ಕಲಬುರಗಿ: ನರೇಗಾ ನೌಕರರಿಗೆ ಆರು ತಿಂಗಳಿಂದ ಬಾಕಿ ಉಳಿಸಿಕೊಂಡಿರುವ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು. ನರೇಗಾದಡಿ ಕೆಲಸ ಮಾಡುತ್ತಿರುವ ಎಲ್ಲ ನೌಕರರಿಗೆ ಸೇವಾ ಭದ್ರತೆ ಒದಗಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ನಗರದ ತಾಲ್ಲೂಕು ಪಂಚಾಯಿತಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ರಾಜ್ಯದಾದ್ಯಂತ 12 ಸಾವಿರಕ್ಕೂ ಅಧಿಕ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದು, ಅವರಿಗೆ ಆರು ತಿಂಗಳಿಂದ ವೇತನ ಇಲ್ಲದೇ ಇರುವುದರಿಂದ ಜೀವನ ನಿರ್ವಹಣೆಗಾಗಿ ಪರದಾಡಬೇಕಿದೆ. ಮನೆ ಬಾಡಿಗೆ, ಮಕ್ಕಳ ಶಾಲಾ ಶುಲ್ಕ, ದಿನಸಿ ಖರೀದಿ, ಸಾಲದ ಕಂತುಗಳನ್ನು ಪಾವತಿಸಲೂ ಪರದಾಡುವಂತಾಗಿದೆ ಎಂದು ಪ್ರತಿಭಟನಕಾರರು ಅಳಲು ತೋಡಿಕೊಂಡರು.
ಹಲವು ವರ್ಷಗಳಿಂದ ನರೇಗಾ ನೌಕರರಾಗಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಸೇವಾ ಭದ್ರತೆ ಒದಗಿಸಬೇಕು. ಇದರಿಂದ ಅಷ್ಟೂ ಕುಟುಂಬಗಳಿಗೆ ಆರ್ಥಿಕ ಭದ್ರತೆ ದೊರಕಿದಂತಾಗುತ್ತದೆ ಎಂದರು.
ಎಲ್ಲಾ ನೌಕರರಿಗೆ ಆರೋಗ್ಯ ವಿಮೆಯನ್ನು ತ್ವರಿತವಾಗಿ ಅನುಷ್ಠಾನಗೊಳಿಸಬೇಕು ಎಂದೂ ಪ್ರತಿಭಟನಕಾರರು ಒತ್ತಾಯಿಸಿದರು.
ಸಂಘದ ಕಲಬುರಗಿ ಜಿಲ್ಲೆಯ ರಾಜ್ಯ ಪ್ರತಿನಿಧಿ ರಾಜ ವಂಟಿ, ಜಿಲ್ಲಾಧ್ಯಕ್ಷ ರವಿಶಂಕರ್ ಲಾವಟೆ, ಕಾರ್ಯದರ್ಶಿ ಸಿದ್ರಾಮ್ ಕೆರೂರ, ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮೊಸಿನ್ ಖಾನ್, ಉಪಾಧ್ಯಕ್ಷ ಸತೀಶ್ ನೀಲೂರ, ಕಾರ್ಯದರ್ಶಿ ಲಕ್ಷ್ಮಿಕಾಂತ, ಸಂಘಟನಾ ಕಾರ್ಯದರ್ಶಿ ಜಗದೀಶ ಮೇಗಪ್ಪಿ, ಉಪಕಾರ್ಯದರ್ಶಿ ಸದ್ದಾಮ್ ಹುಸೇನ್, ಖಜಾಂಚಿ ಎಂ.ಡಿ.ಗೌಸ್ ಹಾಗೂ ಬಿಎಫ್‌ಟಿ, ಕ್ಷೇತ್ರ ಸಹಾಯಕರು ಮತ್ತು ಗ್ರಾಮ ಕಾಯಕ ಮಿತ್ರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.