ADVERTISEMENT

ಇಷ್ಟಲಿಂಗ ಸಮಾನತೆಯ ಪ್ರತೀಕ: ಡಾ.ನೀಲಾಂಬಿಕಾ ಪೊಲೀಸ್‌ ಪಾಟೀಲ

‘ಆನ್‍ಲೈನ್ ಅರಿವಿನ ಮನೆ’ಯಲ್ಲಿ ಡಾ.ನೀಲಾಂಬಿಕಾ ಪೊಲೀಸ್‌ ಪಾಟೀಲ ಅಭಿಮತ

​ಪ್ರಜಾವಾಣಿ ವಾರ್ತೆ
Published 15 ಜೂನ್ 2020, 13:05 IST
Last Updated 15 ಜೂನ್ 2020, 13:05 IST
ಕಲಬುರ್ಗಿಯಲ್ಲಿ ಭಾನುವಾರ ನಡೆದ ಆನ್‌ಲೈನ್‌ ಅರಿವಿನ ಮನೆ ದತ್ತಿ ಕಾರ್ಯಕ್ರಮದಲ್ಲಿ ಡಾ.ನೀಲಾಂಬಿಕಾ ಪೊಲೀಸ್‌ ಪಾಟೀಲ ಮಾತನಾಡಿದರು
ಕಲಬುರ್ಗಿಯಲ್ಲಿ ಭಾನುವಾರ ನಡೆದ ಆನ್‌ಲೈನ್‌ ಅರಿವಿನ ಮನೆ ದತ್ತಿ ಕಾರ್ಯಕ್ರಮದಲ್ಲಿ ಡಾ.ನೀಲಾಂಬಿಕಾ ಪೊಲೀಸ್‌ ಪಾಟೀಲ ಮಾತನಾಡಿದರು   

ಕಲಬುರ್ಗಿ: ‘ಲಿಂಗವು ಶರಣರಲ್ಲಿ ಕೇವಲ ಒಂದು ಉಪಾಸ್ಯ ಸಾಧನವಾಗಿ ಉಳಿಯಲಿಲ್ಲ. ಲಿಂಗ ಅವರಲ್ಲಿ ತತ್ವವಾಯಿತು, ನಡೆಯಾಯಿತು, ನುಡಿಯಾಯಿತು. ಲಿಂಗವನ್ನು ಸಮಾನತೆಯ ಪ್ರತೀಕವನ್ನಾಗಿಸಿದವರು ಬಸವಣ್ಣನ’ ಎಂದು ಇಲ್ಲಿನ ಗೋದುತಾಯಿ ಮಹಿಳಾ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ನೀಲಾಂಬಿಕಾ ಪೊಲೀಸ್‌ ಪಾಟೀಲ ಹೇಳಿದರು.

ಕಲಬುರ್ಗಿ ಬಸವ ಸಮಿತಿಯ ಅನುಭವ ಮಂಟಪದಲ್ಲಿ ಭಾನುವಾರ ನಿಜಸುಖಿ ಶರಣ ಹಡಪದ ಅಪ್ಪಣ್ಣ ಸಮಾಜ ಹಾಗೂ ಡಾ. ಎಸ್.ಆರ್. ಗುಂಜಾಳ ಅವರು ಬಸವ ತತ್ವ ಪ್ರಚಾರಾರ್ಥ ಏರ್ಪಡಿಸಿದ್ದ ‘ಆನ್‍ಲೈನ್ ಅರಿವಿನ ಮನೆ’ 631ನೇ ದತ್ತಿ ಕಾರ್ಯಕ್ರಮದಲ್ಲಿ ಶರಣೆ ಹಡಪದ ಲಿಂಗಮ್ಮನವರ ಲಿಂಗನಿಷ್ಠೆ ಕುರಿತು ಅವರು ಅನುಭಾವ ನೀಡಿದರು.

‘ಹಡಪದ ಲಿಂಗಮ್ಮ ಇಷ್ಟಲಿಂಗಕ್ಕೆ ‘ಮಹಾಘನ’ ಎಂದು ಹೇಳುತ್ತಾಳೆ. ತನ್ನ ದಿನಚರಿಯನ್ನು ಒಂದು ವಚನದಲ್ಲಿ ಹೇಳುತ್ತಾ ‘ಲಿಂಗದಲ್ಲಿ ನಡೆದು, ಆ ಲಿಂಗದಲ್ಲಿ ನುಡಿದು, ಲಿಂಗದಲ್ಲಿ ಮುಟ್ಟಿ, ಲಿಂಗದಲ್ಲಿ ವಾಸಿಸಿ, ಲಿಂಗದಲ್ಲಿಯೇ ಕೇಳಿ ಲಿಂಗವಾಗಿ ನೋಡಿ, ಸರ್ವಾಂಗವೂ ಲಿಂಗವಾಗಿ, ಆ ಲಿಂಗವ ನೋಡುವ ಕಂಗಳಲ್ಲಿಯೇ ಐಕ್ಯ ಕಂಡೆಯಾ ಅಪ್ಪಣ್ಣಪ್ರಿಯ ಚನ್ನಬಸವಣ್ಣ’ ಎಂದು ಹೇಳಿ ತನ್ನ ಲಿಂಗನಿಷ್ಠೆಯನ್ನು ಮೆರೆಯುತ್ತಾಳೆ’ ಎಂದರು.

ADVERTISEMENT

‘ಶರಣರ ವಚನಗಳು ಬೌದ್ಧಿಕ ಪ್ರದರ್ಶನಕ್ಕಾಗಿ ಬರೆದವುಗಳಲ್ಲ. ತಮ್ಮ ಬದುಕನ್ನು, ಬದುಕಿನಲ್ಲಿ ಅನುಭವಿಸಿದ್ದನ್ನು ತಮ್ಮ ವಚನಗಳಲ್ಲಿ ಉಲ್ಲೇಖಿಸಿದ್ದಾರೆ. ಅವರ ಅನುಭಾವದ ನೆಲೆಯಲ್ಲಿ ನಿಂತು ನೋಡಿದಾಗ ಮಾತ್ರ ಶರಣರ ವಚನಗಳ ಆಂತರ್ಯ ನಮ್ಮ ಅರಿವಿಗೆ ನಿಲುಕುತ್ತದೆ’ ಎಂದು ಸಲಹೆ ನೀಡಿದರು.‌

‘ಲಿಂಗಮ್ಮನವರು ಕನಿಷ್ಠದಲ್ಲಿ ಹುಟ್ಟಿದೆ, ಉತ್ತಮರಲ್ಲಿ ಬೆಳೆದೆ ಎಂಬ ಮಾತನ್ನು ಹೇಳುವಾಗ ಬಸವಾದಿ ಶರಣರ ಸಂಪರ್ಕದಿಂದ ತಮ್ಮ ಜೀವನ ಪಾವನವಾಯಿತೆಂದು ಹೇಳುವಲ್ಲಿ ಆಗಿನ ಸಾಮಾಜಿಕ ಸ್ಥಿತಿಯ ಬಗ್ಗೆ ಬೆಳಕು ಚೆಲ್ಲುತ್ತಾರೆ. ಬಸವಣ್ಣನವರು ಜಾತಿ ತಾರತಮ್ಯ ಮಾಡದೆ ಸರ್ವರಿಗೂ ಇಷ್ಟಲಿಂಗಧಾರಣೆಯ ಅವಕಾಶ ಕಲ್ಪಿಸಿದ್ದು ನಿಜಕ್ಕೂ ಕ್ರಾಂತಿಕಾರಿ ಸಂಗತಿ’ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಬಸವ ಸಮಿತಿ ಅಧ್ಯಕ್ಷೆ ಡಾ.ವಿಲಾಸವತಿ ಖೂಬಾ, ‘ಲಿಂಗತ ತತ್ವವನ್ನೇ ನಮ್ಮಲ್ಲಿ ಅನೇಕರು ತಿಳಿದುಕೊಂಡಿಲ್ಲ. ಇಷ್ಟಲಿಂಗಧಾರಿ ಆದಾಗ ಮಾತ್ರ ಲಿಂಗತತ್ವದ ಅರಿವು ಸಾಧ್ಯವಾಗುವುದು’ ಎಂದರು.

ಸಮಿತಿಯ ಉಪಾಧ್ಯಕ್ಷೆ ಡಾ.ಜಯಶ್ರೀ ದಂಡೆ, ದತ್ತಿ ದಾಸೋಹಿಗಳಾದ ಜಿಲ್ಲಾ ಹಡಪದ ಸಮಾಜದ ಅಧ್ಯಕ್ಷ ಈರಣ್ಣ ಹಡಪದ ವೇದಿಕೆ ಮೇಲಿದ್ದರು ಇದ್ದರು. ಡಾ.ವೀರಣ್ಣ ದಂಡೆ, ಬಂಡಪ್ಪ ಕೇಸೂರ ಪಾಲ್ಗೊಂಡಿದ್ದರು. ಪ್ರಧಾನ ಕಾರ್ಯದರ್ಶಿ ಎಚ್.ಕೆ. ಉದ್ದಂಡಯ್ಯ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.