ADVERTISEMENT

ಕಲಬುರ್ಗಿಗೆ 2 ಬಾರಿ ಭೇಟಿ ನೀಡಿದ್ದ ಪ್ರಣವ್‌ ಮುಖರ್ಜಿ

2015ರ ಡಿಸೆಂಬರ್‌ 22ರಂದು ಸಿಯುಕೆ ಘಟಿಕೋತ್ಸವ ಭಾಷಣ ಮಾಡಿದ್ದ ಪ್ರಣವ್‌ ಮುಖರ್ಜಿ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2020, 15:59 IST
Last Updated 31 ಆಗಸ್ಟ್ 2020, 15:59 IST
2015ರ ಡಿಸೆಂಬರ್‌ 22ರಂದು ನಡೆದ ಸಿಯುಕೆ ಘಟಿಕೋತ್ಸವದಲ್ಲಿ ಅಂದಿನ ರಾಷ್ಟ್ರಪತಿ ಆಗಿದ್ದ ಪ್ರಣವ್ ಮುಖರ್ಜಿ ಅವರು ಘಟಿಕೋತ್ಸವ ಭಾಷಣ ಮಾಡಿದ ಕ್ಷಣ
2015ರ ಡಿಸೆಂಬರ್‌ 22ರಂದು ನಡೆದ ಸಿಯುಕೆ ಘಟಿಕೋತ್ಸವದಲ್ಲಿ ಅಂದಿನ ರಾಷ್ಟ್ರಪತಿ ಆಗಿದ್ದ ಪ್ರಣವ್ ಮುಖರ್ಜಿ ಅವರು ಘಟಿಕೋತ್ಸವ ಭಾಷಣ ಮಾಡಿದ ಕ್ಷಣ   

ಕಲಬುರ್ಗಿ: ಮಾಜಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ಕಲಬುರ್ಗಿಗೆ ಎರಡು ಬಾರಿ ಭೇಟಿ ನೀಡಿದ್ದರು.2010ರಲ್ಲಿ ಇಲ್ಲಿನ ಇಎಸ್‌ಐ ಕಟ್ಟಡಕ್ಕೆ ಅಡಿಗಲ್ಲು ನೆರವೇರಿಸಲು ಬಂದಿದ್ದ ಅವರು, ನಂತರ 2015ರಲ್ಲಿ ಇದೇ ಇಎಸ್‌ಐ ಪ್ರಾಂಗಣದಲ್ಲಿ ನಡೆದ ಸಿಯುಕೆ ಎರಡನೇ ಘಟಿಕೋತ್ಸವದಲ್ಲೂ ಪಾಲ್ಗೊಂಡಿದ್ದರು.

2015ರ ಡಿಸೆಂಬರ್‌ 22ರಂದು ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಘಟಿಕೋತ್ಸವ ಭಾಷಣ ಮಾಡಿದ್ದ ಅವರು,ಬಿಸಿಲು ನಾಡಿನ ಸಂಸ್ಕೃತಿ, ಸಂಪ್ರದಾಯ ಹಾಗೂ ಸಿಯುಕೆ ಶೈಕ್ಷಣಿಕ ಮೆಟ್ಟಿಲುಗಳನ್ನು ಬಣ್ಣಿಸಿದ್ದರು.‌ ಉನ್ನತ ಶಿಕ್ಷಣದಲ್ಲಿ ಈ ಭಾಗದಲ್ಲಿ ಸಾಧಿಸಬೇಕಾದ ಗುರಿಗಳು, ಅದಕ್ಕೆ ವಿದ್ಯಾರ್ಥಿಗಳು, ಗುರುಗಳು, ಸಂಶೋಧಕರು ಇಡಬೇಕಾದ ಹೆಜ್ಜೆಗಳು ಹಾಗೂ ಸವಾಲುಗಳ ಬಗ್ಗೆಯೂ ಅವರು ಬೆಳಕು ಚೆಲ್ಲಿದ್ದರು. ವಿಶ್ವವಿದ್ಯಾಲಯದ ಎರಡನೇ ಘಟಿಕೋತ್ಸವವಾದ ಆ ಸಮಾರಂಭದಲ್ಲಿ ವಿವಿಧ ಪದಿಗಳನ್ನೂ ಪ್ರದಾನ ಮಾಡಿದ್ದರು.

ಸಿಯುಕೆ ಎರಡನೇ ಘಟಿಕೋತ್ಸವ 2015ರ ಜುಲೈ 28ರಂದು ನಿಗದಿಯಾಗಿತ್ತು. ಆದರೆ, ಜುಲೈ 27ರಂದು ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ನಿಧನರಾದ ಪ್ರಯುಕ್ತ ಭೇಟಿ ರದ್ದಾಯಿತು. ನಂತರ ಆರು ತಿಂಗಳ ಬಳೀಕ ಮುಖರ್ಜಿ ಅವರೇ ಆಗಮಿಸಿ ಘಟಿಕೋತ್ಸವ ನೆರವೇರಿಸಿದರು.

ADVERTISEMENT

ಆ ಘಟಿಕೋತ್ಸವದ ನೆನಪುಗಳನ್ನು ಮೆಲುಕು ಹಾಕಿದ ಸಿಯುಕೆ ಕುಲಪತಿ ಪ್ರೊ.ಎಚ್‌.ಎಂ. ಮಹೇಶ್ವರಯ್ಯ ಅವರು, ಸರಳ– ಸಜ್ಜನಿಕೆ ಹಾಗೂ ಸಮಯ ಪಾಲನೆಗೆ ಪ್ರತಿರೂಪವೆಂದರೆ ಅದು ಪ್ರಣವ್‌ ಮುಖರ್ಜಿ ಅವರು ಎಂದು ಬಣ್ಣಿಸಿದರು.

‘ಮುಖರ್ಜಿ ಅವರು ದೇಶ ಕಂಡ ಇದೂವರೆಗಿನ ವಿಶ್ವವಿದ್ಯಾಲಯಗಳ ಶ್ರೇಷ್ಠ ಕುಲಾಧಿಪತಿ ಆಗಿದ್ದರು. ಅವರಿಗೆ ಜಾಗತಿಕ ಶಿಕ್ಷಣದ ಬಗ್ಗೆ ಅಪಾರ ಜ್ಞಾನ ಇತ್ತು. ಇದು ವಿಶ್ವವಿದ್ಯಾಲಯಗಳ ಉನ್ನತ ಶಿಕ್ಷಣಕ್ಕೆ ದೊಡ್ಡ ಕೊಡುಗೆ ಆಗಿದೆ. ಕಡಿಮೆ ಖರ್ಚಿನಲ್ಲಿ ಬಡವರಿಗೂ ಉನ್ನತ ಶಿಕ್ಷಣ ಹೇಗೆ ಕೊಡಸಬಹುದು ಎಂಬ ಬಗ್ಗೆಯೇ ಅವರು ಪದೇಪದೇ ಚರ್ಚೆ ಮಾಡುತ್ತಿದ್ದರು. ನಮ್ಮ ವಿದ್ಯಾರ್ಥಿಗಳು ದೊಡ್ಡದನ್ನು ಕಲಿಯಲು, ಸಾಧಿಸಲು ಸಾವಿರಾರು ಮೈಲಿ ವಲಸೆ ಹೋಗಬೇಕಾದ ಅನಿವಾರ್ಯ ಇನ್ನೂ ಏಕೆ ಇದೆ? ಏಕೆ ನಾವು ತಾಂತ್ರಿಕ ಸಾಮರ್ಥ್ಯವನ್ನು ವೃದ್ಧಿಸಿಕೊಂಡು ಶೈಕ್ಷಣಿಕ ವಲಸೆ, ಪ್ರತಿಭಾ ಪಲಾಯಣ ತಡೆಯಬಾರದು? ಎಂಬ ಬಗ್ಗೆ ಹೆಚ್ಚು ಚಿಂತನೆ ನಡೆಸುತ್ತಿದ್ದರು’ ಎಂದು ಮಹೇಶ್ವರಯ್ಯ ಸ್ಮರಿಸಿದರು.

‘ವರ್ಷಕ್ಕೆ ಒಮ್ಮೆಯಾದರೂ ದೇಶದ ಎಲ್ಲ 700ಕ್ಕೂ ವಿಶ್ವವಿದ್ಯಾಲಯಗಳ ಕುಲಪತಿಗಳನ್ನು ಕರೆಸಿಕೊಂಡು ಚರ್ಚೆ ನಡೆಸುತ್ತಿದ್ದರು. ಕಳೆದ ನಾಲ್ಕು ವರ್ಷಗಳಿಂದ ನಾನು ಹಲವು ಬಾರಿ ಅವರೊಂದಿಗೆ ಚರ್ಚೆಯಲ್ಲಿ ಪಾಲ್ಗೊಂಡಿದ್ದೇನೆ. ಎಷ್ಟೋ ಸಾರಿ ರಾತ್ರಿ 10ರ ನಂತರವೂ ಅವರು ಬೇಸರವಿಲ್ಲದೇ ಕುಲಪತಿಗಳು ಹೇಳುವ ಸಲಹೆಗಳನ್ನು ಕೇಳಿ, ನೋಟ್‌ ಮಾಡಿಕೊಳ್ಳುತ್ತಿದ್ದರು. ಅವುಗಳ ಬಗ್ಗೆ ಕೈಗೊಂಡ ಕ್ರಮಗಳ ಬಗ್ಗೆಯೂ ಮತ್ತೆ ನಮಗೆ ಪತ್ರ ರವಾಣಿಸುತ್ತಿದ್ದರು. ಇಷ್ಟೊಂದು ಸರಳತನ ಇರಲು ಹೇಗೆ ಸಾಧ್ಯ? ಎಂಬ ಸಂದೇಹ ಕಾಡುವಂತಿತ್ತು ಅವರ ಜೀವನಕ್ರಮ’ ಎಂದು ಮಾಹಿತಿ ನೀಡಿದರು.

‘ಸಂಶೋಧನೆಗಾಗಿ ದೊಡ್ಡ ದೊಡ್ಡ ಕಟ್ಟಡ ಕಟ್ಟಿ ಸಂಶೋಧಕನ್ನು ಕೂಡಿ ಹಾಕುವ ಬದಲು; ಡಿಜಿಟಲ್‌ ಸಂವಹನ ಸಾಧ್ಯತೆಗಳನ್ನು ಪೂರ್ಣವಾಗಿ ಬಳಸಿಕೊಳ್ಳಬೇಕು. ನಮ್ಮ ದೇಶ ಡಿಜಿಟಲ್‌ ಇಂಡಿಯಾ ಆಗಬೇಕು’ ಎಂಬ ಮಾತನ್ನು ಅವರು ಬಹಳ ವರ್ಷಳ ಹಿಂದಿನಿಂದಲೂ ಹೇಳುತ್ತಿದ್ದರು. ‘ಪ್ರೆಸಿಡೆಂಟ್ ಇನ್ನೋವೇಷನ್‌ ಅವಾರ್ಡ್‌’ ಅನ್ನು ಅವರೇ ಆರಂಭಿಸಿದರು’ ಎಂದೂ ಹೇಳಿದರು.

ಇಎಸ್‌ಐ ಕಟ್ಟಡಕ್ಕೂ ಅಡಿಗಲ್ಲು

ಕಲಬುರ್ಗಿ:2010ರ ಮೇ 29ರಂದು ಕಲಬುರ್ಗಿಗೆ ಬಂದಿದ್ದ ಪ್ರಣವ್‌ ಮುಖರ್ಜಿ ಅವರು ₹ 1200 ಕೋಟಿ ವೆಚ್ಚದ ಇಎಸ್‌ಐ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜು ಕಟ್ಟಡಕ್ಕೆ ಭೂಮಿಪೂಜೆ ಸಲ್ಲಿಸಿದ್ದರು. ಆಗ ಮಲ್ಲಿಕಾರ್ಜುನ ಖರ್ಗೆ ಅವರುಕೇಂದ್ರದ ಕಾರ್ಮಿಕ ಸಚಿವರಾಗಿದ್ದು,‌ ಮುಖರ್ಜಿ ಅವರು ಹಣಕಾಸು ಸಚಿವರಾಗಿದ್ದರು.

ಅಸಂಘಟಿತ ಕಾರ್ಮಿಕರಿಗೆ ಅನುಕೂಲವಾಗುವ ರಾಷ್ಟ್ರೀಯ ಭದ್ರತಾ ನಿಧಿಯನ್ನು ಸ್ಥಾಪಿಸಿ ಸಾವಿರ ಕೋಟಿ ರೂಪಾಯಿ ಘೋಷಣೆ ಕುಡ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.