ ಇರುವ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ನಿರಂತರ ಮತ್ತು ಪ್ರಾಮಾಣಿಕ ಪ್ರಯತ್ನ ಮಾಡಬೇಕು’ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶಶಿಕಾಂತ ಎಸ್.ಉಡಿಕೇರಿ ಹೇಳಿದರು.

ನಗರದ ನೂತನ ವಿದ್ಯಾಲಯ ಸಂಸ್ಥೆಯ ಸತ್ಯಪ್ರಮೋದತೀರ್ಥ ಸಭಾಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಂಸ್ಥೆಯ ಸಾಂಸ್ಕೃತಿಕ ಉತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಆಟ, ಪಾಠ, ಮನೋರಂಜನೆ ಎಲ್ಲವೂ ಮುಖ್ಯ. ಆದರೆ, ಓದುವಾಗ ತುಂಬಾ ಗಂಭೀರತೆ ಇರಬೇಕು. ಓದುವ ವಿಷಯದ ಮೇಲೆ ಶ್ರದ್ಧೆ ಇರಬೇಕು. ಅವರ ಮೇಲೆ ಪಾಲಕರು ನಿಗಾ ಇಡಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಇಂದಿನ ಕಾಲಕ್ಕೆ ವಿದ್ಯಾಸಂಸ್ಥೆಗಳು ಆದಾಯ ತರುವ ಫ್ಯಾಕ್ಟರಿಗಳಾಗಿವೆ. ಅಂಥ ಸಂಸ್ಥೆಗಳ ಮಧ್ಯದಲ್ಲಿ ನೂತನ ವಿದ್ಯಾಲಯ ಸಂಸ್ಥೆಯು ಕ್ಯಾಪಿಟೇಶನ್, ಡೊನೇಶನ್‌ ಒಳಸುಳಿಗೆ ಸಿಗದೆ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗುತ್ತಿದೆ. ಸಂಸ್ಥೆಯ ಬೇರು ಗಟ್ಟಿಯಾಗಿರುವ ಕಾರಣ 120 ವರ್ಷಗಳಿಂದ ಇಲ್ಲಿ ಕಲಿಯುವ ಮಕ್ಕಳ ಉಜ್ವಲ ಭವಿಷ್ಯ ರೂಪಿಸುತ್ತಿದೆ’ ಎಂದು ಶ್ಲಾಘಿಸಿದರು.

ಸಂಸ್ಥೆಯ ಉಪಾಧ್ಯಕ್ಷೆ ಸುಧಾ ಕುಲಕರ್ಣಿ ಕರಲಗಿಕರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಬೆಳೆಯುವ ಸಿರಿ ಮೊಳಕೆಯಲ್ಲಿ ಅನ್ನುವ ಹಾಗೆ ಪ್ರತಿ ಮಗುವಿನಲ್ಲೂ ಸುಪ್ತ ಕಲೆ ಅಡಗಿರುತ್ತದೆ. ಅದನ್ನು ಎತ್ತಿಹಿಡಿಯುವ ಚಾಣಾಕ್ಷತನ ಶಿಕ್ಷಕರದ್ದಾಗಿರುತ್ತದೆ. ನಮ್ಮ ಸಂಸ್ಥೆಯ ಎಲ್ಲಾ ಶಾಲಾ–ಕಾಲೇಜುಗಳಲ್ಲಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೂ ಮಹತ್ವ ಕೊಡಲಾಗುತ್ತಿದೆ ಎನ್ನುವುದಕ್ಕೆ ಎರಡು ದಿನ ನಡೆದ ಈ ಉತ್ಸವವೇ ಸಾಕ್ಷಿ’ ಎಂದರು.

ಸಂಸ್ಥೆಯ ಉಪಾಧ್ಯಕ್ಷರಾದ ಎಸ್.ಎಸ್.ಸಿದ್ಧಾಪೂರಕರ್, ಬಿ.ಜಿ.ದೇಶಪಾಂಡೆ, ಖಜಾಂಚಿ ಎಂ.ಎಚ್.ಚಾರಿ, ಕಾರ್ಯದರ್ಶಿ ಅಭಿಜಿತ ಎ.ದೇಶಮುಖ, ಜಂಟಿ ಕಾರ್ಯದರ್ಶಿ ಉದಯಕುಮಾರ ಹೊನಗುಂಟಿಕರ್‌, ಸಾಂಸ್ಕೃತಿಕ ಉತ್ಸವ ಸಮಿತಿ ಉಪ ಚೇರ್ಮನ್ ಆನಂದ ಆರ್.ಪಪ್ಪು, ಎನ್‌ವಿ ಬಿ.ಇಡಿ ಕಾಲೇಜು ಪ್ರಾಚಾರ್ಯ ಗೋತಗಿಕರ ವಿಜಯಕುಮಾರ ಉಪಸ್ಥಿತರಿದ್ದರು.

ಸಾಂಸ್ಕೃತಿಕ ಉತ್ಸವದ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳ ಪ್ರಮಾಣಪತ್ರಗಳನ್ನು ಆಯಾ ಶಾಲಾ, ಕಾಲೇಜು, ವಿಭಾಗಗಳ ಮುಖ್ಯಸ್ಥರಿಗೆ ವಿತರಿಸಲಾಯಿತು. ಮುಂದಿನ ಎರಡು ವರ್ಷಗಳ ಸಾಂಸ್ಕೃತಿಕ ಉತ್ಸವದ ಜವಾಬ್ದಾರಿಯನ್ನು ಎನ್‌.ವಿ ಆಂಗ್ಲ ಮಾಧ್ಯಮ ಶಾಲೆಗೆ ವಹಿಸಲಾಯಿತು.

ಮುಖ್ಯಗುರು ಜಿ.ಎಂ.ಪೂಜಾರ ಸ್ವಾಗತಿಸಿದರು. ಮಹೇಶ ಜೋಶಿ ನಿರೂಪಿಸಿದರು. ಭರತಕುಮಾರ ಕುಲಕರ್ಣಿ ವಂದಿಸಿದರು. ಇದಕ್ಕೂ ಮೊದಲು ನೂತನ ವಿದ್ಯಾಲಯ ಬಾಲಕರ ಪ್ರೌಢಶಾಲೆ ಮಕ್ಕಳು ಪ್ರದರ್ಶಿಸಿದ ‘ಜೀವನ ಜಾತ್ರೆ’ ನಾಟಕ ಗಮನ ಸೆಳೆಯಿತು.

ಉತ್ಸವದಲ್ಲಿ ಭೂತಕೋಲ ಪ್ರದರ್ಶಿಸಿದ ಬಾಲಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.