ADVERTISEMENT

ಕಲಬುರಗಿ: ಸೇವೆಗೆ ಸೇರಿದ ದಿನಾಂಕ ಆಧಾರದಲ್ಲಿ ಜ್ಯೇಷ್ಠತಾ ಪಟ್ಟಿಗೆ ಅಪಸ್ವರ

13 ಜಿಲ್ಲೆಗಳ ಬಡ್ತಿ ಹೊಂದಿದ 150 ಪಂಚಾಯಿತಿ ಅಧಿಕಾರಿಗಳಿಗೆ ಸಂಕಷ್ಟ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2024, 5:01 IST
Last Updated 6 ಮಾರ್ಚ್ 2024, 5:01 IST
ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ   

ಕಲಬುರಗಿ: 2010ರಲ್ಲಿ ನೇಮಕವಾದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ (ಪಿಡಿಒ) ಪೈಕಿ 13 ಜಿಲ್ಲೆಗಳ ಪಿಡಿಒಗಳು ಕಾರಣಾಂತರಗಳಿಂದ ತಡವಾಗಿ ಸೇವೆಗೆ ಸೇ‌ರ್ಪಡೆಯಾಗಿರುವವರು ಇದೀಗ ಸೇವಾ ಜ್ಯೇಷ್ಠತೆ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಅಲ್ಲದೇ, ಬಡ್ತಿ ಪಡೆದಿರುವವರು ಹಿಂಬಡ್ತಿ ಪಡೆಯುವ ಭೀತಿಯನ್ನೂ ಎದುರಿಸುತ್ತಿದ್ದಾರೆ.

ನೇರ ನೇಮಕಾತಿ ಹೊಂದಿದ ನೌಕರರ ಜ್ಯೇಷ್ಠತೆಯನ್ನು ಸ್ಪರ್ಧಾತ್ಮಕ ಪರೀಕ್ಷೆಯ ಆಯ್ಕೆಪಟ್ಟಿಯಲ್ಲಿ ಆಯಾ ಜಿಲ್ಲೆಗಳ ಮೆರಿಟ್ ಆಧಾರದ ಮೇಲೆ ಆಯಾ ಅಧಿಕಾರಿಗೆ ನೀಡಿದ ಆದೇಶದ ದಿನಾಂಕದಿಂದ ಹಾಗೂ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್–1 ಹುದ್ದೆಯಿಂದ ಮುಂಬಡ್ತಿ ಪಡೆದು ಪಿಡಿಒಗಳಾಗಿ ನೇಮಕಗೊಂಡ ನೌಕರರಿಗೆ ಮುಂಬಡ್ತಿ ಆದೇಶದ ದಿನಾಂಕದಿಂದ ಜ್ಯೇಷ್ಠತೆಯನ್ನು ನಿಗದಿಪಡಿಸಬೇಕು ಎಂದು ಕರ್ನಾಟಕ ಪಂಚಾಯತರಾಜ್ ಆಯುಕ್ತರು ಫೆಬ್ರುವರಿ 27ರಂದು ರಾಜ್ಯದ ಎಲ್ಲ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಪತ್ರವನ್ನು ಬರೆದಿದ್ದಾರೆ.

ವಿವಾದವೇನು?: 2010ರಲ್ಲಿ 17 ಜಿಲ್ಲೆಗಳ ಪಿಡಿಒಗಳು ನೇಮಕ ಪಟ್ಟಿ ಹೊರಬಿದ್ದ ತಕ್ಷಣವೇ ಸೇವೆಗೆ ಸೇರಿದರು. ಆದರೆ, 13 ಜಿಲ್ಲೆಗಳ ಪಿಡಿಒಗಳು ಕೆಲ ನ್ಯಾಯಾಲಯಗಳ ಪ್ರಕರಣದ ಕಾರಣದಿಂದ ಸರ್ಕಾರ ಬೇರೆ ಬೇರೆ ಜಿಲ್ಲೆಗಳಿಗೆ ಬೇರೆ ದಿನಾಂಕಗಳಂದು ನೇಮಕಾತಿ ಆದೇಶ ಹೊರಡಿಸಿತ್ತು. ಸೇವೆಗೆ ಸೇರ್ಪಡೆಯಾದ ದಿನಾಂಕದ ಬದಲು ಸೇವಾ ಜ್ಯೇಷ್ಠತೆಯನ್ನು ನೇಮಕಾತಿ ಪಟ್ಟಿ ಪ್ರಕಟಿಸಿದ ದಿನಾಂಕವನ್ನು ಪರಿಗಣಿಸಬೇಕು ಎಂಬುದು ತಡವಾಗಿ ಸೇವೆಗೆ ಸೇರ್ಪಡೆಯಾದ ಪಿಡಿಒಗಳ ಒತ್ತಾಯವಾಗಿದೆ. ಅದರಲ್ಲಿ ಕೆಲವರು ಗೆಜೆಟೆಡ್ ಹುದ್ದೆಗಳಾದ ಸಹಾಯಕ ನಿರ್ದೇಶಕ, ಕಾರ್ಯನಿರ್ವಾಹಕ ಅಧಿಕಾರಿಗಳಾಗಿ ನೇಮಕವಾಗಿದ್ದಾರೆ. 

ADVERTISEMENT

ಈ ಸಂಬಂಧದ ಪ್ರಕರಣದ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ಕಳೆದ ಜನವರಿ 16ರಂದು ಮಧ್ಯಂತರ ಆದೇಶ ಹೊರಡಿಸಿ ಪಿಡಿಒಗಳ ಜ್ಯೇಷ್ಠತಾ ಪಟ್ಟಿಯನ್ನು ಪ್ರಕಟಿಸಲು ಸರ್ಕಾರಕ್ಕೆ ಆರು ತಿಂಗಳ ಕಾಲಾವಧಿ ನೀಡಿದೆ. ಹೀಗಾಗಿ, ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸಲು ಮುಂದಾಗಿರುವ ಪಂಚಾಯತರಾಜ್ ಆಯುಕ್ತಾಲಯವು ಸೇವಾ ಜ್ಯೇಷ್ಠತೆ ಆಧಾರದ ಮೇಲೆ ಪಟ್ಟಿ ಸಿದ್ಧಪಡಿಸಲು ಸೂಚಿಸಿದೆ.

ಒಂದು ವೇಳೆ ಸೇವೆಗೆ ಸೇರ್ಪಡೆಯಾದ ಆಧಾರದ ಮೇಲೆ ಪಟ್ಟಿ ಸಿದ್ಧಪಡಿಸಿದರೆ ತಡವಾಗಿ ಸೇವೆಗೆ ಸೇರಿದವರು ಬಡ್ತಿಯಲ್ಲಿ ಹಿಂದೆ ಉಳಿಯುತ್ತಾರೆ. ಅಲ್ಲದೇ, ಈಗಾಗಲೇ ಬಡ್ತಿ ಹೊಂದಿದವರ ಜಾಗಕ್ಕೆ ಮೊದಲು ಸೇರ್ಪಡೆಯಾದವರು ಬರುತ್ತಾರೆ ಎಂಬುದು 13 ಜಿಲ್ಲೆಗಳ ಪಿಡಿಒಗಳ ಆತಂಕ.

‘2010ರಲ್ಲಿ ಕೆಲವರು ನ್ಯಾಯಾಲಯಕ್ಕೆ ಹೋಗಿದ್ದರಿಂದ 13 ಜಿಲ್ಲೆಗಳ ಪಿಡಿಒ ಸೇವೆಗೆ ಸೇರ್ಪಡೆಯಾಗುವುದು ತಡವಾಗಿದೆ. ಸರ್ಕಾರ ಈ ವಿಚಾರವನ್ನು ಪರಿಗಣಿಸಿ ಜಿಲ್ಲಾವಾರು ಸೇವಾ ಜ್ಯೇಷ್ಠತೆ ಬದಲು ರಾಜ್ಯಮಟ್ಟದಲ್ಲಿ ಮೆರಿಟ್ ಆಧಾರದ ಮೇಲೆಯೇ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸಬೇಕು’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಪಿಡಿಒಗಳು ಮನವಿ ಮಾಡಿದ್ದಾರೆ.

ಪಿಡಿಒಗಳ ಜ್ಯೇಷ್ಠತಾ ಪಟ್ಟಿಯ ಕಡತ ಇನ್ನೂ ನನ್ನ ಮುಂದೆ ಬಂದಿಲ್ಲ. ಇದಕ್ಕೆ ಸಮಯಾವಕಾಶವಿದ್ದು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ.
ಪ್ರಿಯಾಂಕ್ ಖರ್ಗೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.