ಚಿಂಚೋಳಿ: ಪ್ರತಿಕೂಲ ಹವಾಮಾನ ಮತ್ತು ಮಾರುಕಟ್ಟೆಯಲ್ಲಿ ದರ ಕುಸಿತದ ನಡುವೆಯೂ ಪಪ್ಪಾಯಿ ಬೆಳೆದ ದೇಗಲಮಡಿಯ ರೈತ ಸಂಗಪ್ಪ ಭೈರ್ ಖರ್ಚು ವೆಚ್ಚವೆಲ್ಲ ಕಳೆದು ನಿವ್ವಳ ₹ 5 ಲಕ್ಷ ಆದಾಯ ಪಡೆದಿದ್ದಾರೆ.
4 ಎಕರೆಯಲ್ಲಿ ಪಪ್ಪಾಯಿ ಬೇಸಾಯ ಮಾಡಿದ ಅವರು ಸಸಿಗಳನ್ನು ಖರೀದಿಸಿ ತಂದು ನೆಟ್ಟು ಪೋಷಿಸಿ, ರೋಗ ರುಜಿನಗಳು ಮತ್ತು ಕಳೆ ಹತೋಟಿ ಸೇರಿದಂತೆ ಬೆಳೆಯ ನಿರ್ವಹಣೆಗಾಗಿ ₹ 2.5 ಲಕ್ಷದಿಂದ ₹ 3 ಲಕ್ಷ ಖರ್ಚು ಮಾಡಿದ್ದಾರೆ.
60 ಟನ್ ಉತ್ಪನ್ನ ಪಡೆದಿರುವ ಇವರು, ಮಾರುಕಟ್ಟೆಯಲ್ಲಿ 25 ಟನ್ ಹಣ್ಣುಗಳನ್ನು ಪ್ರತಿ ಕೆ.ಜಿಗೆ ₹ 22 ದರದಲ್ಲಿ ಮಾರಾಟ ಮಾಡಿದ್ದಾರೆ.
2 ತಿಂಗಳಿನಿಂದ ಹಣ್ಣಿನ ದರ ತೀವ್ರ ಕುಸಿತ ಕಂಡಿದ್ದು, ಈಗ ಪ್ರತಿ ಕೆ.ಜಿಗೆ ₹ 9 ದರದಲ್ಲಿ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದಾರೆ.
25 ಟನ್ ಹಣ್ಣುಗಳಿಂದ ₹ 5.5 ಲಕ್ಷ ಆದಾಯ ಪಡೆದರೆ, 35 ಟನ್ ಹಣ್ಣುಗಳಿಂದ ₹ 3.15ಲಕ್ಷ ಆದಾಯ ಗಳಿಸಿದ್ದಾರೆ. ಪಪ್ಪಾಯಿ ಹಣ್ಣಿನ ಮೂಲಕವೇ ಒಟ್ಟು ₹ 8 ಲಕ್ಷ ವ್ಯವಹಾರ ನಡೆಸಿದ್ದಾರೆ. ಸಮೀಪದ ಹೈದರಾಬಾದ್‌ನ ವ್ಯಾಪಾರಿಗಳು ತೋಟಕ್ಕೆ ಬಂದು ಖರೀದಿಸಿ ಕೊಂಡೊಯ್ದಿದ್ದಾರೆ. ಮಾರುಕಟ್ಟೆಯಲ್ಲಿ ದರ ಕುಸಿಯದೇ ಹೋದರೆ ಬಂಪರ್ ಆದಾಯ ಬರುತ್ತಿತ್ತು.
ಪಪ್ಪಾಯಿ ಹಣ್ಣಿಗೆ ಮಳೆಗಾಲದಲ್ಲಿ ಹೆಚ್ಚು ಬೇಡಿಕೆಯಿತ್ತು. ಹೀಗಾಗಿ ಉತ್ತಮ ದರ ಲಭಿಸಿದೆ. ಆದರೆ ಚಳಿಗಾಲದಲ್ಲಿ ಬೇಡಿಕೆ ಇದ್ದರೂ ದರ ಕುಸಿತ ಬೆಳೆಗಾರರಲ್ಲಿ ಅಚ್ಚರಿ ಮೂಡಿಸಿದೆ.
ಮಹಾರಾಷ್ಟ್ರದಿಂದ ತಂದ ಸಸಿಗಳು ಸಂಗಪ್ಪ ಅವರಿಗೆ ಉತ್ತಮ ಆದಾಯ ತಂದುಕೊಟ್ಟಿವೆ. ಈ ತಳಿಯ ಹಣ್ಣುಗಳ ಗಾತ್ರ ಚೆನ್ನಾಗಿದೆ. ರುಚಿ ಮತ್ತು ಬಣ್ಣ ಆಕರ್ಷಕವಾಗಿದೆ. ಮಾಗುವ ಹಂತದ ಕಾಯಿ ನಾಲ್ಕಾರು ದಿನ ಪೇಪರ್ ಸುತ್ತಿ ಇಟ್ಟರೆ ಹಣ್ಣು ಕೆಡುವುದಿಲ್ಲ ಎಂಬುದು ಅವರ ವಿವರಣೆ.
ಇವರ ಬಳಿ 2-3 ತಿಂಗಳು ಪಪ್ಪಾಯಿ ಹಣ್ಣುಗಳು ಲಭಿಸುತ್ತವೆ. ಪ್ರಸ್ತುತ ಆದಾಯ ಬಂದಿದ್ದರಿಂದ ಪ್ರೇರಣೆ ಪಡೆದ ರೈತ ಪ್ರಸಕ್ತ ವರ್ಷ ಬೇರೆ ಹೊಲದಲ್ಲಿ 3.20 ಎಕರೆ ತೋಟದಲ್ಲಿ ಪಪ್ಪಾಯಿ ಬೇಸಾಯ ನಡೆಸಿದ್ದಾರೆ. ವಾರದ ಹಿಂದಷ್ಟೆ ಸಸಿಗಳನ್ನು ನೆಟ್ಟಿದ್ದಾರೆ.
ಕೃಷಿ ತೋಟಗಾರಿಕೆಯನ್ನು ಅತ್ಯಂತ ಆಸಕ್ತಿಯಿಂದ ನಡೆಸುವ ಪ್ರಗತಿಪರ ರೈತ ಸಂಗಪ್ಪ ಭೈರ್ ಒಬ್ಬ ಶ್ರಮಜೀವಿ. ಅವರು ಬೇರೆ ರೈತರಿಗೆ ಮಾದರಿಯಾಗಿದ್ದಾರೆ.–ವಿರೂಪಾಕ್ಷಯ್ಯ ಮಠಪತಿ, ದೇಗಲಮಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.