ADVERTISEMENT

ಪೊಲೀಸ್ ಕಮಿಷನರೇಟ್ ವಾರ್ಷಿಕ ಕ್ರೀಡಾಕೂಟದಲ್ಲಿ ಮಿಂಚಿದ ವಿಜಯರಡ್ಡಿ, ಪಾಂಡು,ಶಿಲ್ಪಾ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2025, 5:31 IST
Last Updated 3 ಡಿಸೆಂಬರ್ 2025, 5:31 IST
ಕಲಬುರಗಿ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಕೆಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕಿ ಬಿ. ಸುಶೀಲಾ ಹಾಗೂ ಗಣ್ಯರು
ಕಲಬುರಗಿ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಕೆಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕಿ ಬಿ. ಸುಶೀಲಾ ಹಾಗೂ ಗಣ್ಯರು   

ಕಲಬುರಗಿ: ಸದಾ ಸಾರ್ವಜನಿಕ ಕಾರ್ಯದಲ್ಲಿ ನಿರತರಾಗುವ ಪೊಲೀಸರು ಮಂಗಳವಾರ ಕ್ರೀಡಾಂಗಣದಲ್ಲಿ ಬೆವರು ಹರಿಸುವ ಮೂಲಕ ಒತ್ತಡ ಮರೆತರು. ಕಲಬುರಗಿ ನಗರ ಪೊಲೀಸ್‌ ಕಮಿಷನರೇಟ್ ವತಿಯಿಂದ ಆಯೋಜಿಸಿದ್ದ ವಾರ್ಷಿಕ ಕ್ರೀಡಾಕೂಟದ ಸಂಭ್ರಮದಲ್ಲಿ ಮಿಂದು ಸಂತಸಪಟ್ಟರು.

ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ಕ್ರೀಡಾಕೂಟದ ಮೊದಲ ದಿನ ಅಶೋಕನಗರ ಠಾಣೆಯ ಸಿಪಿಸಿ ವಿಜಯರಡ್ಡಿ ಹಾಗೂ ಸಿಎಆರ್‌ ಘಟಕದ ಎಪಿಸಿ ಪಾಂಡು ಮಿಂಚಿದರು. ವಿಜಯರಡ್ಡಿ 200 ಮೀ. ಓಟ ಹಾಗೂ ಹೈಜಂಪ್‌ನಲ್ಲಿ ಪ್ರಥಮ ಸ್ಥಾನ ಗಳಿಸಿದರೆ, ಶಾಟ್‌ಪಟ್ ಹಾಗೂ ಡಿಸ್ಕಸ್‌ ಥ್ರೊನಲ್ಲಿ ಪಾಂಡು ಅಗ್ರಸ್ಥಾನ ತಮ್ಮದಾಗಿಸಿಕೊಂಡರು. ಮಹಿಳೆಯರ 200 ಹಾಗೂ 400 ಮೀ. ಓಟದಲ್ಲಿ ಸ್ಟೇಷನ್‌ ಬಜಾರ್ ಠಾಣೆಯ ಶಿಲ್ಪಾ ಮೊದಲ ಸ್ಥಾನ ಗಳಿಸಿದರು. ಬ್ರಹ್ಮಪುರ ಠಾಣೆಯ ಪ್ರಿಯಾ ಅವರು ಡಿಸ್ಕಸ್‌ ಥ್ರೊ ಹಾಗೂ ಹೈಜಂಪ್‌ನಲ್ಲಿ ಮೊದಲಿಗರಾದರು.

ಆರು ತಂಡಗಳು: ಕ್ರೀಡಾಕೂಟದಲ್ಲಿ ನಗರ ಪೊಲೀಸ್ ವ್ಯಾಪ್ತಿಯ ಸಿಎಆರ್ ಘಟಕ, ದಕ್ಷಿಣ ಉಪವಿಭಾಗ, ಉತ್ತರ ಉಪವಿಭಾಗ, ಸಬರ್ಬನ್ ಉಪವಿಭಾಗ, ವಿಶೇಷ ಘಟಕ, ಮಹಿಳಾ ಪಡೆ ತಂಡಗಳು ಭಾಗವಹಿಸಿದ್ದವು. ಕ್ರೀಡಾ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಕಳೆದ ವರ್ಷದ ಶ್ರೇಷ್ಠ ಕ್ರೀಡಾಪಟುವಾದ ವಿಜಯರಡ್ಡಿ ಅವರಿಂದ ಈ ಬಾರಿಯ ಕ್ರೀಡಾಜ್ಯೋತಿಯನ್ನು ಅಧಿಕಾರಿಗಳು ಸ್ವೀಕರಿಸಿದರು.

ADVERTISEMENT

ಕ್ರೀಡಾಕೂಟದ ಪ್ರತಿ ವಿಭಾಗದಲ್ಲಿ ಮೊದಲ ಮತ್ತು ಎರಡನೇ ಸ್ಥಾನ ಗಳಿಸುವ ಕ್ರೀಡಾಪಟುಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗುವರು. ಡಿಸೆಂಬರ್‌ 4ರವರೆಗೆ ಕ್ರೀಡಾಕೂಟ ನಡೆಯಲಿದೆ.

ಮೊದಲ ದಿನದ ಫಲಿತಾಂಶಗಳು (ಮೊದಲ ಎರಡು ಸ್ಥಾನ ಮಾತ್ರ): ಪುರುಷರು:(ಪಿಸಿ–ಎಎಸ್‌ಐ): 200 ಮೀ.: ವಿಜಯರಡ್ಡಿ–1, ಎಂ.ಎಂ. ನದಾಫ್–2. 400 ಮೀ.ಓಟ: ಅನೀಲ–1, ಶಿವಮೂರ್ತಿ–2. ಹೈಜಂಪ್‌: ವಿಜಯರಡ್ಡಿ–1, ಎಂ.ಎಂ. ನದಾಫ್–2. ಡಿಸ್ಕಸ್‌ ಥ್ರೊ– ಪಾಂಡು–1, ಯಲ್ಲಪ್ಪ–2. ಶಾಟ್‌ಪಟ್‌: ಪಾಂಡು–1, ಮಂಜುನಾಥ–2. 

ಮಹಿಳೆಯರು(ಪಿಸಿ–ಎಎಸ್‌ಐ): 100 ಮೀ. ಓಟ : ಅಶ್ವಿನಿ–1, ಪ್ರಿಯಾ–2. 200 ಮೀ.: ಶಿಲ್ಪಾ–1, ಪ್ರಿಯಾ–2. 400 ಮೀ.: ಶಿಲ್ಪಾ–1, ಪ್ರಿಯಾ–2. ಡಿಸ್ಕಸ್‌ ಥ್ರೊ: ಪ್ರಿಯಾ–1, ಶಿಲ್ಪಾ–2. ಶಾಟ್‌ಪಟ್‌: ಸರೂಬಾಯಿ–1, ಕಾನಾಬಾಯಿ–2. ಹೈಜಂಪ್‌: ಪ್ರಿಯಾ–1, ಶಿಲ್ಪಾ–2. ಲಾಂಗ್‌ಜಂಪ್‌: ಅಶ್ವಿನಿ–1, ಶಿಲ್ಪಾ–2.

ಕ್ರೀಡಾಕೂಟದಲ್ಲಿ ಪಾಲ್ಗೊಂಡ ಪೊಲೀಸ್‌ ಸಿಬ್ಬಂದಿ ಗುರಿಯತ್ತ ಮುನ್ನುಗ್ಗಿದರು

ಕ್ರೀಡೆಯಿಂದ ಪುನಶ್ಚೇತನಗೊಳ್ಳಿ: ಸುಶೀಲಾ ಚುಮುಚುಮು ಚಳಿಯ ನಡುವೆಯೇ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಕಾಣಿಸಿಕೊಂಡ ಪೊಲೀಸರು ಕ್ರೀಡಾಕೂಟದ ಪೂರ್ವಾಭ್ಯಾಸ ನಡೆಸಿದರು. ಕೂಟದ ಉದ್ಘಾಟನೆಗೆ ಅತಿಥಿಗಳು ಆಗಮಿಸಿದ ಬಳಿಕ ಆಕರ್ಷಕ ಪಥ ಸಂಚಲನ ನಡೆಸಿ ವಂದನೆ ಸಲ್ಲಿಸಿದರು. ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಕೆಆರ್‌ಟಿಸಿ) ವ್ಯವಸ್ಥಾಪಕ ನಿರ್ದೇಶಕಿ ಬಿ. ಸುಶೀಲಾ ‘ಪೊಲೀಸ್ ಇಲಾಖೆಯವರು ದಿನದ 24 ತಾಸು ಕಾರ್ಯನಿರ್ವಹಿಸುವವರು. ಜನರಿಗೆ ಸುರಕ್ಷಾ ಭಾವ ನೀಡುವ ಅವರಿಗೆ ದೈಹಿಕ ಮತ್ತು ಮಾನಸಿಕ ಸದೃಢತೆ ಕಾಯ್ದುಕೊಳ್ಳಲು ಇಂಥ ಕ್ರೀಡಾಕೂಟಗಳು ಅವಶ್ಯಕ’ ಎಂದರು. ‘ಪರಸ್ಪರ ಸಹಕಾರ ಭ್ರಾತೃತ್ವ ಭಾವನೆಯನ್ನು ಕ್ರೀಡೆಗಳು ಹೆಚ್ಚಿಸುತ್ತವೆ. ಕ್ರೀಡಾಕೂಟದ ಮೂಲಕ ಪುನಶ್ಚೇತನಗೊಂಡು ಸಾರ್ವಜನಿಕ ಸೇವೆಗೆ ಅಣಿಯಾಗಬೇಕು’ ಎಂದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಶರಣಪ್ಪ ಎಸ್‌.ಡಿ. ಡಿಸಿಪಿ ಕನಿಕಾ ಸಿಕ್ರಿವಾಲ್‌ ಸೇರಿದಂತೆ ಅಧಿಕಾರಿಗಳು ಸಿಬ್ಬಂದಿ ಕ್ರೀಡಾಪಟುಗಳು ಪಾಲ್ಗೊಂಡಿದ್ದರು.  ಬಸವೇಶ್ವರ ಹೀರಾ ಸ್ವಾಗತಿಸಿದರು. ಶಿವನಗೌಡ ಪಾಟೀಲ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.