ಅಫಜಲಪುರ: ‘ಪಟ್ಟಣದಿಂದ ಘತ್ತರಗಾ ಗ್ರಾಮದವರೆಗೆ ಸಂಚರಿಸುವ ಜಿಲ್ಲಾ ಮುಖ್ಯ ರಸ್ತೆಯಲ್ಲಿ ಬರುವ ಬನ್ನಟ್ಟಿ ಗ್ರಾಮದಿಂದ ಕ್ಯಾಶಾಪುರ್ ಗ್ರಾಮದ ವರೆಗಿನ ರಸ್ತೆ ನಿರ್ಮಾಣ ಮಾಡಿ ಎರಡು ತಿಂಗಳಲ್ಲಿಯೇ ಹಾಳಾಗಿದ್ದು, ಇದರಿಂದ ಕಳಪೆ ಗುಣಮಟ್ಟದ ಕಾಮಗಾರಿ ಮಾಡಲಾಗಿದೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ರಸ್ತೆ ಪರಿಶೀಲಿಸಬೇಕು’ ಎಂದು ಕಬ್ಬು ಬೆಳೆಗಾರ ಸಂಘದ ಜಿಲ್ಲಾಧ್ಯಕ್ಷ ರಮೇಶ್ ಹೂಗಾರ್ ಒತ್ತಾಯಿಸಿದ್ದಾರೆ.
ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿರುವ ಅವರು, ‘ರಸ್ತೆ ಬದಿಯಲ್ಲಿಯೇ ಸಕ್ಕರೆ ಕಾರ್ಖಾನೆ ಇರುವ ಕಾರಣ, ಇನ್ನೂ ಎರಡ್ಮೂರು ತಿಂಗಳಲ್ಲಿ ಕಬ್ಬು ನುರಿಸುವ ಕೆಲಸ ಆರಂಭವಾಗಲಿದೆ. 10 ರಿಂದ 20 ಟನ್ ಕಬ್ಬು ಹೊತ್ತ ವಾಹನಗಳು ಸಂಚರಿಸಲಿದ್ದು, ಆ ಸಂದರ್ಭದಲ್ಲಿ ರಸ್ತೆ ಸಂಪೂರ್ಣ ಹಾಳಾಗಿ ಹೋಗುತ್ತದೆ’.
‘ಕೇವಲ ಕಾಟಾಚಾರಕ್ಕೆ ರಸ್ತೆ ನಿರ್ಮಾಣ ಮಾಡಲಾಗಿದ್ದು, ಪ್ರಾಧಿಕಾರದ ಎಂಜಿನಿಯಗಳು ಶಾಮಿಲಾಗಿದ್ದಾರೆ. ಸರ್ಕಾರದ ಅನುದಾನ ಸಾಕಷ್ಟು ದುರ್ಬಳಕೆಯಾಗುತ್ತಿದೆ. ಘತ್ತರಗಿ ಗ್ರಾಮದಲ್ಲಿ ಭಾಗ್ಯವಂತಿ ದೇವಸ್ಥಾನವಿದ್ದು ಪ್ರತಿದಿನ ಸಾವಿರಾರು ವಾಹನಗಳು ಸಂಚಾರ ಮಾಡುತ್ತವೆ. ಹೀಗಾಗಿ ಗುಣಮಟ್ಟದ ರಸ್ತೆ ನಿರ್ಮಾಣ ಮಾಡಬೇಕು’ ಎಂದು ಆಗ್ರಹಿಸಿದ್ದಾರೆ.
‘ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರದವರು ರಸ್ತೆ ನಿರ್ಮಾಣ ಮಾಡಿರುವ ಸ್ಥಳಕ್ಕೆ ಭೇಟಿ ನೀಡಿ ಕಳಪೆ ಕಾಮಗಾರಿಯನ್ನು ವೀಕ್ಷಣೆ ಮಾಡಬೇಕು. ರಸ್ತೆಯನ್ನು ಪುನಃ ನಿರ್ಮಾಣ ಮಾಡಬೇಕು. ಈ ಭಾಗದ ಜನಪ್ರತಿನಿಧಿಗಳು ಗಮನ ಹರಿಸಬೇಕು’ ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.