ADVERTISEMENT

ನಿವೃತ್ತ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನ ಅಗತ್ಯ: ಶರಣಪ್ಪ ಅಭಿಮತ

​ಪ್ರಜಾವಾಣಿ ವಾರ್ತೆ
Published 22 ಜನವರಿ 2026, 4:44 IST
Last Updated 22 ಜನವರಿ 2026, 4:44 IST
ಕಲಬುರಗಿಯ ನಿವೃತ್ತ ಪೊಲೀಸ್ ಅಧಿಕಾರಿಗಳ ಭವನದ ಸಭಾಂಗಣದಲ್ಲಿ ಬುಧವಾರ ನಡೆದ ಸಂಘದ 11ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಗೆ ನಗರ ಪೊಲೀಸ್ ಆಯುಕ್ತ ಶರಣಪ್ಪ ಎಸ್‌.ಡಿ ಚಾಲನೆ ನೀಡಿದರು
ಕಲಬುರಗಿಯ ನಿವೃತ್ತ ಪೊಲೀಸ್ ಅಧಿಕಾರಿಗಳ ಭವನದ ಸಭಾಂಗಣದಲ್ಲಿ ಬುಧವಾರ ನಡೆದ ಸಂಘದ 11ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಗೆ ನಗರ ಪೊಲೀಸ್ ಆಯುಕ್ತ ಶರಣಪ್ಪ ಎಸ್‌.ಡಿ ಚಾಲನೆ ನೀಡಿದರು   

ಕಲಬುರಗಿ: ‘ಪೊಲೀಸ್ ಅಧಿಕಾರಿಗಳು ಕೇವಲ ವೃತ್ತಿಯಿಂದ ನಿವೃತ್ತರಾಗುತ್ತಾರೆಯೇ ವಿನಹಃ, ಜವಾಬ್ದಾರಿಯಿಂದಲ್ಲ. ಅಪರಾಧ ರಹಿತ ಸಮಾಜ ನಿರ್ಮಾಣಕ್ಕೆ ಅವರ ಮಾರ್ಗದರ್ಶನ ಅಗತ್ಯ’ ಎಂದು ನಗರ ಪೊಲೀಸ್ ಆಯುಕ್ತ ಶರಣಪ್ಪ ಎಸ್.ಡಿ. ಹೇಳಿದರು.

ನಗರದ ನಿವೃತ್ತ ಪೊಲೀಸ್ ಅಧಿಕಾರಿಗಳ ಭವನದ ಸಭಾಂಗಣದಲ್ಲಿ ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಬುಧವಾರ ಆಯೋಜಿಸಿದ್ದ ಸಂಘದ 11ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.

‘ಪೊಲೀಸ್ ಸೇವೆ ದೇಶ ಸೇವೆಗೆ ಸಮಾನವಾದುದ್ದಾಗಿದೆ. ಈ ಸೇವೆಯಲ್ಲಿ ತ್ಯಾಗಕ್ಕೂ ತಯಾರಿರಬೇಕು. ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ ತರುವವರನ್ನು ಮಟ್ಟಹಾಕುವ ಸಂದರ್ಭದಲ್ಲಿ ತ್ಯಾಗ ಮಾಡಬೇಕಾಗುತ್ತದೆ. ಪೊಲೀಸರು ತಮ್ಮ ಜೀವನದ ಅಮೂಲ್ಯ ಸಮಯ ವೃತ್ತಿಗೆ ಮೀಸಲಿಟ್ಟಿರುತ್ತಾರೆ. ಕಾರಣ ಜನರು ನೆಮ್ಮದಿಯಾಗಿದ್ದಾರೆ’ ಎಂದರು.

ADVERTISEMENT

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ಮಾತನಾಡಿ, ‘ಬಂದೋಬಸ್ತ್‌ ವೇಳೆ ನಿವೃತ್ತ ಅಧಿಕಾರಿಗಳ ಮಾರ್ಗದರ್ಶನ ಬೇಕಾಗುತ್ತದೆ. ಆರ್‌ಎಸ್‌ಎಸ್‌ ಪಥಸಂಚಲನ ಪ್ರಕರಣದ ಸಂದರ್ಭದಲ್ಲೂ ನಿವೃತ್ತ ಅಧಿಕಾರಿಗಳ ನೆರವು ಪಡೆಯಲಾಗಿತ್ತು. ನಿವೃತ್ತರಾದ ಬಳಿಕವೂ ಇಲಾಖೆ ಜೊತೆ ಕೈಜೋಡಿಸಬೇಕು’ ಎಂದು ಮನವಿ ಮಾಡಿದರು.

‘2014ರಲ್ಲಿ ಸ್ಥಾಪನೆಯಾದ ಈ ಸಂಘಕ್ಕೆ 11 ವರ್ಷಗಳಾಗಿವೆ. ಸಾಕಷ್ಟು ಅಭಿವೃದ್ಧಿ ಹೊಂದುತ್ತಿದೆ. ನಿವೃತ್ತರಾದ ಪೊಲೀಸ್ ಅಧಿಕಾರಿಗಳನ್ನು ಸಂಘಕ್ಕೆ ಸೇರಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ವೀರಣ್ಣ ಜಿ.ಹೊನಶೆಟ್ಟಿ ಮಾತನಾಡಿ, ‘2014ರಲ್ಲಿ ಸಂಘ ಸ್ಥಾಪನೆಯಾಗಿದೆ. 1,050 ಸದಸ್ಯರಿದ್ದಾರೆ. ನಿವೃತ್ತರು, ಅಧಿಕಾರಿಗಳು, ಜನಪ್ರತಿನಿಧಿಗಳ ದೇಣಿಗೆ ಹಾಗೂ ಇಲಾಖೆಯ ಅನುದಾನದಲ್ಲಿ ಭವನ ನಿರ್ಮಿಸಲಾಗಿದೆ. ರಕ್ತದಾನ ಶಿಬಿರದಂಥ ಕಾರ್ಯಕ್ರಮಗಳನ್ನು ಮಾಡಲಾಗಿದೆ’ ಎಂದು ತಿಳಿಸಿದರು.

ಪಾಳಾ ಹಿರೇಮಠದ ಗುರುಮೂರ್ತಿ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಕೆಕೆಸಿಸಿಐ ಅಧ್ಯಕ್ಷ ಶರಣಬಸಪ್ಪ ಪಪ್ಪಾ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹೇಶ ಮೇಘಣ್ಣವರ ಹಾಗೂ ಸಂಘದ ಮಾಜಿ ಅಧ್ಯಕ್ಷ ಬಸವರಾಜ ಇಂಗಿನ ಹಾಜರಿದ್ದರು. 

ಸಂಘದ ಕಾರ್ಯಕ್ರಮಕ್ಕೆ ಬಂದಿದ್ದು ಸಂತಸ ತಂದಿದೆ. ಜಿಲ್ಲೆಯ ನಿವೃತ್ತ ಪೊಲೀಸ್ ಅಧಿಕಾರಿಗಳು ತಮ್ಮ ಆರೋಗ್ಯದ ಕಡೆ ಗಮನಹರಿಸಬೇಕು
ಬಿ.ಜಿ.ಪಾಟೀಲ ವಿಧಾನ ಪರಿಷತ್ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.