ಕಲಬುರಗಿ: ನಿರಂತರವಾಗಿ ಏರುಗತಿಯಲ್ಲಿರುವ ತಾಪಮಾನ ಜನರನ್ನು ಕಂಗೆಡಿಸಿದೆ. ದೇಹ ತಂಪಾಗಿರಿಸಿಕೊಳ್ಳಲು ಅವರು ಈಜಿನತ್ತ ಮುಖ ಮಾಡುತ್ತಿರುವುದು ಸಾಮಾನ್ಯವಾಗಿದೆ. ಇದರಿಂದ ನಗರದ ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣದ ಸಮುಚ್ಛಯದಲ್ಲಿರುವ ಈಜುಕೊಳ ಪ್ರತಿದಿನ ಜನರಿಂದ ತುಂಬಿ ತುಳುಕುತ್ತಿದೆ.
ಹವ್ಯಾಸಿ ಹಾಗೂ ಸ್ಪರ್ಧಾತ್ಮಕ ಈಜು ಸ್ಪರ್ಧಿಗಳು ಸೇರಿ ಹಿಂದಿನ ವರ್ಷಕ್ಕಿಂತ ಸುಮಾರು 200 ಹೆಚ್ಚಿನ ಸ್ಪರ್ಧಿಗಳು ಈ ಬಾರಿ ನೋಂದಾಯಿಸಿಕೊಂಡಿದ್ದು, ಬಿಸಿಲಿನ ಪ್ರಖರತೆಗೆ ಸಾಕ್ಷಿ.
‘ಹಿಂದಿನ ವರ್ಷ ಸುಮಾರು 1,000 ಮಂದಿ ಈಜಿಗಾಗಿ ನೋಂದಾಯಿಸಿಕೊಂಡಿದ್ದರು. ಈ ಬಾರಿ ಆ ಸಂಖ್ಯೆ 1,200 ದಾಟಿದೆ. ಇದು ಇನ್ನೂ ಆರಂಭ. ಏಪ್ರಿಲ್–ಮೇ ತಿಂಗಳಲ್ಲಿ ಈ ಸಂಖ್ಯೆ ಇನ್ನೂ ಅಧಿಕವಾಗಲಿದೆ’ ಎಂದು ಅಲ್ಲಿನ ಸಿಬ್ಬಂದಿ ಹೇಳುತ್ತಾರೆ.
ಪ್ರತಿದಿನ ಏಳು ಬ್ಯಾಚ್‌ಗಳನ್ನು ಮಾಡಲಾಗುತ್ತಿದೆ. ಮಹಿಳೆಯರಿಗಾಗಿ ಪ್ರತ್ಯೇಕ ಬ್ಯಾಚ್ ಇದೆ. 60ಕ್ಕಿಂತ ಹೆಚ್ಚು ಮಹಿಳೆಯರು ನೋಂದಾಯಿಸಿಕೊಂಡಿದ್ದಾರೆ. ಈಜುಕೊಳಕ್ಕೆ ಬರುವವರು ಕ್ಯಾಪ್, ಸಮವಸ್ತ್ರ ಸೇರಿದಂತೆ ಇತರ ಪರಿಕರಗಳನ್ನು ತಾವೇ ತರಬೇಕು. 50 ಮೀಟರ್ ಅಗಲ ಮತ್ತು 21 ಮೀಟರ್ ಅಗಲ ಇರುವ ಈ ಕೊಳ ಗರಿಷ್ಠ 6 ಅಡಿ ಆಳ ಹೊಂದಿದೆ. ನಾಲ್ಕು ಜನ ಜೀವರಕ್ಷಕರು ಸೇರಿ 12 ಜನ ನಿರ್ವಹಣಾ ಸಿಬ್ಬಂದಿ ಇದ್ದಾರೆ. ಮಹಿಳೆ ಮತ್ತು ಪುರುಷರಿಗಾಗಿ ಪ್ರತ್ಯೇಕ ಕೋಚ್‌ಗಳು ಇದ್ದಾರೆ. ಸ್ನಾನಕೊಳ ಮತ್ತು ಷವರ್ ವ್ಯವಸ್ಥೆಯೂ ಇಲ್ಲಿದೆ. ಪ್ರತಿದಿನ ಒಂದು ತಾಸು ಸಮಯ ಈಜಬಹುದಾಗಿದೆ.
ಪ್ರತಿ ಮಂಗಳವಾರ ಈಜುಕೊಳ ತೆರೆಯುವುದಿಲ್ಲ. ಪ್ರತಿದಿನ ಬ್ಲೀಚಿಂಗ್ ಪೌಡರ್ ಮತ್ತು ಇತರೆ ರಾಸಾಯನಿಕ ಬಳಸಿ ಕೊಳವನ್ನು ಸ್ವಚ್ಛ ಮಾಡಲಾಗುತ್ತದೆ.
ಶಾಲೆಗಳಿಗೆ ರಜೆ ಇರುವುದರಿಂದ ಪೋಷಕರು ತಮ್ಮ ಮಕ್ಕಳನ್ನು ಈಜು ಕಲಿಯಲೆಂದು ಕರೆದುಕೊಂಡು ಬರುವುದು ಹೆಚ್ಚಾಗಿದೆ. 2008ರಲ್ಲಿ ಈ ಈಜುಕೊಳವನ್ನು ನಿರ್ಮಿಸಲಾಗಿದೆ. ಹವ್ಯಾಸಿ ಈಜುಗಾರರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಸ್ಪರ್ಧಿಗಳಿಗಾಗಿ ಪ್ರತ್ಯೇಕ ಈಜುಕೊಳ ನಿರ್ಮಿಸಬೇಕು ಎಂದು ಹಲವು ಪೋಷಕರು ಒತ್ತಾಯಿಸುತ್ತಾರೆ.
ಬೇಬಿ ಈಜುಕೊಳ ದುರಸ್ತಿಗೆ ಒತ್ತಾಯ: ಇದೇ ಸಮುಚ್ಛಯದಲ್ಲಿರುವ ಬೇಬಿ ಈಜುಕೊಳವು (ಹತ್ತು ವರ್ಷದೊಳಗಿನವರ) ನೀರಿನ ಸೋರಿಕೆ ಸಮಸ್ಯೆಯಿಂದಾಗಿ ರಿಪೇರಿಗೆ ಕಾದಿದೆ. ಅದನ್ನು ದುರಸ್ತಿ ಮಾಡಿದರೆ ಅನುಕೂಲವಾಗುತ್ತದೆ ಎನ್ನುತ್ತಾರೆ ಸಾರ್ವಜನಿಕರು.
ತರಬೇತಿ ರಹಿತ (ಪ್ರತಿ ತಿಂಗಳಿಗೆ)
ವಿಭಾಗ;ಶುಲ್ಕ
16 ವರ್ಷದೊಳಗಿನವರು; ₹ 600
16 ವರ್ಷಕ್ಕಿಂತ ಮೇಲಿನವರು;₹ 1,200
ಸರ್ಕಾರಿ ನೌಕರರು, ಸೀನಿಯರ್ಸ್;₹ 600
ತರಬೇತಿ ಸಹಿತ (15 ದಿನಕ್ಕೆ)
16 ವರ್ಷದೊಳಗಿನವರು;₹1,200
16 ವರ್ಷಕ್ಕಿಂತ ಮೇಲಿನವರು;₹1,800
ಸರ್ಕಾರಿ ನೌಕರರು, ಸೀನಿಯರ್ಸ್;₹1,200
ಒಂದು ದಿನಕ್ಕೆ ನಾಲ್ಕು ಬ್ಯಾಚ್ ಮಾಡಿ ತರಬೇತಿ ನೀಡಲಾಗುತ್ತದೆ. ಪ್ರತಿದಿನ 100 ಜನ ತರಬೇತಿ ಪಡೆಯುತ್ತಾರೆ. ಒಂದೇ ಈಜುಕೊಳ ಆಗಿರುವುದರಿಂದ ಶಾಲೆ ಟೂರ್ನಿಗಳ ಸಮಯದಲ್ಲಿ ಸ್ಪರ್ಧಿಗಳಿಗೆ ಅನನುಕೂಲವಾಗುತ್ತಿದೆ.ಮಚ್ಚೇಂದ್ರ ಸಿಂಗ್ ಠಾಕೂರ ಈಜು ಕೋಚ್
10 ದಿನಗಳಿಂದ ಬರುತ್ತಿದ್ದೇನೆ. ಚೆನ್ನಾಗಿ ಈಜು ಕಲಿಯುವ ಉದ್ದೇಶವಿದೆ. ಇಲ್ಲಿ ಒಳ್ಳೆ ಸೌಲಭ್ಯ ಇದೆ. ನಮ್ಮ ಇಲಾಖೆಯಲ್ಲಿ ಫಿಟ್‌ನೆಸ್‌ಗೆ ಮಹತ್ವ ಇರುವುದರಿಂದ ಅನುಕೂಲವಾಗಲಿದೆಹುಚ್ಚೀರಪ್ಪ ಪೊಲೀಸ್ ಕಾನ್‌ಸ್ಟೆಬಲ್
ನಾನು ಅಥ್ಲೆಟಿಕ್ಸ್ ಪಟು. ಪ್ರತಿದಿನ ಈಜುಕೊಳಕ್ಕೆ ಬರುತ್ತೇನೆ. ಈಜುವುದರಿಂದ ಅಥ್ಲೆಟಿಕ್ಸ್‌ನಲ್ಲಿ ಉಸಿರಾಟ ನಿರ್ವಹಣೆಗೆ ಅನುಕೂಲ. ಬೆನ್ನು ನೋವು ಇದ್ದರೆ ಕಡಿಮೆ ಆಗುತ್ತದೆವೀರೇಶ ರೋಟರಿ ಕ್ಲಬ್ ಶಾಲೆಯ ವಿದ್ಯಾರ್ಥಿ
ನನ್ನ ಮೂರು ಜನ ಮಕ್ಕಳಿಗೆ ಇಲ್ಲೇ ಈಜು ಕಲಿಸಿದ್ದೇನೆ. ಮೊಮ್ಮಕ್ಕಳು ಕಲಿಯುತ್ತಿದ್ದಾರೆ. ಹೆಣ್ಣುಮಕ್ಕಳಿಗೆ ಪ್ರತ್ಯೇಕ ಬ್ಯಾಚ್ ಹಾಗೂ ಮಹಿಳಾ ಕೋಚ್ ಇರುವುದು ಅನುಕೂಲಆರ್. ಕೆ. ಶಿಖರಗೋಳ ನಿವೃತ್ತ ಪ್ರಾಂಶುಪಾಲ ಎಸ್.ಬಿ ವಿಜ್ಞಾನ ಕಾಲೇಜು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.