ADVERTISEMENT

ಅನ್ನಕ್ಕಾಗಿ ಅಂಗಲಾಚುತ್ತಿರುವ ಅಲೆಮಾರಿಗಳು

ಹಸಿದವರ ಮೇಲೆ ಬರೆ ಎಳೆದ ಕೊರೊನಾ l ಕಣ್ಣೆತ್ತಿಯೂ ನೋಡದ ಜಿಲ್ಲಾಡಳಿತ l 600 ಜನರ ಸ್ಥಿತಿ ಅಯೋಮಯ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2020, 9:54 IST
Last Updated 31 ಮಾರ್ಚ್ 2020, 9:54 IST
ಕಲಬುರ್ಗಿಯ ಶಹಬಾದ್‌ ರಸ್ತೆಯಲ್ಲಿರುವ ಅಲೆಮಾರಿ ಜನ
ಕಲಬುರ್ಗಿಯ ಶಹಬಾದ್‌ ರಸ್ತೆಯಲ್ಲಿರುವ ಅಲೆಮಾರಿ ಜನ   

ಕಲಬುರ್ಗಿ: ತುತ್ತು ಅನ್ನಕ್ಕಾಗಿ ಕೈ ಚಾಚುತ್ತಿರುವ ಪುಟ್ಟ ಮಕ್ಕಳು, ಹರಕಲು ಬಟ್ಟೆಯಲ್ಲೇ ಪ‍ರದಾಡುತ್ತಿರುವ ಗಂಡ
ಸರು, ಬೊಗಸೆ ಅಕ್ಕಿ–ಬೇಳೆಗಾಗಿ ಕೈ ಮುಗಿದು ಬೇಡಿಕೊಳ್ಳುವ ಮಹಿಳೆಯರು, ಯಾರಾದರೂ ಸಹಾಯಕ್ಕೆ ಬಂದಾರೆಯೇ ಎಂದು ಹುಡುಕುತ್ತಿರುವ ದಯನೀಯ ಕಣ್ಣುಗಳು!

ಕಲಬುರ್ಗಿ ನಗರದ ರಾಜಾಪುರ ಬಡಾವಣೆ ಹಾಗೂ ರಾಮತೀರ್ಥ ಕಾಲೊನಿಯಲ್ಲಿ ವಾಸವಾಗಿರುವ ಅಲೆಮಾರಿ ಜನರ ಬದುಕಿನ ಚಿತ್ರಣವಿದು.

ಕೊರೊನಾ ಹೊಡೆತಕ್ಕೆ ಅಲೆಮಾರಿ– ಅರೆಅಲೆಮಾರಿ ಸಮುದಾಯದ ಜನ ಅಕ್ಷರಶಃ ತತ್ತರಿಸಿ ಹೋಗಿದ್ದಾರೆ. ತುತ್ತು ಅನ್ನಕ್ಕಾಗಿ ಅಂಗಲಾಚುತ್ತಿದ್ದಾರೆ.

ADVERTISEMENT

ಈ ನಿರ್ಗತಿಕರ ಕಷ್ಟ ನೋಡಲಾರದೇ ವ್ಯಕ್ತಿಯೊಬ್ಬರು ಮೊಬೈಲ್‌ನಲ್ಲಿ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ‘ಮಕ್ಕಳು ಹಸಿದುಕೊಂಡಿವೆ, ದುಡಿಮೆ ಇಲ್ಲ, ಎಲ್ಲಿಯೂ ತುತ್ತು ಅನ್ನ– ಭಿಕ್ಷೆ ಸಿಗುತ್ತಿಲ್ಲ... ಸಾಹೇಬರು ಸಹಾಯ ಮಾಡಿ’ ಎಂದು ಮಹಿಳೆಯರು, ಮಕ್ಕಳು ಕೈ ಮುಗಿದು ಅಂಗಲಾಚುತ್ತಿದ್ದಾರೆ.

ಯಾರಿವರು? ಎಲ್ಲಿಂದ ಬಂದರು?: ರಾಜಾಪುರ ಬಡಾವಣೆ ಹಾಗೂ ರಾಮತೀರ್ಥ ಕಾಲೊನಿಯ ಖಾಲಿ ನಿವೇಶನಗಳಲ್ಲಿ ಸುಮಾರು 600ಕ್ಕೂ ಹೆಚ್ಚು ಜನ ವಾಸವಾಗಿದ್ದಾರೆ. ಬಿದಿರು, ಬಟ್ಟೆ, ಪ್ಲಾಸ್ಟಿಕ್‌, ಕಬ್ಬಿನ ಸಿಪ್ಪೆ, ಗೋಣಿಚೀಲ ಮುಂತಾದವುಗಳನ್ನು ಬಳಸಿಕೊಂಡು ಗುಡಿಸಲು ಕಟ್ಟಿಕೊಂಡಿದ್ದಾರೆ. ಇವರಲ್ಲಿ 100ಕ್ಕೂ ಹೆಚ್ಚು ಪುಟ್ಟ ಮಕ್ಕಳೂ ಇದ್ದಾರೆ. ಎಲ್ಲರೂ ಐದು ವರ್ಷದೊಳಗಿನ ಚಿಣ್ಣರು.

ಬುಡ್ಗ ಜಂಗಮ, ಸುಡುಗಾಡ ಸಿದ್ಧ, ಸಿಂಧೋಳ ಸಮುದಾಯಕ್ಕೆ ಸೇರಿದ ಈ ಜನರ ಕುಲವೃತ್ತಿ ಭಿಕ್ಷೆ. ಇವರಿಗೆ ಎಲ್ಲೂ ಮೂಲ ನೆಲೆ ಇಲ್ಲ. ಎಡರು ವರ್ಷಗಳಿಂದ ನಗರದಲ್ಲಿ ವಾಸವಾಗಿದ್ದು, ತೆಲಗು ಹಾಗೂ ಕನ್ನಡ ಮಾತನಾಡುತ್ತಾರೆ.

ಅನ್ನವೇ ಇಲ್ಲ; ಅರಿವು ಎಲ್ಲಿಂದ ಬರಬೇಕು?: ಕೊರೊನಾ ವೈರಾಣು ಹರಡದಂತೆ‌ ಇಡೀ ಜಿಲ್ಲೆಯನ್ನು ಲಾಕ್‌ಡೌನ್‌ ಮಾಡಿ ಎರಡು ವಾರ ಕಳೆದಿದೆ. ಎಲ್ಲೆಂದರಲ್ಲಿ ಜಾಗೃತಿ, ಅರಿವು ಮೂಡಿಸುವ ಕೆಲಸ ನಡೆದೇ ಇದೆ. ಆದರೆ, ಈವರೆಗೂ ಈ ಅಲೆಮಾರಿಗಳನ್ನು ಯಾರೊಬ್ಬರೂ ಕಣ್ಣೆತ್ತಿ ನೋಡಿಲ್ಲ. ಗುಡಿಸಲ ಆಚೆಗಿನ ಪ್ರಪಂಚದಲ್ಲಿ ಏನು ನಡೆಯುತ್ತಿದೆ ಎಂಬ ಪರಿವೇ ಇಲ್ಲದೇ ಈ ಜನ ಬದುಕುತ್ತಿದ್ದಾರೆ. ಗುಂಪಾಗಿಯೇ ಕಾಲಕಳೆಯುತ್ತಿದ್ದಾರೆ. ಪುಟ್ಟ ಗುಡಿಸಲಲ್ಲಿ ಹತ್ತು ಜನ ಮುದುಡಿಕೊಂಡು ಮಲಗುತ್ತಿದ್ದಾರೆ.‌ ಹೊಟ್ಟೆಗೆ ಹಿಟ್ಟೇ ಇಲ್ಲದಿರುವಾಗ ಅರಿವು ಪಡೆದು ಮಾಡುವುದೇನು? ಎಂಬ ಈ ಜನರ ಪ್ರಶ್ನೆಗೆ ಉತ್ತರಿಸುವವರೇ ಇಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.