ADVERTISEMENT

ಕಳಪೆ ಹತ್ತಿ ಬೀಜ: ರೈತರ ಗೋಳಾಟ

ಮೊಳಕೆಯೊಡೆಯುವ ಮುನ್ನವೇ ಕೊಳೆಯುತ್ತಿವೆ ಬೀಜಗಳು

​ಪ್ರಜಾವಾಣಿ ವಾರ್ತೆ
Published 8 ಜುಲೈ 2020, 14:18 IST
Last Updated 8 ಜುಲೈ 2020, 14:18 IST
ವಾಡಿ ಸಮೀಪದ ಹಲಕರ್ಟಿ ಗ್ರಾಮದಲ್ಲಿ ಹತ್ತಿ ಬೀಜ ಮೊಳಕೆಯೊಡೆಯದ ಸ್ಥಳದಲ್ಲಿ ಪುನಃ ಬೀಜ ಹಾಕುತ್ತಿರುವುದು.
ವಾಡಿ ಸಮೀಪದ ಹಲಕರ್ಟಿ ಗ್ರಾಮದಲ್ಲಿ ಹತ್ತಿ ಬೀಜ ಮೊಳಕೆಯೊಡೆಯದ ಸ್ಥಳದಲ್ಲಿ ಪುನಃ ಬೀಜ ಹಾಕುತ್ತಿರುವುದು.   

ವಾಡಿ: ನಾಲವಾರ ವಲಯದ ಬಹುತೇಕ ಹಳ್ಳಿಗಳಲ್ಲಿ ಬಿತ್ತನೆ ಮಾಡಿರುವ ಹತ್ತಿ ಬೀಜಗಳು ನೆಲ ಬಿಟ್ಟು ಮೇಲೆಳುತ್ತಿಲ್ಲ. ಭೂಮಿಯ ಒಡಲಿನಲ್ಲಿಯೇ ಕೊಳೆತು ಹೋಗುತ್ತಿದ್ದು, ಕಳಪೆ ಬೀಜಕ್ಕೆ ಸಾಕ್ಷಿಯಾಗಿವೆ.

ನಾಲವಾರ, ಲಾಡ್ಲಾಪುರ, ಹಲಕರ್ಟಿ, ತರಕಸ ಪೇಟ್, ಸನ್ನತ್ತಿ ಸೇರಿದಂತೆ ಹಲವು ಗ್ರಾಮ ಹಾಗೂ ತಾಂಡಾಗಳಲ್ಲಿ ಬಿತ್ತಿರುವ ಹತ್ತಿ ಬೀಜಗಳಲಲ್ಲಿ ಅರ್ಧಕ್ಕರ್ಧ ಮೊಳಕೆಯೊಡೆದಿಲ್ಲ. ರೈತರು ಮೊಳಕೆಯೊಡೆಯದ ಜಾಗದಲ್ಲಿ ಪುನಃ ಬಿತ್ತನೆ ಮಾಡುತ್ತಿದ್ದಾರೆ.

ಹಲವು ರೈತರು ಒಂದೇ ಹೊಲದಲ್ಲಿ ಮೂರು ಸಾರಿ ಬಿತ್ತನೆ ಮಾಡಿದ್ದು, ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಬಿತ್ತನೆ ಹಂತದಲ್ಲಿಯೇ ಈ ಗತಿಯಾದರೆ ಮುಂದೆ ಹೇಗೆ? ಎನ್ನುವುದು ಹಲವು ರೈತರ ಚಿಂತೆಯಾಗಿದೆ. ಕೆಲವು ಕಡೆ ಮೊಳಕೆಯೊಡೆದ ಬೀಜಗಳಲ್ಲಿ ಪ್ರಾರಂಭಿಕ ಹಂತದಲ್ಲಿಯೇ ರೋಗಲಕ್ಷಣ ಕಂಡುಬಂದಿದೆ.

ADVERTISEMENT

ಹೆಚ್ಚು ಇಳುವರಿಯ ಆಸೆ ಹುಟ್ಟಿಸಿ ಕಳಪೆ ಬೀಜ ಪೂರೈಸಿದ್ದಾರೆ. ಉತ್ತಮ ಫಸಲು ಸಿಗುವ ತವಕದಲ್ಲಿ ಸಾಲ ಮಾಡಿ ದುಬಾರಿ ಹಣ ತೆತ್ತು ನೂರಾರು ರೈತರು ಬೀಜ ಖರೀದಿಸಿ ಬಿತ್ತನೆ ಕೈಗೊಂಡಿದ್ದಾರೆ. ಅನಧಿಕೃತ ಅಂಗಡಿಗಳು ಹಾಗೂ ಮಧ್ಯವರ್ತಿಗಳ ಮೂಲಕ ಬೀಜ ಖರೀದಿಸಿರುವ ರೈತರು ಈಗ ಗೋಳಾಡುವಂತಾಗಿದೆ.

ಕಡಿಮೆ ಬೆಲೆಗೆ ಬೀಜ ಸಿಕ್ಕರೆ ನಾಲ್ಕು ಕಾಸು ಉಳಿಯುತ್ತದೆ ಎಂಬ ಯೋಚನೆ ಹಾಗೂ ಬೀಜ ಖರೀದಿಗೆ ರಶೀದಿ ಪಡೆಯಬೇಕೆನ್ನುವ ಜ್ಞಾನದ ಕೊರತೆಯನ್ನೇ ಮಧ್ಯವರ್ತಿಗಳು ಬಂಡವಾಳ ಮಾಡಿಕೊಂಡು ಹಳ್ಳಿ ಹಳ್ಳಿಗೂ ಬೀಜ ಸರಬರಾಜು ಮಾಡಿದ್ದಾರೆ. ಬೀಜಗಳು ಆಂಧ್ರದ ಅಧೋನಿಯಿಂದ ಅನಧಿಕೃತವಾಗಿ ಪೂರೈಕೆಯಾಗಿವೆ.

'ನಾವು ತಲಾ ಎರಡು ಎಕರೆ ಜಮೀನಿನಲ್ಲಿ ಹತ್ತಿ ಬೀಜ ಹಾಕಿದ್ದೆವು. ಆದರೆ ಬೀಜ ಮೊಳಕೆಯೊಡೆಯದ ಕಾರಣ ಪುನಃ ಬಿತ್ತಿದ್ದೇವೆ' ಎಂದು ಅಳಲು ತೋಡಿಕೊಳ್ಳುತ್ತಾರೆ ರೈತರಾದ ಹಣ್ಣಿಕೇರಾ ರೈತರಾದ ಮೌಲಾನಸಾಬ್ ಹಾಗೂ ದೇವಪ್ಪ ನಡಿಗೇರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.