ADVERTISEMENT

ಕಲಬುರಗಿ | ಭಯಮುಕ್ತ ಮತದಾನ: ಯೋಧರ ಪಥ ಸಂಚಲನ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2023, 5:03 IST
Last Updated 7 ಏಪ್ರಿಲ್ 2023, 5:03 IST
ಕಲಬುರಗಿಯಲ್ಲಿ ಗುರುವಾರ ನಡೆದ ಪಥಸಂಚಲನ ವೇಳೆ ಮಗುವನ್ನು ಎತ್ತಿಕೊಂಡು ಸಂತಸ ವ್ಯಕ್ತಪಡಿಸಿದ ಕೇಂದ್ರ ಮೀಸಲು ಪಡೆಯ ಯೋಧ –ಪ್ರಜಾವಾಣಿ ಚಿತ್ರ
ಕಲಬುರಗಿಯಲ್ಲಿ ಗುರುವಾರ ನಡೆದ ಪಥಸಂಚಲನ ವೇಳೆ ಮಗುವನ್ನು ಎತ್ತಿಕೊಂಡು ಸಂತಸ ವ್ಯಕ್ತಪಡಿಸಿದ ಕೇಂದ್ರ ಮೀಸಲು ಪಡೆಯ ಯೋಧ –ಪ್ರಜಾವಾಣಿ ಚಿತ್ರ   

ಕಲಬುರಗಿ: ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾರರು ಭಯಮುಕ್ತವಾಗಿ ಮತ ಚಲಾಸುವಂತೆ ಮಾಡಲು ಕೇಂದ್ರ ಮೀಸಲು ಪಡೆಯ ಯೋಧರು ಗುರುವಾರ ನಗರದಲ್ಲಿ ಪಥಸಂಚಲನ ನಡೆಸಿದರು.

ಬುಧವಾರ ಡಿಸಿಪಿ ಅಡ್ಡೂರು ಶ್ರೀನಿವಾಸಲು, ಎಸಿಪಿ ದೀಪನ್ ಎಂ.ಎನ್. ನೇತೃತ್ವದಲ್ಲಿ ಕೇಂದ್ರ ಸಶಸ್ತ್ರ ಪಡೆಗಳು, ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ತಂಡ ಆಳಂದ ರಸ್ತೆಯಲ್ಲಿ ಪಥ ಸಂಚಲನ ನಡೆಸಿದವು. ಇಂದು ಹುಮನಾಬಾದ್ ರಸ್ತೆ, ಮುಸ್ಲಿಂ ಚೌಕ್, ಹಳೆ ಚೌಕ್‌ ಪೊಲೀಸ್‌ ಠಾಣೆ ವೃತ್ತ, ಮಾರ್ಕೆಟ್ ರಸ್ತೆಯಲ್ಲಿ ಪಥಸಂಚಲನ ನಡೆಸಿದರು.

ಪ್ರಮುಖ ರಸ್ತೆಗಳಲ್ಲಿ ಅತ್ಯಂತ ಶಿಸ್ತು ಬದ್ಧರಾಗಿ ಕೈಯಲ್ಲಿ ತಮ್ಮ ಶಸ್ತ್ರಗಳನ್ನು ಹಿಡಿದುಕೊಂಡು ಹೆಜ್ಜೆ ಹಾಕುತ್ತಿದ್ದ ಯೋಧರನ್ನು ಸಾರ್ವಜನಿಕರು ಕುತೂಹಲದಿಂದ ವೀಕ್ಷಿಸಿದರು. ಕೆಲವರು ಪಥ ಸಂಚಲನದ ದೃಶ್ಯಗಳನ್ನು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದರು.

ADVERTISEMENT

ಹಳೆ ಚೌಕ್‌ ಪೊಲೀಸ್‌ ಠಾಣೆ ವೃತ್ತದಲ್ಲಿ ಕೇಂದ್ರ ಮೀಸಲು ಪಡೆಯ ಯೋಧರು ಮಗುವನ್ನು ಎತ್ತಿಕೊಂಡು ನಗುಮೊಗದೊಂದಿಗೆ ಫೋಟೊ ತೆಗೆಸಿಕೊಂಡರು. ಮಗುವಿನ ತಾಯಿಯೂ ಹರ್ಷ ವ್ಯಕ್ತಪಡಿಸಿದಳು. ಕೆಲವು ಮಕ್ಕಳು ಯೋಧರೊಂದಿಗೆ ಸಾಲಾಗಿ ನಿಂತು ಫೋಟೊ ತೆಗೆಸಿಕೊಂಡಿದ್ದು ಗಮನ ಸೆಳೆಯಿತು.

ಮೇ 10ರಂದು ನಡೆಯುವ ಮತದಾನದಲ್ಲಿ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಬಂದು ತಮ್ಮ ಹಕ್ಕು ಚಲಾವಣೆ ಮಾಡಬೇಕು. ನಿಷ್ಪಕ್ಷಪಾತ ಚುನಾವಣೆಗೆ ಸಾರ್ವಜನಿಕರು ಸಹ ಸಹಕಾರ ನೀಡಬೇಕು. ಪುಂಡ–ಪೋಕರಿ, ಕಿಡಿಗೇಡಿಗಳು ತಮ್ಮ ಯಾವುದೇ ತರಹದ ದುಷ್ಕೃತ್ಯ ನಡೆಸಲು ಸಾಧ್ಯವಿಲ್ಲ. ಜನರ ರಕ್ಷಣೆಗೆ ನಾವಿದ್ದೇವೆ ಎಂದು ಸಂದೇಶವನ್ನು ಸಾರಿದರು.

‘ಚುನಾವಣೆ ಬಂದೋಬಸ್ತ್ ಹಾಗೂ ಶಾಂತಿ ಸುವ್ಯವಸ್ಥೆಯ ಪಾಲನೆ ದೃಷ್ಟಿಯಿಂದ ಕೇಂದ್ರ ಮೀಸಲು ಪಡೆಗಳು ನಗರದಲ್ಲಿ ಬೀಡುಬಿಟ್ಟಿವೆ. ಜನರಲ್ಲಿ ಭದ್ರತೆಯ ಭಾವನೆ ಮೂಡಿಸಲು ಕಳೆದ ಎರಡು ದಿನಗಳಿಂದ ಪ್ರಮುಖ ರಸ್ತೆಗಳಲ್ಲಿ ಪಥ ಸಂಚಲನ ನಡೆಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಪರೇಡ್ ನಡೆಸಲಾಗುವುದು’ ಎಂದು ನಗರ ಪೊಲೀಸ್ ಕಮಿಷನರ್ ಚೇತನ್ ಆರ್. ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.