ADVERTISEMENT

ಶಿಕ್ಷಣ ರಕ್ಷಿಸಿ, ಎನ್‌ಇಪಿ ತಿರಸ್ಕರಿಸಿ: ಎಸ್‌ಎಫ್‌ಐ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2023, 6:14 IST
Last Updated 29 ಡಿಸೆಂಬರ್ 2023, 6:14 IST
ಜ.12ರಂದು ನಡೆಯಲಿರುವ ಸಂಸತ್ ಚಲೋ ಕಾರ್ಯಕ್ರಮದ ಪೋಸ್ಟರ್‌ಗಳನ್ನು ಕಲಬುರಗಿಯ ಸರ್ದಾರ್‌ ವಲ್ಲಭಭಾಯಿ ವೃತ್ತದಲ್ಲಿ ಗುರುವಾರ ಬಿಡುಗಡೆ ಮಾಡಲಾಯಿತು
ಜ.12ರಂದು ನಡೆಯಲಿರುವ ಸಂಸತ್ ಚಲೋ ಕಾರ್ಯಕ್ರಮದ ಪೋಸ್ಟರ್‌ಗಳನ್ನು ಕಲಬುರಗಿಯ ಸರ್ದಾರ್‌ ವಲ್ಲಭಭಾಯಿ ವೃತ್ತದಲ್ಲಿ ಗುರುವಾರ ಬಿಡುಗಡೆ ಮಾಡಲಾಯಿತು   

ಕಲಬುರಗಿ: ‘ಭಾರತ ರಕ್ಷಿಸಿ, ಬಿಜೆಪಿ ತಿರಸ್ಕರಿಸಿ’ ಘೋಷಣೆಯಡಿ ಎಸ್ಎಫ್ಐ ಮತ್ತು ಜಾತ್ಯತೀತ ವಿದ್ಯಾರ್ಥಿ ಸಂಘಟನೆಗಳ ನೇತೃತ್ವದಲ್ಲಿ ಜನವರಿ 12ರಂದು ನಡೆಯಲಿರುವ ಸಂಸತ್‌ ಚಲೋ ಕಾರ್ಯಕ್ರಮದ ಪೋಸ್ಟರ್‌ಗಳನ್ನು ನಗರದ ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ವೃತ್ತದಲ್ಲಿ ಗುರುವಾರ ಬಿಡುಗಡೆ ಮಾಡಲಾಯಿತು.

ಈ ವೇಳೆ ಮಾತನಾಡಿದ ಎಸ್‌ಎಫ್‌ಐ ಮುಖಂಡರು, ‘ಶಿಕ್ಷಣದ ಖಾಸಗೀಕರಣ, ವಾಣಿಜ್ಯೀಕರಣ ಮತ್ತು ಕೇಂದ್ರೀಕರಣವನ್ನು ನಿಲ್ಲಿಸಬೇಕು. ಸ್ನಾತಕೋತ್ತರ ಹಂತದವರೆಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡುವ ಕಾಯ್ದೆ ಜಾರಿಗೊಳಿಸಬೇಕು. ಸರ್ವರಿಗೂ ಶಿಕ್ಷಣ ಮತ್ತು ಉದ್ಯೋಗ ಖಾತರಿಪಡಿಸಲು ಭಗತ್ ಸಿಂಗ್ ರಾಷ್ಟ್ರೀಯ ಉದ್ಯೋಗ ಖಾತರಿ ಕಾಯ್ದೆ ರೂಪಿಸಲು ಕ್ರಮ ವಹಿಸಬೇಕು’ ಎಂದು ಆಗ್ರಹಿಸಿದರು.

‘ಹೊಸ ಶಿಕ್ಷಣ ನೀತಿ–2020, ಎನ್‌ಇಇಟಿ (ನೀಟ್‌) ಮತ್ತು ಇತ್ತೀಚೆಗೆ ಜಾರಿಗೆ ತಂದ ಗುಜರಾತ್ ಸಾಮಾನ್ಯ ವಿಶ್ವವಿದ್ಯಾಲಯ ಕಾಯ್ದೆಯನ್ನು ರದ್ದುಗೊಳಿಸಬೇಕು. ಹಾಸ್ಟೆಲ್‌ಗಳ ಸಂಖ್ಯೆ ಹೆಚ್ಚಿಸಬೇಕು. ನಿಯಮಿತವಾಗಿ ವಿದ್ಯಾರ್ಥಿವೇತನಗಳು ಮತ್ತು ಫೆಲೋಶಿಪ್‌ಗಳನ್ನು ನೀಡಬೇಕು. ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ಇತರ ಸರ್ಕಾರಿ ವಲಯಗಳಲ್ಲಿ ಖಾಲಿ ಇರುವ ಶಿಕ್ಷಕರ ಮತ್ತು ಉಪನ್ಯಾಸಕರ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡಬೇಕು. ಪ್ರತಿ ನಿರುದ್ಯೋಗಿಗಳಿಗೆ ಕನಿಷ್ಠ ₹ 5 ಸಾವಿರ ಮಾಸಿಕ ನಿರುದ್ಯೋಗ ಭತ್ಯೆ ನೀಡಬೇಕು ಎಂಬ ಬೇಡಿಕೆಗಳ ಈಡೇರಿಕೆಗೆ ಸಂಸತ್ ಚಲೋ ನಡೆಸಲಾಗುತ್ತಿದೆ’ ಎಂದರು.

ADVERTISEMENT

ಈ ವೇಳೆ ಎಸ್ಎಫ್ಐ ರಾಜ್ಯ ಪದಾಧಿಕಾರಿಗಳಾದ ದಿಲೀಪ್, ರಮೇಶ ವೀರಾಪೂರು, ಗಣೇಶ್ ರಾಥೋಡ್, ಗ್ಯಾನೇಶ್ ಕಡಗಡ್, ಸೋಮಶೇಖರ್, ಸುಜಾತಾ, ನಟರಾಜ್ ಜಿ, ಮೇಘಾ, ನಾಗಮ್ಮ, ಹುಲಿಗೆಮ್ಮ, ಮಾಲಾಶ್ರೀ, ಅಭಿಷೇಕ್, ಸರ್ವೇಶ್, ದರ್ಶನ್, ನಿಶಾಂತ್, ವರುಣ್, ಹರೀಶ್ ಸೇರಿ ಅನೇಕರು ಇದ್ದರು.

ಕಲಬುರಗಿ ಜಿಲ್ಲೆಯಿಂದ 50 ಜನರು ಜನವರಿ 10ರಂದು ರೈಲಿನ ಮೂಲಕ ದೆಹಲಿಗೆ ಪ್ರಯಾಣಿಸಲಾಗುವುದು
- ಸುಜಾತಾ ವೈ. ಎಸ್‌ಎಫ್‌ಐ ಜಿಲ್ಲಾ ಸಂಚಾಲಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.