ADVERTISEMENT

ಅ‍ಪ‍್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಖಂಡನೆ

ಪ್ರಬುದ್ಧ ಭಾರತ ಸಂಘರ್ಷ ಸಮಿತಿ, ರಿಪಬ್ಲಿಕನ್ ಯೂತ್ ಫೆಡರೇಶನ್‌ನಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2022, 16:47 IST
Last Updated 3 ಸೆಪ್ಟೆಂಬರ್ 2022, 16:47 IST
ಕಲಬುರಗಿ ಜಗತ್‌ ವೃತ್ತದ ಬಳಿ ಪ್ರಬುದ್ಧ ಭಾರತ ಸಂಘರ್ಷ ಸಮಿತಿ, ದಲಿತ ಸಂಘರ್ಷ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು–ಪ್ರಜಾವಾಣಿ ಚಿತ್ರ
ಕಲಬುರಗಿ ಜಗತ್‌ ವೃತ್ತದ ಬಳಿ ಪ್ರಬುದ್ಧ ಭಾರತ ಸಂಘರ್ಷ ಸಮಿತಿ, ದಲಿತ ಸಂಘರ್ಷ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು–ಪ್ರಜಾವಾಣಿ ಚಿತ್ರ   

ಕಲಬುರಗಿ: ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶರಣರು ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ಹಗರಣದ ಸಮಗ್ರ ತನಿಖೆ ಹಾಗೂ ವಿಚಾರಣೆ ನ್ಯಾಯಯುತವಾಗಿ ನಡೆಸಲು ಪ್ರಕರಣವನ್ನು ಹೈಕೋರ್ಟ್‌ಗೆ ವರ್ಗಾಯಿಸಬೇಕು ಎಂದು ಒತ್ತಾಯಿಸಿ ಪ್ರಬುದ್ಧ ಭಾರತ ಸಂಘರ್ಷ ಸಮಿತಿ, ರಿಪಬ್ಲಿಕನ್ ಯೂತ್ ಫೆಡರೇಶನ್, ದಲಿತ ಸಂಘರ್ಷ ಸಮಿತಿ ಹಾಗೂ ಭಾರತೀಯ ವಿದ್ಯಾರ್ಥಿ ಸಂಘಟನೆಗಳ ಕಾರ್ಯಕರ್ತರು ಶನಿವಾರ ಜಗತ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಚಿತ್ರದುರ್ಗದ ಮುರುಘಾ ಮಠದ ಪೀಠಾಧಿಕಾರಿ ಮತ್ತು ಅವರ ಸಹಚರರು ತಮ್ಮದೇ ವಸತಿ ನಿಲಯದ ಅಪ್ರಾಪ್ತ ಹೆಣ್ಣುಮಕ್ಕಳನ್ನು ನಿರಂತರವಾಗಿ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡ ಪ್ರಕರಣವು ಅತ್ಯಂತ ಅಮಾನವೀಯ ಮತ್ತು ಕ್ರೂರವಾಗಿದ್ದು, ಅದು ನಾಗರಿಕ ಸಮಾಜವನ್ನು ಆಘಾತಕ್ಕೀಡುಮಾಡಿದೆ. ಆರೋಪಿತರ ಮೇಲೆ ಪೋಕ್ಸೊ ಮತ್ತು ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆಗಳನ್ನು ಹಾಕಲಾಗಿದ್ದರೂ ಆರು ದಿನಗಳಾದ ಬಳಿಕ ಬಂಧಿಸಿದ್ದು ಸರ್ಕಾರಿ ವ್ಯವಸ್ಥೆಯ ಲೋಪವನ್ನು ಎತ್ತಿ ಹಿಡಿಯುವಂತದ್ದಾಗಿದೆ. ಜೊತೆಗೆ ಪ್ರಕರಣದ ಪ್ರಮುಖ ಆರೋಪಿಯನ್ನು ತಮ್ಮ ವಾಸಸ್ಥಳ ಬಿಟ್ಟು ಇತರ ಜಿಲ್ಲೆಗಳ ಅಜ್ಞಾತ ಸ್ಥಳಗಳಲ್ಲಿ ಅಡ್ಡಾಡಲು ಬಿಟ್ಟಿದ್ದು ಮತ್ತು ಸಾವಿರಾರು ಭಕ್ತರೊಂದಿಗೆ ನಿರಂತರವಾಗಿ ಸಭೆ, ಸಂಧಾನ ಮಾತುಕತೆಗಳನ್ನು, ಬಹಿರಂಗ ಭಾಷಣಗಳನ್ನು ನಡೆಸಲು ಬಿಟ್ಟಿದ್ದು ಸ್ಪಷ್ಟವಾಗಿ ಕಾನೂನಿನ ಉಲ್ಲಂಘನೆಯಾಗಿದೆ. ಆರೋಪಿಗಳು ಬೆಂಬಲಿಗರೊಂದಿಗೆ ಮಠದಲ್ಲಿ ಇರುವ ಸಂದರ್ಭದಲ್ಲಿಯೇ ಸಂತ್ರಸ್ತ ಬಾಲೆಯರನ್ನು ಅಲ್ಲಿಗೆ ಕರೆದೊಯ್ದು ಸ್ಥಳ ಮಹಜರು ನಡೆಸಿದ್ದು ಅಕ್ಷಮ್ಯ ಮತ್ತು ಪೋಕ್ಸೊ ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು ಪ್ರತಿಭಟನಾಕಾರರು ಟೀಕಿಸಿದರು.

‘ಇದೆಲ್ಲ ಘಟನೆಗಳು ಅಸಹಾಯಕ ಸ್ಥಿತಿಯಲ್ಲಿರುವ ಸಂತ್ರಸ್ತ ಬಾಲಕಿಯರಿಗೆ ಬೆಂಬಲವಾಗಿ ನಿಲ್ಲಬೇಕಾದ ಸರ್ಕಾರಿ ವ್ಯವಸ್ಥೆಯು ಆರೋಪಿಗಳಿಗೆ ಬೆಂಬಲವಾಗಿ ನಿಂತಿರುವುದರ ಸ್ಪಷ್ಟ ಸೂಚನೆಯಾಗಿದೆ’ ಎಂದು ಮುಖಂಡ ಸಂತೋಷ ಮೇಲ್ಮನಿ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಪ್ರಬುದ್ಧ ಭಾರತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕಿ ಅಶ್ವಿನಿ ಮದನಕರ ಮಾತನಾಡಿ, ‘ಆರೋಪಿ ಪ್ರಭಾವಶಾಲಿ ಆಗಿರುವುದರಿಂದ ಇಷ್ಟು ದಿನ ಇರದ ಹತ್ತು ಹಲವು ರೋಗಗಳ ನಾಟಕ ಪ್ರಾರಂಭವಾಗಿದೆ. ಅದರಿಂದ ವಿಚಾರಣೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆ ಹೆಚ್ಚಿರುವುದರಿಂದ, ಪೀಠಾಧಿಕಾರಿ ಮತ್ತಿತರರ ತನಿಖೆ ಹಾಗೂ ವಿಚಾರಣೆಯು ಸ್ಥಳೀಯ ಪೊಲೀಸ್ ವ್ಯಾಪ್ತಿಯಲ್ಲಿ ನಡೆಯದೇ ನ್ಯಾಯಾಂಗದ ಮುಂದೆಯೇ ನಡೆಯಬೇಕು. ಇದಕ್ಕಾಗಿ ಪ್ರತ್ಯೇಕ ವಿಶೇಷ ತನಿಖಾ ಸಮಿತಿ ರಚನೆ ಮಾಡಬೇಕು. ವಿಚಾರಣೆ ಮತ್ತು ನ್ಯಾಯದಾನ ಪ್ರಕ್ರಿಯೆ ಕಡ್ಡಾಯವಾಗಿ ಒಂದು ವಾರದೊಳಗೆ ಮುಗಿಯುವಂತೆ ಕ್ರಮ ವಹಿಸುವಂತೆ ಒತ್ತಾಯಿಸಬೇಕು ಮತ್ತು ಎಲ್ಲ ಸಂತ್ರಸ್ತ ಬಾಲೆಯರು ಮತ್ತು ಕುಟುಂಬಕ್ಕೆ ಸೂಕ್ತ ಭದ್ರತೆ ಮತ್ತು ತಕ್ಷಣದ ಪರಿಹಾರ ಒದಗಿಸಬೇಕು’ ಎಂದರು.

ಪ್ರತಿಭಟನೆಯಲ್ಲಿ ಬಾಬು ಎಸ್, ಹಣಮಂತ ಇಟಗಿ, ಅರ್ಜುನ ಭದ್ರೆ,ಸುನೀಲ ಮಾನಪಡೆ, ರಮೇಶ ರಾಗಿ, ಧರ್ಮಣ್ಣ ಕೋನೆಕರ್, ಅಕ್ಷತಾ ನೆಲ್ಲೂರ, ಪೂಜಾ ಸಿಂಗೆ, ಸೋನುಬಾಯಿ, ಸವಿತಾ, ಭಾಗಮ್ಮ, ರೇಖಾ, ಪಂಡಿತ, ದಿಲೀಪ್ ಕಾಯಂಕರ್, ಶಿವಶರಣ, ರವಿ ಡೋಣಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.