ADVERTISEMENT

7 ವರ್ಷಗಳ ಫ್ಯಾಸಿಸ್ಟ್ ಕ್ರೌರ್ಯದಿಂದ ಮಾತು ಕಳೆದುಕೊಂಡ ಜನ: ಡಾ. ಮೀನಾಕ್ಷಿ ಬಾಳಿ

ಸ್ಲಂ ಜನಾಂದೋಲನ ಸಂಘಟನೆಯ ಕಾರ್ಯಾಗಾರಕ್ಕೆ ಚಾಲನೆ ನೀಡಿದ ಮೀನಾಕ್ಷಿ ಬಾಳಿ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2021, 14:36 IST
Last Updated 7 ಸೆಪ್ಟೆಂಬರ್ 2021, 14:36 IST
ಸ್ಲಂ ಜನಾಂದೋಲನ ಸಂಘಟನೆಯ ವಿಭಾಗ ಮಟ್ಟದ ಕಾರ್ಯಾಗಾರದಲ್ಲಿ ಡಾ. ಮೀನಾಕ್ಷಿ ಬಾಳಿ, ರೇಣುಕಾ ಸರಡಗಿ, ನರಸಿಂಹಮೂರ್ತಿ ಇತರರು ಭಾಗವಹಿಸಿದ್ದರು
ಸ್ಲಂ ಜನಾಂದೋಲನ ಸಂಘಟನೆಯ ವಿಭಾಗ ಮಟ್ಟದ ಕಾರ್ಯಾಗಾರದಲ್ಲಿ ಡಾ. ಮೀನಾಕ್ಷಿ ಬಾಳಿ, ರೇಣುಕಾ ಸರಡಗಿ, ನರಸಿಂಹಮೂರ್ತಿ ಇತರರು ಭಾಗವಹಿಸಿದ್ದರು   

ಕಲಬುರ್ಗಿ: ‘ಏಳು ವರ್ಷಗಳ ಫ್ಯಾಸಿಸ್ಟ್ ಆಡಳಿತದ ಕ್ರೌರ್ಯದಿಂದ ಜನಸಾಮಾನ್ಯರು ಮಾತು ಕಳೆದುಕೊಂಡ ವಾತಾವರಣದಲ್ಲಿ ಬದುಕುತ್ತಿದ್ದೇವೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಕಡಿಮೆ ಮಾಡುತ್ತೇವೆ ಎಂದು ಹೇಳಿ ಅಧಿಕಾರ ಪಡೆದ ಬಿಜೆಪಿ ಆರು ತಿಂಗಳಲ್ಲಿ ಗ್ಯಾಸ್ ಬೆಲೆಯನ್ನು ₹ 300 ಏರಿಕೆ ಮಾಡಿದರೂ ಜನಸಾಮಾನ್ಯರಿಗೆ ಸಿಟ್ಟು ಬರುತ್ತಿಲ್ಲ’ ಎಂದು ಜನವಾದಿ ಮಹಿಳಾ ಸಂಘಟನೆ ನಾಯಕಿ ಡಾ. ಮೀನಾಕ್ಷಿ ಬಾಳಿ ಹೇಳಿದರು.

ಸ್ಲಂ ಜನಾಂದೋಲನ ಕರ್ನಾಟಕ ಕಲ್ಯಾಣ ಕರ್ನಾಟಕ ವಿಭಾಗಮಟ್ಟದ ಎರಡು ದಿನಗಳ ಕಾರ್ಯಗಾರವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದ ಅವರು, ‘ರಾಷ್ಟ್ರ ಮತ್ತು ರಾಜ್ಯ ಸರ್ಕಾರಗಳು ಇತ್ತೀಚಿನ ದಿನಗಳಲ್ಲಿ ಬಡ ಜನವಿರೋಧಿ ನೀತಿಗಳನ್ನು ಜಾರಿಗೊಳಿಸುತ್ತಿವೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ₹ 32 ಲಕ್ಷ ಕೋಟಿ ಆದಾಯವನ್ನು ಖಾಸಗಿ ಬಂಡವಾಳಿಗರಿಗೆ ನೀಡಲು ಭಾರತ ಸರ್ಕಾರ ಸಿದ್ಧವಾಗಿದೆ. ಇದು ಹಗಲು ದರೋಡೆ. ಜನರ ಕಿಸೆಯಿಂದ ಹಣ ದೋಚುವ ಪಿಕ್ ಪಾಕೆಟ್ ಸರ್ಕಾರ ವಾಗಿದ್ದರೂ ನಮ್ಮ ಕಣ್ಣಿಗೆ ಕಾಣುತ್ತಿಲ್ಲವೇ? ಇದರಿಂದ ಹೆಚ್ಚು ಪರಿಣಾಮ ಬೀರುವುದು ಬಡವರ ಮೇಲೆ. ಭಾರತವನ್ನು ಛಿದ್ರ ಛಿದ್ರಗೊಳಿಸಿ ಭಾವನಾತ್ಮಕವಾಗಿ ವಿಭಜಿಸಿ ಜಾತಿ–ಧರ್ಮಗಳ ಮೇಲೆ ನೀತಿಯನ್ನು ಜಾರಿಗೊಳಿಸುತ್ತಿದ್ದಾರೆ’ ಎಂದರು.

‘ಬಿಜೆಪಿ ಪಕ್ಷ ಚುನಾವಣೆಯನ್ನು ವ್ಯವಸ್ಥಿತವಾಗಿ ಗೆಲ್ಲಲು ಜನರನ್ನು ಭ್ರಷ್ಟಗೊಳಿಸಿ ಜನಾಭಿಪ್ರಾಯ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಸರ್ಕಾರಗಳನ್ನು ಅಸ್ತಿತ್ವಕ್ಕೆ ತಂದು ಜನರ ಕಲ್ಯಾಣ ಮತ್ತು ಸಬ್ಸಿಡಿಗಳನ್ನು ಕಡಿತಗೊಳಿಸಿ ನಿಯಂತ್ರಿಸುವ ಮೂಲಕ ಕಾರ್ಪೊರೇಟ್ ಸಂಸ್ಕೃತಿಗೆ ಅನುಕೂಲ ಮಾಡುತ್ತಿದ್ದಾರೆ. ಬಡವರ ಶ್ರಮದಿಂದ ದೇಶದ ಸಂಪತ್ತು ನಿರ್ಮಾಣವಾಗುತ್ತಿದ್ದು, ಈ ಶ್ರಮಕ್ಕೆ ತಕ್ಕ ಪ್ರತಿಫಲವನ್ನು ನೀಡದೆ ಆಡಳಿತದಲ್ಲಿ ಮನುವಾದ ಜಾರಿಗೊಳಿಸಿ ಸೈದ್ಧಾಂತಿಕ ಸಂಘರ್ಷಕ್ಕೆ ಹೆಜ್ಜೆ ಇಡಲಾಗಿದೆ’ ಎಂದರು.

ADVERTISEMENT

ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ಸ್ಲಂ ಜನಾಂದೋಲನ ಕರ್ನಾಟಕ ಸಂಚಾಲಕ ಎ.ನರಸಿಂಹಮೂರ್ತಿ, ‘ಇಂದು ದೇಶದ ಸ್ವರೂಪದಲ್ಲಿ ಬದಲಾವಣೆ ತರುವ ಮೂಲಕ ಪ್ರಜಾತಂತ್ರ ವ್ಯವಸ್ಥೆಯನ್ನು ನಾಶಮಾಡಿ ಬಡ ಜನವಿರೋಧಿ ನೀತಿಗಳನ್ನು ಜಾರಿಗೊಳಿಸಲಾಗುತ್ತಿದೆ. ಆ ಮೂಲಕ ಖಾಸಗಿ ಬಂಡವಾಳಗಾರರಿಗೆ ಅನುಕೂಲ ಕಲ್ಪಿಸುವ ಕಾಯ್ದೆ ಕಾನೂನುಗಳನ್ನು ಜಾರಿಗೊಳಿಸಲಾಗುತ್ತಿದ್ದು, ವ್ಯವಸ್ಥೆಯ ವಿರುದ್ಧ ನಾವು ಆಂದೋಲನ ರೂಪಿಸಬೇಕಿದೆ. ಜನಸಾಮಾನ್ಯರನ್ನು ಜಾಗೃತಗೊಳಿಸಬೇಕಾಗಿದೆ’ ಎಂದರು.

ವೇದಿಕೆಯಲ್ಲಿ ಫಾದರ್ ವಿಕ್ಟರ್ ವಾಸ್, ಡಾ.ಅನಿಲ ಟೆಂಗಳೆ, ಬಹುಜನ ಚಳುವಳಿಯ ಎಂ.ಆರ್. ಬೇರಿ, ವಿಭಾಗಿಯ ಸಂಚಾಲಕ ಜನಾರ್ದನ ಹಳ್ಳಿ ಬೆಂಚಿ, ಜಿಲ್ಲಾ ಸಂಚಾಲಕಿ ರೇಣುಕಾ ಸರಡಗಿ, ಬಳ್ಳಾರಿ ಸಂಚಾಲ ಶೇಖರ್ ಬಾಬು, ಯಾದಗಿರಿ ಸಂಚಾಲಕ ಹಣಮಂತ ಶಹಪೂರಕರ್, ದಾವಣಗೆರೆ ಸಂಚಾಲಕಿ ರೇಣುಕಾ ಯಲ್ಲಮ್ಮ, ಕಲಬುರ್ಗಿಯ ಸುನೀತಾ ಮತ್ತು ರಾಶಿ ಮೌನೇಶ್ವರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.