ಕಲಬುರಗಿ: ಅಂಚೆ ಕಚೇರಿಯಲ್ಲಿ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ಖಾತೆ ತೆರೆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಹಣ ವರ್ಗಾವಣೆಯಾಗುತ್ತಿದೆ ಎಂಬ ವದಂತಿಗೆ ಕಿವಿಗೊಟ್ಟು, ಸಾವಿರಾರು ಜನರು ನಿತ್ಯ ಅಂಚೆ ಕಚೇರಿಯ ಮುಖ್ಯ ಕಚೇರಿಗೆ ಧಾವಿಸುತ್ತಿದ್ದಾರೆ.
ಆಧಾರ್ ಕಾರ್ಡ್, ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳನ್ನು ಹಿಡಿದು ಮಹಿಳೆಯರು, ವೃದ್ಧರು, ವಾಹನ ಚಾಲಕರು ತಂಡೋಪತಂಡವಾಗಿ ಬಂದು, ಆನ್‌ಲೈನ್ ಹಾಗೂ ನೇರ ನಗದು ವರ್ಗಾವಣೆಯ (ಡಿಬಿಟಿ) ಖಾತೆಗಳನ್ನು ತೆರೆಯುತ್ತಿದ್ದಾರೆ. ಪ್ರಧಾನಿ ಮೋದಿ ಹಾಗೂ ಸಿಎಂ ಸಿದ್ದರಾಮಯ್ಯ ಹಣ ಹಾಕುತ್ತಾರೆ ಎಂಬ ಗಾಳಿ ಮಾತು ಜೋರಾಗಿ ಹಬ್ಬಿದೆ.
ಕಾಗದ ರಹಿತ, ನಗದು ರಹಿತ ಡಿಜಿಟಲ್ ಬ್ಯಾಂಕಿಂಗ್ ಸೌಲಭ್ಯಗಳನ್ನು ಒದಗಿಸುವ ಉದ್ದೇಶಿಸಿದಿಂದ ನವೆಂಬರ್ 25ರಿಂದ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಅಡಿ ಆನ್‌ಲೈನ್ ಬ್ಯಾಂಕಿಂಗ್ ಮತ್ತು ಡಿಬಿಟಿ ಖಾತೆ ತೆರೆಯಲಾಗುತ್ತಿದೆ. ಇದಕ್ಕೆ ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆ ಇದ್ದರೆ ಸಾಕು. ಇದನ್ನೇ ತಪ್ಪಾಗಿ ಅರ್ಥೈಸಿಕೊಂಡ ಸಾರ್ವಜನಿಕರು, ಮೋದಿ ಮತ್ತು ಸಿದ್ದರಾಮಯ್ಯ ಹಣ ಹಾಕುತ್ತಾರೆ ಎಂಬ ಕಲ್ಪನೆಯಲ್ಲಿ ಅಂಚೆ ಕಚೇರಿಗೆ ಅಲೆಯುತ್ತಿದ್ದಾರೆ.
‘ಕಚೇರಿಯಲ್ಲಿ ಜನದಟ್ಟಣೆಯನ್ನು ನಿಯಂತ್ರಿಸಲು ಆಗದೆ 10 ಮಂದಿ ಸಿಬ್ಬಂದಿ ಬಯೋಮೆಟ್ರಿಕ್ ಡಿವೈಸ್ ಹಾಗೂ ಐಪಿಪಿಬಿ ಆ್ಯಪ್‌ನೊಂದಿಗೆ ಕಚೇರಿಯ ಆವರಣದಲ್ಲಿ ಆಸೀನರಾಗಿದ್ದಾರೆ. ಆಧಾರ್ ನಂಬರ್ ಹಾಗೂ ಮೊಬೈಲ್ ನಂಬರ್ ನಮೂದಿಸಿ, ಒಟಿಪಿ ಮೂಲಕ ಡಿಬಿಟಿ ಖಾತೆಗಳನ್ನು ತೆರೆದುಕೊಡುತ್ತಿದ್ದಾರೆ. ಜತೆಗೆ ₹200 ಕನಿಷ್ಠ ಠೇವಣಿಯ ಹಣವೂ ಪಡೆಯುತ್ತಿದ್ದಾರೆ’ ಎಂದು ಕಲಬುರಗಿ ವಿಭಾಗದ ಅಂಚೆ ಅಧೀಕ್ಷಕ ಎಸ್.ಎನ್. ಹಂದಿಗೋಳ ‘ಪ್ರಜಾವಾಣಿ’ಗೆ ತಿಳಿಸಿದರು.
‘ಮೋದಿ ಮತ್ತು ಸಿದ್ದರಾಮಯ್ಯ ಅವರು ಹಣ ಹಾಕುತ್ತಾರೆ ಎಂದು ಯಾರು ಗಾಳಿ ಸುದ್ದಿ ಹಬ್ಬಿಸಿದ್ದಾರೋ ಗೊತ್ತಿಲ್ಲ. ಅಂಚೆ ಕಚೇರಿಯಲ್ಲಿ ಅಂತಹ ಯಾವುದೇ ಸ್ಕೀಮ್ ಇಲ್ಲ. ಆದರೆ, ಡಿಬಿಟಿ ಮತ್ತು ಆನ್‌ಲೈನ್ ಖಾತೆಗಳನ್ನು ತೆರೆಯಲಾಗುತ್ತಿದೆ. ಜಿಲ್ಲೆಯ ಎಲ್ಲ ಅಂಚೆ ಕಚೇರಿಗಳಲ್ಲಿ ಈ ಖಾತೆಗಳನ್ನು ತೆರೆಯಲಾಗುತ್ತಿದೆ. ಆದರೆ, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕಲಬುರಗಿ ನಗರದ ಮುಖ್ಯ ಕಚೇರಿಗೆ ಬರುತ್ತಿದ್ದಾರೆ’ ಎಂದರು.
‘ಸಿಎಂ ಸಿದ್ದರಾಮಯ್ಯ ಅವರು ಮಹಿಳೆಯರಿಗೆ ತಿಂಗಳಿಗೆ ₹2 ಸಾವಿರ ಕೊಡುತ್ತಿದ್ದಾರೆ. ಬಸ್ ಸಹ ಫ್ರೀ ಮಾಡಿದ್ದಾರೆ. ಮೋದಿ ಅವರೂ ಸಿದ್ದರಾಮಯ್ಯ ಅವರಂತೆ ಹಣ ಕೊಡಬಹುದು ಎಂದುಕೊಂಡು ಬಂದಿದ್ದೇವೆ. ಅವರು ಹಣ ಕೊಡಲಿ ಬಿಡಲಿ, ಯಾವುದಕ್ಕೂ ಪೋಸ್ಟ್ ಆಫೀಸ್‌ನಲ್ಲಿ ಒಂದು ಅಕೌಂಟ್ ಇರಲಿ ಎಂದು ಬಂದಿದ್ದೇವೆ’ ಎನ್ನುತ್ತಾರೆ ಆಟೊ ಚಾಲಕ ಅನಿಲ್‌ಕುಮಾರ್.
ಕಳೆದ ಒಂದು ವಾರದ ಅವಧಿಯಲ್ಲಿ ಕಲಬುರಗಿ ವಿಭಾಗದಲ್ಲಿ ಆನ್‌ಲೈನ್ ಹಾಗೂ ಡಿಬಿಟಿಯ 8000 ಖಾತೆಗಳನ್ನು ತೆರೆಯಲಾಗಿದೆಎಸ್.ಎನ್. ಹಂದಿಗೋಳ ಕಲಬುರಗಿ ವಿಭಾಗದ ಅಂಚೆ ಅಧೀಕ್ಷಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.