ಕಲಬುರಗಿ: ಡಾ. ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಭೂ ಒಡೆತನ ಯೋಜನೆಯಡಿಯ ಫಲಾನುಭವಿ ಮಹಿಳೆ ಹೆಸರಿಗೆ ಜಮೀನು ನೋಂದಾಯಿಸಿದೆ ವಂಚಿಸಿದ ಆರೋಪದಡಿ ಜಮೀನು ಮಾಲೀಕನ ವಿರುದ್ಧ ಪ್ರಕರಣ ದಾಖಲಾಗಿದೆ.
ನಿಗಮದ ಜಿಲ್ಲಾ ವ್ಯವಸ್ಥಾಪಕ ಮರಲಿಂಗ ಹೊನಗುಂಟಿಕರ್ ನೀಡಿದ ದೂರಿನ ಅನ್ವಯ, ಯಡ್ರಾಮಿ ತಾಲ್ಲೂಕಿನ ಮುತ್ತುಕೋಡ ಗ್ರಾಮದ ರಾಜಶೇಖರ ಭೀಮರಾಯ ವಿರುದ್ಧ ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜಶೇಖರ ಅವರು ತಮ್ಮ ಹೆಸರಿನ 2.03 ಎಕರೆ ಜಮೀನು ಅನ್ನು ಭೂ ಒಡೆತನದಡಿ ಮಾರುವುದಾಗಿ ಒಪ್ಪಿಗೆ ಪತ್ರ ಬರೆದುಕೊಟ್ಟಿದ್ದರು. ರಾಜಶೇಖರ ಅವರಿಗೆ ಆರ್‌ಟಿಜಿಎಸ್ ಮೂಲಕ ₹6,55,700 ಪಾವತಿಸಲಾಗಿತ್ತು. ಬಳಿಕ ಫಲಾನುಭವಿ ಆರತಿ ನಿಂಗು ಅವರ ಹೆಸರಿಗೆ ಜಮೀನು ನೋಂದಣಿ ಮಾಡುವಂತೆ ಸೂಚಿಸಲಾಗಿತ್ತು. ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿದ ರಾಜಶೇಖರ, ಆರತಿ ಅವರ ಮತದಾರರ ಗುರುತಿನ ಚೀಟಿ ದುರುಪಯೋಗ ಮಾಡಿಕೊಂಡು, ಜಮೀನು ಅನ್ನು ತನ್ನ ಹೆಸರಿಗೆ ಮರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಚಿನ್ನಾಭರಣ ಕಳವು: ಕೇಂದ್ರ ಬಸ್ ನಿಲ್ದಾಣದಲ್ಲಿ ಚಿತ್ತಾಪುರಕ್ಕೆ ತೆರಳುತ್ತಿದ್ದ ಬಸ್ ಹತ್ತುವಾಗ ಶ್ರೀದೇವಿ ನೀಲಕಂಠ ಅವರ ಬ್ಯಾಗ್‌ನಲ್ಲಿದ್ದ ₹1.45 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಕಳ್ಳರು ಕದ್ದೊಯ್ದಿದ್ದಾರೆ. ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಟಿಎಂ ಯಂತ್ರ ಒಡೆದು ಕಳವು ಯತ್ನ: ಜೇವರ್ಗಿ ಪಟ್ಟಣದ ದೈಫುಲ್ಲೆ ಕಾಂಪ್ಲೆಕ್ಸ್‌ನಲ್ಲಿನ ಎಸ್‌ಬಿಐಗೆ ಸೇರಿದ ಎಟಿಎಂ ಯಂತ್ರ ಒಡೆದು ಹಣ ಕದಿಯಲು ಯತ್ನಿಸಿದ ಘಟನೆ ನಡೆದಿದೆ. ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
19 ಸಾವಿರ ಲೀಟರ್ ಡೀಸೆಲ್ ಸೋರಿಕೆ: ಜೇವರ್ಗಿ ಠಾಣೆ ವ್ಯಾಪ್ತಿಯ ಚಿಗರಳ್ಳಿ ಕ್ರಾಸ್ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಡೀಸೆಲ್ ಲಾರಿ ಉರುಳಿ ಬಿದ್ದು ₹17 ಲಕ್ಷ ಮೌಲ್ಯದ 19 ಸಾವಿರ ಲೀಟರ್ ಡೀಸೆಲ್ ಸೋರಿಕೆಯಾಗಿದೆ.
ಅಲಕ್ಷ್ಯತನ ಹಾಗೂ ವೇಗವಾಗಿ ಲಾರಿ ಚಲಾಯಿಸಿದ ಆರೋಪದಲ್ಲಿ ಚಾಲಕ ಚಂದ್ರಕಾಂತ ವಿರುದ್ಧ ಪ್ರಕರಣ ದಾಖಲಾಗಿದೆ.
ದಂಪತಿಗೆ ₹7.70 ಲಕ್ಷ ವಂಚನೆ: ಜೆರಾಕ್ಸ್ ಅಂಗಡಿಯ ಮಾಲೀಕರೊಬ್ಬರು ದಂಪತಿಯ ಗಮನ ಬೇರೆಡೆ ಸೆಳೆದು ಅವರ ಮೊಬೈಲ್‌ನಿಂದ ₹7.70 ಲಕ್ಷ ವರ್ಗಾಯಿಸಿಕೊಂಡ ಆರೋಪದಡಿ ಸೈಬರ್, ಆರ್ಥಿಕ ಮತ್ತು ಮಾದಕವಸ್ತು ತಡೆ (ಸೆನ್) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರ್ಗಿ ತಾಲ್ಲೂಕಿನ ಮಲ್ಲಣ್ಣಗೌಡ ಪಾಟೀಲ ಮತ್ತು ಶರಣಮ್ಮ ಪಾಟೀಲ ಹಣ ಕಳೆದುಕೊಂಡ ಸಂತ್ರಸ್ತರು. ಗೋವಾ ಹೋಟೆಲ್ ಸಮೀಪದ ಭಾಗ್ಯವಂತಿ ಜೆರಾಕ್ಸ್ ಅಂಗಡಿ ಮಾಲೀಕ ಶರಣು ಪಾಟೀಲ ವಿರುದ್ಧ ದೂರು ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.