ಕಲಬುರಗಿ: ‘ಮಹಾರಾಷ್ಟ್ರದ ನಾಗಪುರದಿಂದ ಬಿಜೆಪಿ ಸರ್ಕಾರ ನಡೆಯುತ್ತಿದ್ದು, ಬಿಜೆಪಿಗರು ಪ್ರತಿ ಮಾತಿಗೂ ಮುನ್ನ ಅವರ (ಆರ್‌ಎಸ್‌ಎಸ್) ಕೈಕಾಲು ಬೀಳುವುದು ಏಕೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಗಿ ಪ್ರಶ್ನಿಸಿದರು.
ಇಲ್ಲಿ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಆರ್‌ಎಸ್‌ಎಸ್ ಸಾಮಾಜಿಕ ಸಂಘಟನೆ, ರಾಜಕೀಯಕ್ಕೆ ಎಳೆದು ತೆರಬೇಡಿ ಎನ್ನುತ್ತಿದ್ದಾರೆ. ಆರ್‌ಎಸ್‌ಎಸ್ ಸಾಮಾಜಿಕ ಸಂಘಟನೆಯಾಗಿದ್ದರೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗೆ ಅನುಮೋದನೆ ಕೊಡುವುದು ಏಕೆ? ಸಂವಿಧಾನದಲ್ಲಿ ಯಾವ ಪದ ಇರಬೇಕು, ಇರಬೇಡ ಎನ್ನುವುದು ಏಕೆ? ಮಹಾರಾಷ್ಟ್ರದ ಚುನಾವಣೆಯಲ್ಲಿ ನಿಮ್ಮ ಸಂಘಟನೆಗಳು ಬಿಜೆಪಿಪರ ಕೆಲಸ ಮಾಡಿದ್ದು ಏಕೆ’ ಎಂದು ಪ್ರಶ್ನಿಸಿದರು.
‘ಎನ್.ರವಿಕುಮಾರ್, ತಳವಾರ ಸಾಬಣ್ಣ ಅವರ ಹಿನ್ನೆಲೆ ಆರ್‌ಎಸ್‌ಎಸ್ ಅಥವಾ ಬಿಜೆಪಿಯಾ? ಕರಾವಳಿ ಭಾಗದ ಬಹುತೇಕ ಬಿಜೆಪಿಯ ಶಾಸಕರು ಯಾವ ಹಿನ್ನೆಲೆಯಿಂದ ಬಂದವರು? ಬಿಜೆಪಿಯ ಎಷ್ಟು ಮಂದಿ ಮಕ್ಕಳನ್ನು ಶಾಖೆಯಲ್ಲಿ ಪಾಲ್ಗೊಂಡು ಖಾಕಿ ಚಡ್ಡಿ ಧರಿಸಿದ್ದಾರೆ’ ಎಂದು ಕೇಳಿದರು.
‘100 ವರ್ಷಗಳ ಸಂಭ್ರಮ ಆಚರಣೆಯಲ್ಲಿರುವ ಆರ್‌ಎಸ್‌ಎಸ್‌ನವರು ದೇಶದ ಅಭಿವೃದ್ಧಿಗೆ ಸಂಘ ನೀಡಿದ ಕನಿಷ್ಠ 10 ಕೊಡುಗೆಗಳಾದರು ಜನರಿಗೆ ತಿಳಿಸಲಿ. ಆರ್ಥಿಕ ಪ್ರಗತಿ, ದಲಿತರ ಏಳಿಗೆ, ಒಬಿಸಿ, ಮಹಿಳೆಯರ ಸಮಾನತೆಗೆ ಕೊಟ್ಟಿರುವ ಕೊಡುಗೆಯಾದರು ಏನು? 52 ವರ್ಷಗಳು ರಾಷ್ಟ್ರಧ್ವಜ ಏಕೆ ಹಾರಿಸಲಿಲ್ಲ’ ಎಂದರು.
‘ರವಿಕುಮಾರ್, ಮುನಿರತ್ನ, ಪೊಕ್ಸೊ ಪ್ರಕರಣದ ಆರೋಪಿಗಳನ್ನು ಇಟ್ಟುಕೊಂಡಿರುವ ಬಿಜೆಪಿಗರಿಗೆ ನಾಚಿಕೆ ಇದೆಯಾ? ಅವರೆಲ್ಲಾ ಆರ್‌ಎಸ್‌ಎಸ್ ಕೈಗೊಂಬೆಗಳು. ಚಾಣಕ್ಯ ವಿಶ್ವವಿದ್ಯಾಲಯಕ್ಕೆ ನೀಡಿದ ಜಾಗದ ಬಗ್ಗೆ ಮುಖ್ಯಮಂತ್ರಿಗಳು ಪರಿಶೀಲನೆ ಮಾಡುತ್ತಿದ್ದಾರೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.