
ಅಫಜಲಪುರ: ಕಳೆದ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿರುವ ತೊಗರಿ ಬೆಳೆ ಅತಿವೃಷ್ಟಿಯಿಂದ ಅರ್ಧಕ್ಕಿಂತಲೂ ಹೆಚ್ಚು ಹಾಳಾಗಿತ್ತು. ಇದೀಗ ಇನ್ನುಳಿದ ತೊಗರಿ ಬೆಳೆ ನೆಟೆ ರೋಗಕ್ಕೆ ತುತ್ತಾಗಿ ಸಂಪೂರ್ಣವಾಗಿ ಇಳುವರಿ ಕುಂಠಿತಗೊಂಡು ರೈತರು ಸಂಕಷ್ಟಕ್ಕೆ ಈಡಾಗಿದ್ದಾರೆ.
ನೀರಾವರಿ ಅನುಕೂಲವಿರುವ ರೈತರು ಕಡಲೆ, ಗೋಧಿ ಬಿತ್ತನೆ ಮಾಡಿದ್ದಾರೆ. ಆದರೆ, ನೀರಾವರಿ ಸೌಲಭ್ಯವಿರದ ರೈತರು ಬೆಳೆ ಕಳೆದುಕೊಂಡು ಕಷ್ಟಪಡುವಂತಾಗಿದೆ. ಅತಿವೃಷ್ಟಿಯಿಂದ ಅಳಿದುಳಿದ ತೊಗರಿಗೆ ನೆಟೆ ರೋಗ ಅಂಟಿಕೊಂಡು ಎಲ್ಲ ತೊಗರಿ ಒಣಗಿ ನಿಂತಿದೆ. ತಿಂಗಳಲ್ಲಿ ರಾಶಿ ಮಾಡಬೇಕೆಂಬ ಆಶಾಭಾವನೆ ಇಟ್ಟುಕೊಂಡಿದ್ದ ರೈತರಿಗೆ ನಿರಾಶೆಯಾಗಿದೆ.
ಪರಿಹಾರದಲ್ಲೂ ಅನ್ಯಾಯ:
ಸರ್ಕಾರ ಅತಿವೃಷ್ಟಿಯಿಂದ ಬೆಳೆಹಾನಿಯಾದ ರೈತರಿಗೆ ಪರಿಹಾರ ನೀಡಿದೆ. ಆದರೆ, ಸಾಕಷ್ಟು ಜನರಿಗೆ ಪರಿಹಾರ ಬಂದಿಲ್ಲ. ಗ್ರಾಮಲೆಕ್ಕಿಗರು ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು, ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತರ ಜಮೀನುಗಳಿಗೆ ಭೇಟಿ ನೀಡದೆ ಖಾಸಗಿಯವರಿಂದ ಸಮೀಕ್ಷೆ ಮಾಡಿಸಿದ್ದಾರೆ. ಇದರಿಂದಾಗಿ ಕೆಲವರಿಗೆ ಪರಿಹಾರ ಬಂದಿಲ್ಲ. 4 ಎಕರೆ ತೊಗರಿ ಹಾನಿಯಾಗಿದ್ದರೆ 1 ಎಕರೆ ಎಂದು ದಾಖಲಿಸಿದ್ದಾರೆ ಎಂದು ದೂರುತ್ತಾರೆ ಪರಿಹಾರ ಬಾರದ ರೈತರು.
ನೆಟೆ ನಿರೋಧಕ ತಳಿ ಕಂಡುಹಿಡಿಯಬೇಕು:
ರೈತರು ಹೇಗಾದರೂ ಮಾಡಿ ಸಾಲ ತೀರಿಸಬೇಕೆಂದು ಪ್ರತಿ ವರ್ಷ ತೊಗರಿ ಬೆಳೆಯನ್ನೇ ಬಿತ್ತನೆ ಮಾಡುತ್ತಾರೆ. ಆದರೆ, ನೆಟೆ ರೋಗ ಕಾಣಿಸಿಕೊಳ್ಳುವುದರಿಂದ ಬಹಳಷ್ಟು ಹಾನಿಯಾಗುತ್ತಿದೆ. ಕೃಷಿ ವಿಜ್ಞಾನಿಗಳು ನೆಟೆ ನಿರೋಧಕ ತಳಿಗಳನ್ನು ಕಂಡುಹಿಡಿಯಬೇಕು. ಪ್ರತಿ ವರ್ಷ ಬೇಸಿಗೆ ದಿನಗಳಲ್ಲಿ ರೈತರಿಗೆ ತೊಗರಿ ಬಿತ್ತನೆ, ನಿರ್ವಹಣೆ ಬಗ್ಗೆ ತಾಲ್ಲೂಕು ಮಟ್ಟದಲ್ಲಿ ಕಾರ್ಯಾಗಾರ ಏರ್ಪಡಿಸಬೇಕು ಎಂದು ತಾಲ್ಲೂಕು ಕೃಷಿ ಸಮಾಜದ ಅಧ್ಯಕ್ಷ ಮಳೇಂದ್ರ ಡಾಂಗೆ ಆಗ್ರಹಿಸುತ್ತಾರೆ.
ನೆಲಕಚ್ಚಿದ ಇಳುವರಿ:
ಅಲ್ಲಲ್ಲಿ ತೊಗರಿ ರಾಶಿ ಆರಂಭವಾಗಿದ್ದು, ಇಳುವರಿಯಲ್ಲಿ ಸಂಪೂರ್ಣವಾಗಿ ಕಡಿಮೆಯಾಗಿದೆ. ಕಳೆದ ವರ್ಷ ಪ್ರತಿ ಎಕರೆಗೆ ಸರಾಸರಿ 5ರಿಂದ 6 ಕ್ವಿಂಟಲ್ ಇಳುವರಿ ಬಂದಿತ್ತು. ಆದರೆ, ಈ ವರ್ಷ ಎಕರೆಗೆ 1 ಕ್ವಿಂಟಲ್ ಇಳುವರಿ ಬರುತ್ತಿಲ್ಲ. ರಾಶಿ ಮಾಡಲು ಬಂದಿರುವ ಮಷಿನ್‌ಗಳ ಚಾಲಕ ಮತ್ತು ಸಿಬ್ಬಂದಿ ಸ್ವಂತ ಖರ್ಚಿನಿಂದ ದಿನಾಲು ಊಟ ಮಾಡುವಂತಾಗಿದೆ. ರೈತರು ತೊಗರಿ ರಾಶಿ ಮಾಡಲು ಯಂತ್ರ ಬಳಸಿದರೆ ಅದರ ಬಾಡಿಗೆ ಬರುತ್ತಿಲ್ಲ. ಹೀಗಾಗಿ ಜನರು ರಾಶಿ ಮಾಡಲು ಮುಂದೆ ಬರುತ್ತಿಲ್ಲ ಎಂದು ಬಳ್ಳೂರಗಿ ಗ್ರಾಮದ ರೈತ ಮುಖಂಡ ನಾಗೇಶ ಬಸಣ್ಣ ಕಲಶೆಟ್ಟಿ ಅಳಲು ತೋಡಿಕೊಳ್ಳುತ್ತಾರೆ.
ಒಣಗಿದ ಬೆಳೆ...
ಮುಂಗಾರು ಹಂಗಾಮಿನಲ್ಲಿ ತಾಲ್ಲೂಕಿನಲ್ಲಿ 61371ಗಿಂತ ಅಧಿಕ ಹೆಕ್ಟೇರ್‌ನಲ್ಲಿ ತೊಗರಿ ಬಿತ್ತನೆಯಾಗಿತ್ತು. ಆ ಪೈಕಿ 31807 ಹೆಕ್ಟೇರ್ ತೊಗರಿ ಅತಿವೃಷ್ಟಿಯಿಂದ ಹಾಳಾಗಿದೆ. ಉಳಿದಿರುವ ತೊಗರಿ ಆರಂಭದಲ್ಲಿ ಚೆನ್ನಾಗಿತ್ತು. ಕಾಯಿ ಕಟ್ಟುವ ಹಂತದಲ್ಲಿ ತೊಗರಿ ನೆಟೆರೋಗ ಬಂದಿರುವುದರಿಂದ ತೊಗರಿ ಬೆಳೆ ಒಣಗುತ್ತ ಹೋಗುತ್ತಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಎಸ್.ಎಚ್.ಗಡಿಗಿಮನಿ ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.