ಜೇವರ್ಗಿ: ‘ನೇಪಾಳದ ಪರಿಸ್ಥಿತಿ ರಾಜ್ಯಕ್ಕೂ ಬರಲಿದೆ. ರಾಜ್ಯದಲ್ಲಿ ಜನರಿಂದ ಕ್ರಾಂತಿಯಾಗಲಿದೆ’ ಎಂದು ವಿಜಯಪುರ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಭವಿಷ್ಯ ನುಡಿದರು.
ತಾಲ್ಲೂಕಿನ ಜೇರಟಗಿ ಗ್ರಾಮದಲ್ಲಿ ಭಾನುವಾರ ಹಿಂದೂ ಮಹಾಗಣಪತಿ ವಿಸರ್ಜನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಿಂದು ವಿರೋಧಿ ಧೋರಣೆಯಿಂದ ಶೀಘ್ರವೇ ರಾಜ್ಯ ಸರ್ಕಾರ ಪತನವಾಗಲಿದೆ. ರಾಜ್ಯದ ಜನರು ತಾಳ್ಮೆ ಕಳೆದುಕೊಂಡಿದ್ದು, ಸದ್ಯದಲ್ಲೇ ಕ್ರಾಂತಿಯ ಹಾದಿ ಹಿಡಿಯಲಿದ್ದಾರೆ. ರಾಜ್ಯದಲ್ಲಿ ಸಿದ್ದರಾಮಯ್ಯನವರ ಭ್ರಷ್ಟಾಚಾರ ಹೆಚ್ಚಾಗಿದೆ. ಸಿದ್ದರಾಮಯ್ಯ ರಾಜಕೀಯ ಶೀಘ್ರದಲ್ಲೇ ಅಂತ್ಯವಾಗುವುದು ಖಚಿತ’ ಎಂದು ಹೇಳಿದರು.
‘ಕೇಂದ್ರ ಬಿಜೆಪಿ ತೆಗೆದುಕೊಂಡಿರುವ ನಿರ್ಧಾರವನ್ನು ಬದಲಾಯಿಸಿಕೊಂಡು 2028ರ ಚುನಾವಣೆ ವೇಳೆ ರಾಜ್ಯದ ಜವಾಬ್ದಾರಿ ನೀಡುತ್ತಾರೆ ಎಂಬ ನಂಬಿಕೆ ಇದೆ’ ಎಂದರು.
ಇದಕ್ಕೂ ಮುನ್ನ ಜೇರಟಗಿಗೆ ಆಗಮಿಸಿದ ಬಸವನಗೌಡ ಪಾಟೀಲ ಯತ್ನಾಳ ಅವರಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ವಾಗತ ಕೋರಿದ ಅಭಿಮಾನಿಗಳು, ವೇದಿಕೆ ವರೆಗೆ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿದರು.
ಶ್ರೀನಿವಾಸ ಸರಡಗಿಯ ಅಪ್ಪಾರಾವ ಮುತ್ಯಾ, ಜೇರಟಗಿ ವಿರಕ್ತ ಮಠದ ಮಹಾಂತ ಸ್ವಾಮೀಜಿ, ಅಂಕಲಗಾ ಅಭಿನವ ಗುರುಬಸವ ಸ್ವಾಮೀಜಿ, ಹಾರಿಕಾ ಮಂಜುನಾಥ, ಬಿಜೆಪಿ ಮುಖಂಡರಾದ ಶಿವರಾಜ ಪಾಟೀಲ ರದ್ದೇವಾಡಗಿ, ಆನಂದ ದೇಸಾಯಿ, ಸುರೇಶ ನೇದಲಗಿ, ಶ್ರೀಶೈಲ ಬಿರಾದಾರ, ರೇವಣಸಿದ್ದಪ್ಪ ಸಂಕಾಲಿ, ಹಳ್ಳೆಪ್ಪಚಾರ್ಯ ಜೋಶಿ, ಸಿದ್ದು ಸಾಹು ಅಂಗಡಿ, ಸಮಾಧಾನ ಪೂಜಾರಿ, ಈಶ್ವರ ಹಿಪ್ಪರಗಿ, ಧರ್ಮು ಚಿನ್ನಿ ರಾಠೋಡ, ಸೇರಿದಂತೆ ಸಹಸ್ರಾರು ಜನ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.