
ಚಿತ್ತಾಪುರ: ‘ಚಿನ್ನಪ್ಪರೆಡ್ಡಿ ಆಯೋಗವು ನೀಡಿದ ವರದಿಯಲ್ಲಿ ಈಡಿಗ ಸಮುದಾಯ ರಾಜ್ಯದ 5ನೇ ಅಥವಾ 5ನೇ ಸ್ಥಾನದಲ್ಲಿರುವ ದೊಡ್ಡ ಸಮುದಾಯ. ಅಂಥ ಸಮುದಾಯವು ಸೌಲಭ್ಯಕ್ಕಾಗಿ ಸ್ವಾಮೀಜಿ ನೇತೃತ್ವದಲ್ಲಿ ರಸ್ತೆಗಿಳಿದು ಪಾದಯಾತ್ರೆ ನಡೆಸುವ ಪರಿಸ್ಥಿತಿ ಎದುರಾಗಿದೆ’ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಕಳವಳ ವ್ಯಕ್ತಪಡಿಸಿದರು.
ಈಡಿಗ, ಬಿಲ್ಲವ, ನಾಮಧಾರಿ, ದೀವರು, ತೀಯ ಸೇರಿದಂತೆ 26 ಪಂಗಡಗಳು ಹೊಂದಿರುವ ಸಮಾಜದ 18 ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಂಗಳವಾರ ಆರಂಭಿಸಿದ ಕರದಾಳನಿಂದ ಬೆಂಗಳೂರು ತನಕದ ಪಾದಯಾತ್ರೆ ಅಂಗವಾಗಿ ಪಟ್ಟಣದ ಬಜಾಜ್ ಕಲ್ಯಾಣ ಮಂಟಪದಲ್ಲಿ ನಡೆದ ಬಹಿರಂಗ ಜನಜಾಗೃತಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
‘ಈಡಿಗ ಸಮುದಾಯವು ಹೋರಾಟದ ಹಾದಿ ತುಳಿಯುವ ತನಕ ಮುಖ್ಯಮಂತ್ರಿಗಳು ಯಾಕೆ ಕಾಯಬೇಕು? ತಕ್ಷಣ ಸ್ವಾಮೀಜಿ ಅವರೊಂದಿಗೆ ಚರ್ಚಿಸಿ ಬೇಡಿಕೆಗೆ ಸ್ಪಂದಿಸಬೇಕು’ ಎಂದು ಆಗ್ರಹಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಶ್ರೀನಾಥ ದಣಿ ಮಾತನಾಡಿ, ‘ಮಹಾರಾಷ್ಟ್ರ ಮತ್ತು ತೆಲಂಗಾಣ ಮಾದರಿಯಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಈಡಿಗರ ಕುಲಕಸುಬು ಸೇಂದಿ ಮಾರಾಟಕ್ಕೆ ಅವಕಾಶ ನೀಡಬೇಕು. ಪಾದಯಾತ್ರೆಯು ಗಂಗಾವತಿಗೆ ತಲುಪುವವರೆಗೆ ಸರ್ಕಾರದಿಂದ ಒಳ್ಳೆಯ ಸಂದೇಶ ಬರಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಾದಯಾತ್ರೆ ನೇತೃತ್ವ ವಹಿಸಿರುವ ಪ್ರಣವಾನಂದ ಸ್ವಾಮೀಜಿ ಮಾತನಾಡಿ, ‘ನಮ್ಮ ಪಾದಯಾತ್ರೆ ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ. ಸಮುದಾಯಕ್ಕೆ ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲದು. ಪಾದಯಾತ್ರೆಯಲ್ಲಿ ಅನಾರೋಗ್ಯ ಕಾಡಿದರೂ ನನಗೆ ಔಷಧ ನೀಡಬಾರದು. ಆಸ್ಪತ್ರೆಗೆ ಕರೆದೊಯ್ಯಬಾರದು. ಸಮುದಾಯಕ್ಕಾಗಿ ಜೀವನ ತ್ಯಾಗಕ್ಕೂ ಸಿದ್ಧ’ ಎಂದು ಪ್ರಕಟಿಸಿದರು.
‘ಅಹಿಂದ ಹೆಸರಲ್ಲಿ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಸರ್ಕಾರದಲ್ಲಿ ಈಡಿಗರನ್ನು ರಾಜಕೀಯವಾಗಿ ಮುಗಿಸುವ ಹುನ್ನಾರ ನಡೆಯುತ್ತಿದೆ. ಸರ್ಕಾರಕ್ಕೆ ಹೃದಯವಿದ್ದರೆ ಈಡಿಗರ ಬೇಡಿಕೆ ಈಡೇರಿಸಲಿ’ ಎಂದರು.
ಸಾನ್ನಿಧ್ಯ ವಹಿಸಿದ್ದ ಚಿತ್ರದುರ್ಗದ ಛಲವಾದಿ ಜಗದ್ಗುರು ಪೀಠದ ಬಸವನಾಗಿದೇವ ಶರಣರು, ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲರಾಜ ಗುತ್ತೆದಾರ ಮಾತನಾಡಿದರು.
ಭಗೀರಥಾನಂದಪುರಿ ಸ್ವಾಮೀಜಿ, ದೊಡ್ಡೇಂದ್ರ ಸ್ವಾಮೀಜಿ, ಗುರುರಾಜೇಂದ್ರ ಶಿವಯೋಗಿ, ಪಾದಯಾತ್ರೆಯ ಮುಖ್ಯ ಸಂಚಾಲಕ ಲಕ್ಷ್ಮಿನರಸಯ್ಯ ತುಮಕೂರು, ಮುಖಂಡರಾದ ನಿತಿನ್ ಗುತ್ತೆದಾರ್, ವೆಂಕಟೇಶ ಗುಂಡಾನೂರ, ಸುರೇಶ ಗುತ್ತೇದಾರ್, ನಾಗರಾಜ ನಾಯಕ ಸಾಗರ, ಸಂತೋಷಕುಮಾರ, ನರಸಯ್ಯಗೌಡ, ಪೂರ್ಣಿಮಾ, ವನಜಾ, ರವೀಂದ್ರ ಸಜ್ಜನಶೆಟ್ಟಿ, ಬಸವರಾಜ ಬೆಣ್ಣೂರಕರ್, ಅಯ್ಯಪ್ಪ ರಾಮತೀರ್ಥ ಸೇರಿದಂತೆ ಅನೇಕರಿದ್ದರು.
ಸ್ವಾಮೀಜಿಯ ಪಾದಯಾತ್ರೆಗೆ ಯಾರಾದರೂ ಅಡ್ಡಿಪಡಿಸಿದರೆ ರಾಜಕೀಯ ಬದಿಗಿಟ್ಟು ಸಮಾಜಕ್ಕಾಗಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವೆಬಾಲರಾಜ್ ಗುತ್ತೇದಾರ್ ಜೆಡಿಎಸ್ ಜಿಲ್ಲಾಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.