ಸಾಂದರ್ಭಿಕ ಚಿತ್ರ
ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳಲ್ಲಿ ಕಳೆದು ಎರಡು ವರ್ಷಗಳ ಅವಧಿಯಲ್ಲಿ ತಾಯ್ತನದ ನಿರೀಕ್ಷೆಯಲ್ಲಿದ್ದ 289 ಗರ್ಭಿಣಿಯರು ಅಸುನೀಗಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದ ಹೆಲ್ತ್ ಹಬ್ ಜಿಲ್ಲೆಯಾಗುತ್ತಿರುವ ಕಲಬುರಗಿಯಲ್ಲೇ ಗರ್ಭಿಣಿಯರ ಸಾವಿನ ಪ್ರಮಾಣ ಅತ್ಯಧಿಕವಾಗಿದೆ. ಜಿಲ್ಲೆಯಲ್ಲಿ 66 ಗರ್ಭಿಣಿಯರು ಮರಣ ಹೊಂದಿದ್ದಾರೆ. ಕಲಬುರಗಿಯಲ್ಲಿ 23, ಚಿಂಚೋಳಿ ಮತ್ತು ಚಿತ್ತಾಪುರದಲ್ಲಿ ತಲಾ 9, ಜೇವರ್ಗಿಯಲ್ಲಿ 8, ಆಳಂದದಲ್ಲಿ 7 ಹಾಗೂ ಸೇಡಂನಲ್ಲಿ ನಾಲ್ವರು ಗರ್ಭಿಣಿಯರು ಸಾವನ್ನಪ್ಪಿದ್ದಾರೆ ಎಂಬುದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ತಿಳಿದುಬಂದಿದೆ.
ಬಳ್ಳಾರಿಯಲ್ಲಿ 25, ಸಿರುಗುಪ್ಪದಲ್ಲಿ 11 ಮತ್ತು ಸಂಡೂರಿನಲ್ಲಿ ಐವರು ಸೇರಿ ಒಟ್ಟು 41 ಮಂದಿ; ಬೀದರ್ ನಗರದಲ್ಲಿ 9, ಬಸವಕಲ್ಯಾಣದಲ್ಲಿ 9, ಭಾಲ್ಕಿ ಮತ್ತು ಹುಮನಾಬಾದ್‌ನಲ್ಲಿ ತಲಾ 7 ಹಾಗೂ ಔರಾದ್‌ನಲ್ಲಿ ಇಬ್ಬರು ಸೇರಿ ಒಟ್ಟು 34 ಗರ್ಭಿಣಿಯರು ಅಸುನೀಗಿದ್ದಾರೆ.
ರಾಯಚೂರಲ್ಲಿ 14, ಮಾನ್ವಿಯಲ್ಲಿ 12, ದೇವದುರ್ಗದಲ್ಲಿ 8, ಸಿಂಧನೂರಲ್ಲಿ 7 ಹಾಗೂ ಲಿಂಗಸೂಗುರಲ್ಲಿ 6 ಸೇರಿ ಇಡೀ ಜಿಲ್ಲೆಯಲ್ಲಿ ಒಟ್ಟು 47 ಮಂದಿ ಮೃತರಾಗಿದ್ದಾರೆ. ವಿಜಯನಗರದ ಹರಪನಹಳ್ಳಿಯಲ್ಲಿ 16, ಹೊಸಪೇಟೆಯಲ್ಲಿ 10, ಕೂಡ್ಲಿಗಿಯಲ್ಲಿ 7, ಹಡಗಲಿಯಲ್ಲಿ 5 ಹಾಗೂ ಹಗರಿಬೊಮ್ಮನಹಳ್ಳಿಯಲ್ಲಿ ಒಬ್ಬರು ಸೇರಿ ಒಟ್ಟು 39 ಗರ್ಭಿಣಿಯರು ಜೀವ ಕಳೆದುಕೊಂಡಿದ್ದಾರೆ.
ಕಲ್ಯಾಣ ಕರ್ನಾಟಕದಲ್ಲಿ ಅತಿ ಕಡಿಮೆ ಸಾವು ಕೊಪ್ಪಳದಲ್ಲಿ ಸಂಭವಿಸಿದೆ. ಕೊಪ್ಪಳ ನಗರ ಮತ್ತು ಗಂಗಾವತಿಯಲ್ಲಿ ತಲಾ 10, ಯಲಬುರ್ಗಾ 7 ಹಾಗೂ ಕುಷ್ಠಗಿಯಲ್ಲಿ ಒಬ್ಬ ಗರ್ಭಿಣಿ ಸೇರಿ 28 ಮಂದಿ ಮೃತರಾಗಿದ್ದಾರೆ. ಯಾದಗಿರಿಯಲ್ಲಿ 14, ಶಹಾಪುರದಲ್ಲಿ 13 ಹಾಗೂ ಸುರಪುರ 7 ಗರ್ಭಿಣಿಯರು ಸೇರಿ 34 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಪ್ರಸವ ಪೂರ್ವ ಹಾಗೂ ಪ್ರಸವ ನಂತರದ ಗರ್ಭಿಣಿಯರ ಸಾವಿಗೆ ಆರೋಗ್ಯ ಇಲಾಖೆಯು ಹಲವು ಕಾರಣಗಳನ್ನು ಪಟ್ಟಿ ಮಾಡಿದೆ. ಅವುಗಳಲ್ಲಿ ಗರ್ಭಾವಸ್ಥೆಯಲ್ಲಿ ಮತ್ತು ಬಾಣಂತನದಲ್ಲಿ ಅಧಿಕ ರಕ್ತದೊತ್ತಡ, ಹೆರಿಗೆ ಸಮಯದಲ್ಲಿ ಅಧಿಕ ರಕ್ತಸ್ರಾವ, ಹೃದಯ ಸಂಬಂಧಿತ ಕಾಯಿಲೆಗಳು, ರಕ್ತ ಹೆಪ್ಪುಗಟ್ಟುವಿಕೆ ಮತ್ತು ಎಂಬಾಲಿಸಮ್, ಗರ್ಭಾವಸ್ಥೆ ಮತ್ತು ಬಾಣಂತನದಲ್ಲಿ ಸೋಂಕುಗಳು, ರಕ್ತ ಹೀನತೆ, ಟಿ.ಬಿ, ನ್ಯುಮೋನಿಯಾ ಸಂಬಂಧಿತ ಕಾಯಿಲೆಗಳು, ಆಮ್ನಿಯೋಟಿಕ್ ದ್ರವ ಎಂಬಾಲಿಸಮ್ (ಎಎಫ್‌ಇ), ಎಂಡೊ ಟಾಕ್ಸಿನ್ ಸಂಬಂಧಿತವಾಗಿಯೂ ಸಾವು ಸಂಭವಿಸುತ್ತಿದೆ ಎಂದಿದೆ.
ಗರ್ಭಿಣಿಯರು ಸಾವನ್ನಪ್ಪಿದಾಗ ಸಾರ್ವಜನಿಕ ವಲಯದಿಂದಲೂ ಒಂದಿಷ್ಟು ಆರೋಪಗಳು ಕೇಳಿಬರುತ್ತವೆ. ಆರೋಗ್ಯ ವ್ಯವಸ್ಥೆಯಲ್ಲಿ ಸುತ್ತಿಕೊಂಡಿರುವ ಅವ್ಯವಸ್ಥೆ ಮತ್ತು ಅಧಿಕಾರಿಗಳ ನಿರ್ಲಕ್ಷ್ಯ, ಸರ್ಕಾರಿ ಆಸ್ಪತ್ರೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೌಲಭ್ಯಗಳ ಕೊರತೆ, ಸಕಾಲದಲ್ಲಿ ಸಿಗದ ಪರಿಣಿತ ವೈದ್ಯರ ಚಿಕಿತ್ಸೆ, ತರಬೇತಿ ರಹಿತ ಶುಶ್ರೂಷಕರು, ಗರ್ಭಿಣಿ ಮತ್ತು ಬಾಣಂತಿಯರಿಗಾಗಿ ಇರುವ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಯೋಜನೆಗಳ ಅಸಮರ್ಪಕ ಅನುಷ್ಠಾನ... ಹೀಗೆ, ಸಾಲು ಸಾಲು ದೂರುಗಳಿವೆ.
‘ಆರೋಗ್ಯ ಆವಿಷ್ಕಾರದಡಿ ಹೆಚ್ಚಿನ ಅನುದಾನ’
‘ಕಲ್ಯಾಣ ಕರ್ನಾಟದ ಪ್ರದೇಶಾಭಿವೃದ್ಧಿ ಮಂಡಳಿಯ ಆರೋಗ್ಯ ಆವಿಷ್ಕಾರ ಯೋಜನೆಯಡಿ ಕಲ್ಯಾಣ ಕರ್ನಾಟಕ ಭಾಗದ ಆರೋಗ್ಯ ಕ್ಷೇತ್ರಕ್ಕೆ ಈ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಅನುದಾನ ಮೀಸಲಿಟ್ಟು ಖರ್ಚು ಮಾಡಲಿದೆ. ಇದರಿಂದ ಆರೋಗ್ಯ ಸೌಕರ್ಯಗಳು ಸುಧಾರಣೆಯಾಗಿ ಗರ್ಭಿಣಿಯರ ಸಾವಿನ ಪ್ರಮಾಣ ತಗ್ಗಲಿದೆ’ ಎಂದು ಮಂಡಳಿ ಅಧ್ಯಕ್ಷ ಡಾ.ಅಜಯಸಿಂಗ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಏ.16ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಲಬುರಗಿಯಲ್ಲಿ ₹ 92 ಕೋಟಿ ವೆಚ್ಚದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ ಚಾಲನೆ ನೀಡುವರು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.