ADVERTISEMENT

ಅರಿಶಿನಕ್ಕೆ ಬಂಪರ್‌ ಬೆಲೆ

ಎರಡು ತಿಂಗಳಲ್ಲೇ ಮೂರು ಪಟ್ಟು ದರ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2023, 5:02 IST
Last Updated 25 ಆಗಸ್ಟ್ 2023, 5:02 IST
ಸಂಸ್ಕರಿಸದ ಅರಿಶಿನ
ಸಂಸ್ಕರಿಸದ ಅರಿಶಿನ   

ಜಗನ್ನಾಥ ಡಿ. ಶೇರಿಕಾರ

ಚಿಂಚೋಳಿ (ಕಲಬುರಗಿ ಜಿಲ್ಲೆ): ಮಾರುಕಟ್ಟೆಯಲ್ಲಿ ಅರಿಶಿನಕ್ಕೆ ಬಂಪರ್‌ ಬೆಲೆ ಬಂದಿದೆ. ಪಕ್ಕದ ಮಹಾರಾಷ್ಟ್ರದ ಸಾಂಗ್ಲಿ ಮಾರುಕಟ್ಟೆಯಲ್ಲಿ ಸಂಸ್ಕರಿಸಿದ ಅರಿಶಿನದ ಬೆಲೆ ಎರಡು ತಿಂಗಳ‌ಲ್ಲಿ ಮೂರುಪಟ್ಟು ಹೆಚ್ಚಾಗಿದ್ದು, ಪ್ರತಿ ಕ್ವಿಂಟಲ್‌ಗೆ ಗರಿಷ್ಠ ₹18 ಸಾವಿರದವರೆಗೂ ಮಾರಾಟವಾಗುತ್ತಿದೆ.

ಜೂನ್‌ ಅಂತ್ಯದಲ್ಲಿ ಚಾಮರಾಜನಗರ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ಗೆ ಗರಿಷ್ಠ ₹6,469ಕ್ಕೆ ಮಾರಾಟವಾಗಿದ್ದ ಅರಿಶಿನದ ಬೆಲೆಯು ಆಗಸ್ಟ್‌ 17ರಂದು ಗರಿಷ್ಠ ₹12,479ಕ್ಕೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಬಳಕೆಗೆ ಸಿದ್ಧವಾದ ಉತ್ಕೃಷ್ಟ ಗುಣಮಟ್ಟದ ಅರಿಶಿನ ಕಡ್ಡಿ ಬೆಂಗಳೂರಿನ ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ ₹11,000ದಿಂದ  ₹ 22,000ಕ್ಕೆ ಏರಿಕೆಯಾಗಿದೆ ಎಂದು ಎಪಿಎಂಸಿ ದಾಖಲೆಗಳು ಹೇಳುತ್ತವೆ.

ADVERTISEMENT

ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 355 ಹೆಕ್ಟೇರ್‌ನಲ್ಲಿ ಅರಿಶಿನ ಬೆಳೆಯಿದ್ದು, ಚಿಂಚೋಳಿ ಮತ್ತು ಆಳಂದ ತಾಲ್ಲೂಕುಗಳಲ್ಲೇ ಹೆಚ್ಚು ಬೆಳೆಯಲಾಗುತ್ತಿದೆ. ಆದರೆ, ಮಾರುಕಟ್ಟೆ ಇಲ್ಲದ ಕಾರಣ ರೈತರು ತಮ್ಮ ಉತ್ಪನ್ನವನ್ನು ಮಾರಲು ತೆಲಂಗಾಣ, ಮಹಾರಾಷ್ಟ್ರದ ದಲ್ಲಾಳಿಗಳನ್ನೇ ಅವಲಂಬಿಸಿದ್ದಾರೆ.

‘ಚಿಂಚೋಳಿ ತಾಲ್ಲೂಕಿನಲ್ಲಿ ದಲ್ಲಾಳಿಗಳು ಕ್ವಿಂಟಲ್‌ಗೆ ₹14 ಸಾವಿರ ದರಕ್ಕೆ ಅರಿಶಿನ ಖರೀದಿಸುತ್ತಿದ್ದಾರೆ. ಮಹಾರಾಷ್ಟ್ರದ ತುಳಜಾಪುರ ಸುತ್ತಲೂ ಬೆಳೆದ ಸೇಲಂ ತಳಿಯ ಉತ್ತಮ ಗುಣಮಟ್ಟದ ಅರಿಶಿನ ಸಾಂಗ್ಲಿ‌ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ಗೆ ಗರಿಷ್ಠ ₹18 ಸಾವಿರಕ್ಕೆ ಮಾರಾಟವಾಗುತ್ತಿದೆ. ಇದು ಕಳೆದ 10 ವರ್ಷಗಳ ಗರಿಷ್ಠ ದರ. ಅಲ್ಲಿ ಎರಡು ತಿಂಗಳ ಹಿಂದೆ ಕ್ವಿಂಟಲ್‌ಗೆ ₹6,000 ಇದ್ದ ಸಂಸ್ಕರಿಸಿದ ಅರಿಶಿನದ ಬೆಲೆ ಈಗ ಮೂರು ಪಟ್ಟು ಹೆಚ್ಚಾಗಿದೆ. ಒಂದೂವರೆ ತಿಂಗಳಿನಿಂದ ದರ ಏರುತ್ತಲೇ ಇದೆ. ಮಾರುಕಟ್ಟೆಯಲ್ಲಿ ಅರಿಶಿನ ಕೊರತೆಯೇ ದರ ಹೆಚ್ಚಳಕ್ಕೆ ಕಾರಣ’ ಎಂದು ಚಿಂಚೋಳಿ ತಾಲ್ಲೂಕಿನ ಕೊಳ್ಳೂರಿನ ಅರಿಶಿನ ಬೆಳೆಗಾರ ಭೀಮರಡ್ಡಿ ಯಂಗಮನೋರ ತಿಳಿಸಿದ್ದಾರೆ.

ಚಿಂಚೋಳಿ ತಾಲ್ಲೂಕಿನಲ್ಲಿ ವಿವಿಧ ತಳಿಯ ಅರಿಶಿನ ಬೆಳೆಯಲಾಗುತ್ತಿದೆ. ಪ್ರತಿ ಎಕರೆಗೆ 25 ಕ್ವಿಂಟಲ್‌ ಸಂಸ್ಕರಿಸಿದ ಅರಿಶಿನ ಇಳುವರಿ ಬರುತ್ತದೆ.

ಸಂಸ್ಕರಿಸಿದ ಅರಶಿಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.