ADVERTISEMENT

ಸಿದ್ದರಾಮಯ್ಯ ಪಾಕ್‌ ಏಜೆಂಟ್: ಶಾಸಕ ಬಸನಗೌಡ ಪಾಟೀಲ ಯತ್ನಾಳ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2025, 9:05 IST
Last Updated 27 ಏಪ್ರಿಲ್ 2025, 9:05 IST
   

ಕಲಬುರಗಿ: ‘ಸಿದ್ದರಾಮಯ್ಯ ಒಬ್ಬ ಮುಸ್ಲಿಂ ಏಜೆಂಟ್, ಪಾಕಿಸ್ತಾನದ ಏಜೆಂಟ್. ಅವನಿಗೆ ಮಾನ ಮರ್ಯಾದೆ ಇಲ್ಲ’ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಾಗ್ದಾಳಿ ನಡೆಸಿದರು.

‘ಪಾಕ್‌ ಮೇಲೆ ಯುದ್ಧ ಸಾರುವ ಅಗತ್ಯವಿಲ್ಲ’ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಶಾಸಕ ಯತ್ನಾಳ ನಗರದಲ್ಲಿ ಭಾನುವಾರ ಸುದ್ದಿಗಾರರಿಗೆ ಹೀಗೆ ಪ್ರತಿಕ್ರಿಯಿಸಿದರು.

‘ಕರ್ನಾಟಕದ ಮುಖ್ಯಮಂತ್ರಿಯಾಗಿ, ಭಾರತದ ಪ್ರಜೆಯಾಗಿ ಹಿಂದೂಗಳನ್ನು ಟಾರ್ಗೆಟ್‌ ಮಾಡಿ ದಾಳಿ ನಡೆಸಿದರೂ ಅವರು ಹೀಗೆ ಹೇಳುತ್ತಾರೆ. ಹಾಗಾದ್ರೆ ಸಿದ್ದರಾಮಯ್ಯಗೆ ಹಿಂದೂಗಳು ವೋಟ್ ಹಾಕಿಲ್ವಾ? ಬರಿ ಸಾಬರೇ ಮಾತ್ರ ವೋಟು ಹಾಕಿದ್ದಾರಾ? ಕಾಂಗ್ರೆಸ್‌ ಸಾಬರ ಎಂಜಲು ತಿನ್ನುವ ಪಕ್ಷವಾಗಿದೆ.‌ ಅವರಿಗೆ ದೇಶ, ಧರ್ಮ ಮುಖ್ಯವಲ್ಲ’ ಎಂದು ಹರಿಹಾಯ್ದರು.

ADVERTISEMENT

‘ಕಾಂಗ್ರೆಸ್ಸಿಗರು ಪಾಕಿಸ್ತಾನದ ಪರವಾಗಿ ಮಾತನಾಡುತ್ತಿದ್ದಾರೆ. ಯುದ್ಧ ಬೇಕು, ಬೇಡ ಎಂಬುದು ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದ ವಿಚಾರವಲ್ಲ. ಅದನ್ನು ನಿರ್ಧರಿಸುವವರು ಪ್ರಧಾನಿ, ರಾಷ್ಟ್ರಪತಿ ಹಾಗೂ ಸೈನ್ಯ. ಸಿದ್ದರಾಮಯ್ಯ ಬರೀ ಕರ್ನಾಟಕದ ಮುಖ್ಯಮಂತ್ರಿಯಷ್ಟೇ. ರಾಜ್ಯದಲ್ಲಿ ಹಿಂದೂಗಳು ಮೇಲೆ ನಡೆಯುತ್ತಿರುವ ದೌರ್ಜನ್ಯ, ಲವ್‌ ಜಿಹಾದ್‌, ದಲಿತರ ಮೇಲಿನ ಅತ್ಯಾಚಾರ ತಡೆಗೆ ಗಮನಕೊಡಲಿ’ ಎಂದು ಸಲಹೆ ನೀಡಿದರು.

‘ಹಾವೇರಿಯಲ್ಲಿ ದಲಿತ ಹೆಣ್ಣು ಮಗಳ ಮೇಲೆ ಅತ್ಯಾಚಾರವಾಗಿದೆ. ಈ ಮಹಾನ್‌ ದಲಿತ ನಾಯಕ ಪ್ರಿಯಾಂಕ್‌ ಖರ್ಗೆ ಎಲ್ಲಿದ್ದಾರೆ? ಪ್ರಿಯಾಂಕ್‌ ಧರ್ಮ ಕೇಳಿ ಹೊಡೆದಿಲ್ಲ ಎನ್ನುತ್ತಾರೆ ಎಂದರೆ ಅವರಿಗೆ ಪ್ರಬುದ್ಧತೆ ಇದೆಯಾ? ಈಗಲಾದರೂ ಹಿಂದೂಗಳು ಒಂದಾಗಬೇಕು. ವೀರಶೈವರು, ಲಿಂಗಾಯತರು ನಾವೆಲ್ಲ ಒಂದೇ. ನಾವೆಲ್ಲ ವಿಭೂತಿಯನ್ನು ಹಚ್ಚಿಕೊಂಡು, ಲಿಂಗ ಪೂಜೆ ಮಾಡುತ್ತೇವೆ’

‘ತಾಳ್ಮೆಗೊಂದು ಮಿತಿಯಿದೆ. ಪಾಕ್‌ ಇನ್ನೆಂದೂ ಭಾರತದತ್ತ ತಲೆಹಾಕದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನಕ್ಕೆ ಬುದ್ಧಿಕಲಿಸುವ ವಿಶ್ವಾಸವಿದೆ’ ಎಂದು ಶಾಸಕ ಯತ್ನಾಳ ಭರವಸೆ ವ್ಯಕ್ತಪಡಿಸಿದರು.

‘ಮುಸ್ಲಿಮರಿಗಿಂತಲೂ ಹಿಂದೂಗಳಲ್ಲಿರುವ ಕೆಲವು ಮನಸ್ಥಿತಿಗಳು ಅಪಾಯಕಾರಿಯಾಗಿವೆ’ ಎಂದರು.

‘ಕಲಬುರಗಿಯಲ್ಲಿ ರಸ್ತೆಗೆ ಅಂಟಿಸಿದ ಪಾಕ್‌ ಧ್ವಜವನ್ನು ಮುಸ್ಲಿಂ ಮಹಿಳೆಯರು ತೆಗೆಯಲು ಕಾರಣವೇನು? ಅದಕ್ಕೂ ಆ ಮಹಿಳೆಗೂ ಏನು ಸಂಬಂಧ? ಇಸ್ಲಾಂನಲ್ಲಿ ಮತ್ತೊಂದು ಧರ್ಮವನ್ನು ಸೌಹಾರ್ದದಿಂದ ನೋಡುವ ಗುಣವಿಲ್ಲ ಎಂದು ಡಾ.ಅಂಬೇಡ್ಕರ್‌ ಹೇಳಿದ್ದರು. ಭಾರತ–ಪಾಕಿಸ್ತಾನ ಪ್ರತ್ಯೇಕಿಸುವುದಾದರೆ, ಭಾರತದಲ್ಲಿ ಕೊನೆಯ ಮುಸ್ಲಿಂ ಪಾಕ್‌ಗೆ ಹೋಗಬೇಕು. ಪಾಕ್‌ನಲ್ಲಿರುವ ಕೊನೆಯ ಹಿಂದೂ ಭಾರತಕ್ಕೆ ಬರಬೇಕು ಎಂದು ಬಾಬಾಸಾಹೇಬರು ಹೇಳಿದ್ದರು. ಇದೀಗ ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ್ ಖರ್ಗೆ ಅವರು ತಾವು ಬಾಬಾಸಾಹೇಬ ಅಂಬೇಡ್ಕರ್ ಅನುಯಾಯಿಗಳೋಯ ಅಥವಾ ಒವೈಸಿ ಅನುಯಾಯಿಗಳೋ ಎಂಬುದನ್ನು ಜನರ ಮುಂದೆ ಹೇಳಬೇಕು’ ಎಂದು ಒತ್ತಾಯಿಸಿದರು.

‘ಸಿದ್ದರಾಮಯ್ಯ ಹೇಳಿಕೆ ಪಾಕ್‌ ಮಾಧ್ಯಮಗಳಲ್ಲಿ ಹರಿದಾಡುತ್ತಿದೆಯಲ್ಲ’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯತ್ನಾಳ, ‘ಸಿದ್ದರಾಮಯ್ಯ ಪಾಕಿಸ್ತಾನದವರಿಗೆ ಹುಟ್ಟಿದ ಹಾಗೆ ಮಾತಾಡಿದ್ರೆ ಹೊಗಳುತ್ತಾರೆ. ಸಿದ್ದರಾಮಯ್ಯಗೆ ಮಾನ, ಮರ್ಯಾದೆ ಇದೇನಾ? ದೇಶಕ್ಕೆ ಆಪತ್ತು ಬಂದಾಗ ಈ ರೀತಿ ಮಾತಾಡೋದು ಸರಿನಾ?’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.