ADVERTISEMENT

ಸತೀಶ ಜಾರಕಿಹೊಳಿ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ

ಹಿಂದೂ ಪದ ಹೇಳಿಕೆ ವಿವಾದ; ಜಿಲ್ಲಾ ಬಿಜೆಪಿ ಘಟಕದಿಂದ ಪ್ರತಿಭಟನೆ, ಆಕ್ರೋಶ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2022, 12:46 IST
Last Updated 9 ನವೆಂಬರ್ 2022, 12:46 IST
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ಹಿಂದೂ ಪದ ಕುರಿತ ಹೇಳಿಕೆ ವಿರೋಧಿಸಿ ಕಲಬುರಗಿಯ ಎಸ್‌ವಿಪಿ ವೃತ್ತದಲ್ಲಿ ಬುಧವಾರ ಬಿಜೆಪಿ ಜಿಲ್ಲಾ ಮುಖಂಡರು ಪ್ರತಿಭಟನೆ ನಡೆಸಿದರು
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ಹಿಂದೂ ಪದ ಕುರಿತ ಹೇಳಿಕೆ ವಿರೋಧಿಸಿ ಕಲಬುರಗಿಯ ಎಸ್‌ವಿಪಿ ವೃತ್ತದಲ್ಲಿ ಬುಧವಾರ ಬಿಜೆಪಿ ಜಿಲ್ಲಾ ಮುಖಂಡರು ಪ್ರತಿಭಟನೆ ನಡೆಸಿದರು   

ಕಲಬುರಗಿ: ಹಿಂದೂ ಪದ ಕುರಿತು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ಹೇಳಿಕೆ ಖಂಡಿಸಿ ಬಿಜೆಪಿ ಜಿಲ್ಲಾ ಮುಖಂಡರು, ಕಾರ್ಯಕರ್ತರು ನಗರದ ಎಸ್‌ವಿಪಿ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ ಮಾತನಾಡಿ, ‘ಮತ ಬ್ಯಾಂಕ್‌ ರಾಜಕಾರಣಕ್ಕೆ ಕಾಂಗ್ರೆಸ್ ಮುಖಂಡರು ಈ ರೀತಿಯ ಹಿಂದೂ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ. ಸತೀಶ ಜಾರಕಿಹೊಳಿ ಅವರ ತಲೆದಂಡವಾಗಬೇಕು. ಅವರನ್ನು ಕಾಂಗ್ರೆಸ್‌ನಿಂದ ಉಚ್ಛಾಟಿಸಬೇಕು. ಈ ಹೇಳಿಕೆಯ ಹಿಂದೆ ಕಾಂಗ್ರೆಸ್ ಮುಖಂಡರ ಕೈವಾಡವಿದ್ದು, ಕಾಂಗ್ರೆಸ್‌ ನಾಯಕರು ಕೂಡ ರಾಜ್ಯದ ಜನರ ಕ್ಷಮೆಯಾಚಿಸಬೇಕು’ ಎಂದರು.

ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ ಮಾತನಾಡಿ, ‘ಸತೀಶ ಜಾರಕಿಹೊಳಿ ಹಿಂದೂ ವಿರೋಧಿ ಹೇಳಿಕೆ ನೀಡುವ ಮೂಲಕ ಹಿಂದೂಗಳ ಭಾವನೆಗೆ ಧಕ್ಕೆಯುಂಟು ಮಾಡಿದ್ದಾರೆ. ಹಿಂದೂ ಧರ್ಮದ ಬಗ್ಗೆ ಅಂಬೇಡ್ಕರ್‌ ಹಾಗೂ ಮಹಾತ್ಮ ಗಾಂಧೀಜಿ ಅವರು ಗೌರವ ಹೊಂದಿದ್ದರು. ಸತೀಶ ಅವರು ‘ಅಶ್ಲೀಲ’ ಹೇಳಿಕೆ ಮೂಲಕ ಅಂತಹ ಮಹಾತ್ಮರಿಗೂ ಅಪಮಾನಿಸಿದ್ದಾರೆ. ಕೂಡಲೇ ಅವರು ಬೇಷರತ್ ಕ್ಷಮೆಯಾಚಿಸದಿದ್ದರೆ, ಘೇರಾವ್ ಹಾಕುವ ಮೂಲಕ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು’ ಎಂದರು.

ADVERTISEMENT

ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದಾಜಿ ಪಾಟೀಲ, ‘ಹಿಂದೂ ವಿರೋಧಿ ನಿಲುವು ತೋರಿರುವ ಸತೀಶ ಜಾರಕಿಹೊಳಿ ಅವರು ಹಿಂದೂ ಧರ್ಮಕ್ಕೆ ಮಾತ್ರವಲ್ಲ, ಅವರು ಹುಟ್ಟಿ ಬೆಳೆದ ವಾಲ್ಮೀಕಿ ಸಮುದಾಯಕ್ಕೂ ಅಪಮಾನ ಮಾಡಿದ್ದಾರೆ. ಇಂತಹ ಹೇಳಿಕೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ’ ಎಂದರು.

ಮಹಿಳಾ ಮೋರ್ಚಾ ನಗರ ಉಪಾಧ್ಯಕ್ಷೆ ಮೀರಾ ಚೌಡಾಪುರಕರ್ ಮಾತನಾಡಿದರು. ಸಂಸದ ಉಮೇಶ ಜಾಧವ, ಶಾಸಕ ಬಸವರಾಜ ಮತ್ತಿಮಡು, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ, ಕ್ರೆಡಲ್ ಅಧ್ಯಕ್ಷ ಚಂದು ಪಾಟೀಲ, ಮುಖಂಡರಾದ ಮಹಾದೇವ ಬೆಳಮಗಿ, ಉಮೇಶ ಪಾಟೀಲ, ಅಮರನಾಥ ಪಾಟೀಲ, ಅವಿನಾಶ ಕುಲಕರ್ಣಿ, ಅಂಬಾರಾಯ ಅಷ್ಟಗಿ, ಸುವರ್ಣ ವಾಡೆ, ವಿಜಯಲಕ್ಷ್ಮಿ ಗೊಬ್ಬುರಕರ್, ಅರವಿಂದ ಚವ್ಹಾಣ, ಸಚಿನ ಕಡಗಂಚಿ, ಮಂಜುನಾಥ್ ಕಳಸಕರ್, ಬಸವರಾಜ ಮುನ್ನೋಳ್ಳಿ ಸೇರಿದಂತೆ ಹಲವು ಕಾರ್ಯಕರ್ತರು ಇದ್ದರು.

ಸತೀಶ ಜಾರಕಿಹೊಳಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿ ಕಲಬುರಗಿ ಜಿಲ್ಲಾ ಬಿಜೆಪಿ ಗ್ರಾಮಾಂತರ ಘಟಕದ ಪದಾಧಿಕಾರಿಗಳು ಜಿಲ್ಲಾ ‍ಪೊಲೀಸ್ ವರಿಷ್ಠಾಧಿಕಾರಿಗೆ ಮನವಿಪತ್ರ ಸಲ್ಲಿಸಿದರು.

‘ಸತೀಶ ಜಾರಕಿಹೊಳಿ ಗಡಿಪಾರು ಮಾಡಿ’‌

ಸತೀಶ ಜಾರಕಿಹೊಳಿ ಹೇಳಿಕೆ ಖಂಡಿಸಿ ಹಿಂದೂ ಜಾಗೃತಿ ಸೇನೆ ಮುಖಂಡರು ನಗರದ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಮುಖಂಡ ಎಂ.ಎಸ್.ಪಾಟೀಲ ನರಿಬೋಳ ಮಾತನಾಡಿ, ‘ಹಿಂದೂ ಧರ್ಮಕ್ಕೆ ಅಪಮಾನಿಸಿರುವ ಸತೀಶ ಅವರನ್ನು ರಾಜ್ಯದಿಂದ ಗಡಿಪಾರು ಮಾಡಬೇಕು. ಅವರನ್ನು ಕಾಂಗ್ರೆಸ್‌ನಿಂದ ಉಚ್ಚಾಟಿಸಬೇಕು. ಇಲ್ಲದಿದ್ದರೆ, ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲಾಗುವುದು’ ಎಂದರು.

ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಿಕಾಂತ ಸ್ವಾದಿ ಮಾತನಾಡಿ, ‘ಹಿಂದೂ ಧರ್ಮದಲ್ಲೇ ಹುಟ್ಟಿರುವ ಸತೀಶ ಅವರು ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದು ಸರಿಯಲ್ಲ. ಅವರು ಕಲಬುರಗಿಗೆ ಬಂದಾಗ, ಅವರ ಮುಖಕ್ಕೆ ಮಸಿ ಬಳಿಯುವ ಕೆಲಸ ಮಾಡಬೇಕಾಗುತ್ತದೆ’ ಎಂದರು.

ಸೇನೆಯ ಸಂಘಟನಾ ಕಾರ್ಯದರ್ಶಿ ಸಂತೋಷ ಸೊನವಾಣೆ, ನಗರ ಅಧ್ಯಕ್ಷ ದಶರಥ ಪಿ.ಇಂಗೋಳೆ, ಉಪಾಧ್ಯಕ್ಷ ತನೀಷ ಯು. ಗಾಜರೆ, ಜಿಲ್ಲಾ ಕಾರ್ಯದರ್ಶಿ ಸುನೀಲ ರಾಠೋಡ, ವಿದ್ಯಾರ್ಥಿ ಘಟಕದ ನಗರ ಅಧ್ಯಕ್ಷ ಪವನ ಕದಮ, ಪ್ರಮುಖರಾದ ಸಂಗಮೇಶ ಕಾಳನೂರ, ಆನಂದ ಶಿರ್ಕೆ, ಉದಯ ಸುಲ್ತಾನಪುರ, ಶಂಬು ಶೆಟ್ಟಿ, ರಾಜು ಭೋವಿ ಹಾಗೂ ರಾಜಶೇಖರ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.