ಪೊಲೀಸ್
(ಸಾಂದರ್ಭಿಕ ಚಿತ್ರ)
ಕಲಬುರಗಿ: ಆನ್‌ಲೈನ್‌ನಲ್ಲಿ ಷೇರು ಮಾರುಕಟ್ಟೆಯ ಹೂಡಿಕೆಯನ್ನು ತ್ವರಿತವಾಗಿ ಕಲಿತು ಹೆಚ್ಚಿನ ಲಾಂಭಾಂಶ ಗಳಿಸುವಂತೆ ಸಿಮೆಂಟ್ ಕಾರ್ಖಾನೆಯ ಕಾರ್ಮಿಕರೊಬ್ಬರಿಗೆ ಆಮಿಷವೊಡ್ಡಿ, ಆತನಿಂದ ₹12.31 ಲಕ್ಷ ಪಡೆದು ವಂಚಿಸಿದ ಆರೋಪದಡಿ ಮಳಖೇಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಲ್ಟ್ರಾಟೆಕ್ ಸಿಮೆಂಟ್ ಕಾರ್ಖಾನೆಯ ಕಾರ್ಮಿಕ, ಮಧ್ಯಪ್ರದೇಶ ಮೂಲದ ನವನೀತ್ ಸುಂದರಲಾಲ್ ಹಣ ಕಳೆದುಕೊಂಡ ಸಂತ್ರಸ್ತ.
ಇನ್‌ಸ್ಟಾಗ್ರಾಮ್‌ನಲ್ಲಿ ತ್ವರಿತವಾಗಿ ಷೇರು ಮಾರುಕಟ್ಟೆ ಕಲಿಯಿರಿ ಎಂಬ ಜಾಹೀರಾತಿಗೆ ನವನೀತ್ ಅವರು ಆಕರ್ಷಿತರಾದರು. ಜಾಹೀರಾತಿನಲ್ಲಿ ಸೂಚಿಸಿದ್ದ ಲಿಂಕ್ ಕ್ಲಿಕ್ ಮಾಡಿ, ವಾಟ್ಸ್‌ಆ್ಯಪ್ ಗ್ರೂಪ್‌ಗೂ ಸೇರಿದರು. ಗ್ರೂಪ್‌ನಲ್ಲಿದ್ದ ಸದಸ್ಯರು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದರಿಂದ ತಮಗೂ ಲಾಭವಾಗಿದೆ ಎಂಬ ಮೆಸೇಜ್ ಹಾಕಿದರು. ಅದನ್ನು ನಂಬಿ, ವಂಚಕರು ಸೂಚಿಸಿದ ಆ್ಯಪ್ ಅನ್ನು ನವನೀತ್ ಡೌನ್‌ಲೋಡ್ ಸಹ ಮಾಡಿಕೊಂಡರು.
ಆ್ಯಪ್‌ನಲ್ಲಿ ಆರಂಭದಲ್ಲಿ ₹10 ಸಾವಿರ ಹೂಡಿಕೆ ಮಾಡಿದ್ದು, ಲಾಭಾಂಶದ ಹಣ ಎಂಬಂತೆ ₹60 ಸಾವಿರ ತೋರಿಸಿ ವಿಶ್ವಾಸ ಮೂಡಿಸಿದ್ದರು. ಇದನ್ನು ನಂಬಿ ಹಂತ– ಹಂತವಾಗಿ ₹12.31 ಲಕ್ಷ ಹೂಡಿಕೆ ಮಾಡಿದ್ದರು. ಲಾಭದ ಹಣ ಎಂಬಂತೆ ₹25 ಲಕ್ಷ ಸಹ ತೋರಿಸಿದ್ದರು. ಹೂಡಿಕೆ ಮತ್ತು ಲಾಭದ ಹಣ ಹಿಂಪಡೆಯಲು ಯತ್ನಿಸಿ ವಿಫಲವಾದರು. ಕೆಲ ದಿನಗಳ ಬಳಿಕ ಆ್ಯಪ್ ಸಹ ತೆರೆದುಕೊಳ್ಳಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಜೀವ ಬೆದರಿಕೆಯೊಡ್ಡಿ ಬೈಕ್ ಕಸಿದು ಪರಾರಿ
ಅಫಜಲಪುರ ತಾಲ್ಲೂಕಿನಲ್ಲಿ ರಾತ್ರಿ ವೇಳೆ ದಾಬಾದಲ್ಲಿ ಊಟ ಮಾಡಲು ತೆರಳುತ್ತಿದ್ದು ಬೈಕ್ ಸವಾರರನ್ನು ಬೆನ್ನಟ್ಟಿ, ಅವರನ್ನು ತಡೆದು ನಿಲ್ಲಿಸಿದ ಇಬ್ಬರು ದುಷ್ಕರ್ಮಿಗಳು, ಜೀವ ಬೆದರಿಕೆಯೊಡ್ಡಿ ಬೈಕ್ ಕಸಿದು ಪರಾರಿಯಾಗಿದ್ದಾರೆ.
ದಿಕ್ಸಂಗಾ (ಬಿ) ಗ್ರಾಮದ ಮಲ್ಲಿನಾಥ ಶಿವಾನಂದ ಅವರಿಗೆ ಸೇರಿದ ಬೈಕ್ ಅನ್ನು ಇಬ್ಬರು ಕಳ್ಳರು ಕಿತ್ತುಕೊಂಡಿದ್ದು, ರೇವೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಲ್ಲಿನಾಥ ಸೇರಿ ನಾಲ್ವರು ಸ್ನೇಹಿತರು ಸ್ಟೇಷನ್ ಗಾಣಗಾಪುರ ಸಮೀಪದ ದಾಬಾವೊಂದರಲ್ಲಿ ಊಟ ಮಾಡಲು ಎರಡು ಬೈಕ್‌ಗಳ ಮೇಲೆ ತೆರಳುತ್ತಿದ್ದರು. ಮಲ್ಲಿನಾಥನ ಚಲಾಯಿಸುತ್ತಿದ್ದ ಬೈಕ್ ಅನ್ನು ವೇಗವಾಗಿ ಬೆನ್ನಟ್ಟಿ ಬಂದ ಕಳ್ಳರು, ರಸ್ತೆಯಲ್ಲಿ ಅಡ್ಡಗಟ್ಟಿ ನಿಲ್ಲಿಸಿದರು. ಬೈಕ್‌ನಿಂದ ಇಳಿಯದಿದ್ದರೆ ಕಲ್ಲಿನಿಂದ ಹೊಡೆಯುವುದಾಗಿ ಬೆದರಿಕ ಹಾಕಿ, ಕೀ ಕಸಿದುಕೊಂಡು ಪರಾರಿಯಾದರು ಎಂದು ಪೊಲೀಸರು ತಿಳಿಸಿದ್ದಾರೆ.
ಜೂಜಾಟದ ಪ್ರತ್ಯೇಕ ಪ್ರಕರಣ: ₹ 6.89 ಲಕ್ಷದ ಸ್ವತ್ತುಗಳು ಜಪ್ತಿ
ಜಿಲ್ಲೆಯ ಯಡ್ರಾಮಿ ಮತ್ತು ಸುಲೇಪೇಟ ಪೊಲೀಸ್ ಠಾಣೆಗಳು ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ಕುಳಿತು ಜೂಜಾಟ ಆಡುತ್ತಿದ್ದವರ ಮೇಲೆ ದಾಳಿ ಮಾಡಿದ ಪೊಲೀಸರು, 14 ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ನಗದು ಸೇರಿ ₹16.89 ಲಕ್ಷ ಮೌಲ್ಯದ ಸ್ವತ್ತುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಯಡ್ರಾಮಿ ತಾಲ್ಲೂಕಿನ ಸುಂಬಡ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಕುಳಿತ ಗುಂಪೊಂದು ಜೂಜಾಟ ಆಡುತ್ತಿತ್ತು. ಪೊಲೀಸರು ದಾಳಿ ಮಾಡಿ ಶರಣು ಮಲ್ಲಣ್ಣ, ಅಭಿಶೇಕ್ ಶರಣಪ್ಪ, ಭಾಸ್ಕರ್ ಏಡಕೆ ಹಾಗೂ ದಶರಥ ರಾಠೋಡ ಅವರನ್ನು ವಶಕ್ಕೆ ಪಡೆದರು. ಆರೋಪಿಗಳಿಂದ ನಗದು, ಎರಡು ಕಾರು, ಬೈಕ್ ಸೇರಿ ₹5.51 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಕ್ಕೆ ಪಡೆದರು.
ಸುಲೇಪೇಟ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಕುಳಿತ ಜೂಜಾಟ ಆಡುತ್ತಿದ್ದ ನಾಗರಾಜ ಸಿದ್ದರಾಮಪ್ಪ, ಸಿರಾಜ್, ಖತಲಪ್ಪ ಬಸಣ್ಣ, ಶಿವಾನಂದ ಕಪೂರ ಸೇರಿ 10 ಆರೋಪಿಗಳನ್ನು ಸುಲೇಪೇಟ ಠಾಣೆಯ ಪೊಲೀಸರು ವಶಕ್ಕೆ ಪಡೆದರು. ಆರೋಪಿಗಳಿಂದ ₹1.38 ಲಕ್ಷ ನಗದು ಜಪ್ತಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.