
ಕಲಬುರಗಿ: ‘ಕರ್ನಾಟಕ ರಾಜ್ಯ ಸಾರಿಗೆ ವ್ಯವಸ್ಥೆ ದೇಶದಲ್ಲೇ ಮಾದರಿಯಾಗಿದೆ. ಅದರಲ್ಲೂ ನಮ್ಮ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಜನಸ್ನೇಹಿ ಸಾರಿಗೆ ವ್ಯವಸ್ಥೆ ಹೊಂದಿದ್ದಕ್ಕಾಗಿ ಹತ್ತು ಹಲವು ರಾಷ್ಟ್ರೀಯ, ಅಂತರರಾಷ್ಟ್ರೀಯ ಪ್ರಶಸ್ತಿ, ಪುರಸ್ಕಾರಗಳನ್ನು ಪಡೆದಿದೆ’ ಎಂದು ಕೆಕೆಆರ್‌ಟಿಸಿ ಅಧ್ಯಕ್ಷ ಅರುಣಕುಮಾರ ಎಂ. ಪಾಟೀಲ ಹೇಳಿದರು.
ನಗರದಲ್ಲಿ ಕೇಂದ್ರ ಬಸ್ ನಿಲ್ದಾಣ ಮತ್ತು ಬಸ್ ಘಟಕಗಳಲ್ಲಿ ಮೂಲಸೌಕರ್ಯ ಪರಿಶೀಲಿಸಿ ಅವರು ಮಾತನಾಡಿದರು.
‘ಇನ್ನಷ್ಟು ಉತ್ತಮ ಜನಸ್ನೇಹಿ ಸಾರಿಗೆ ವ್ಯವಸ್ಥೆ ಹೊಂದುವುದಕ್ಕಾಗಿ ಬೇಕಾದ ಸುಧಾರಣೆಗಳನ್ನು ತರಲು ಸರ್ಕಾರ ಸಿದ್ಧವಿದೆ. ಜನಪರ ಯೋಜನೆಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಬಸ್ ಘಟಕಗಳಿಗೆ ಭೇಟಿ ಮಾಡಿದ್ದೇನೆ. ಉತ್ತಮ ರೀತಿಯ ಸ್ವಚ್ಛತೆ ಹಾಗೂ ಸಿಬ್ಬಂದಿಗಳ ಐಕ್ಯತೆಯ ಕಾರ್ಯ ಮೆಚ್ಚುವಂಥದ್ದು’ ಎಂದರು.
ಸುಗಮ ಸಾರಿಗೆ ಸೇವೆಯ ನಡುವೆ ಕೆಲ ಸಮಸ್ಯೆಗಳು ಕಾಣಿಸಿಕೊಂಡಿದ್ದು ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಲು ಸಂಬಂಧಪಟ್ಟ ಘಟಕ ವ್ಯವಸ್ಥಾಪಕರಿಗೆ ಹಾಗೂ ಸಿಬ್ಬಂದಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೆಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕಿ ಡಾ. ಬಿ.ಸುಶೀಲಾ, ಮುಖ್ಯ ಸಂಚಾರ ವ್ಯವಸ್ಥಾಪಕ ಸಂತೋಷ್ ಕುಮಾರ್, ಅಧಿಕಾರಿಗಳಾದ ಸಿದ್ದಪ್ಪ ಗಂಗಾಧರ್, ಚಂದು ಕೆ, ನಾಗರಾಜ್ ವಾರದ್, ಐ.ಸಿ. ಹೊಸಮನಿ, ಅನಿಲ್ ಕುಮಾರ್ ಹಾಗೂ ಘಟಕದ ಎಲ್ಲಾ ಸಿಬ್ಬಂದಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.