ADVERTISEMENT

ಯಳಸಂಗಿ: ನೀರಿಗಾಗಿ ಪಂಚಾಯಿತಿಗೆ ಮುತ್ತಿಗೆ

ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆ; ಪಿಡಿಒ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2024, 7:53 IST
Last Updated 13 ಏಪ್ರಿಲ್ 2024, 7:53 IST
ಆಳಂದ ತಾಲ್ಲೂಕಿನ ಯಳಸಂಗಿ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಗ್ರಾಮದ ಮಹಿಳೆಯರು, ರೈತರೂ ಖಾಲಿಕೊಡಗಳೊಂದಿಗೆ ಪ್ರತಿಭಟನೆ ನಡೆಸಿದರು.
ಆಳಂದ ತಾಲ್ಲೂಕಿನ ಯಳಸಂಗಿ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಗ್ರಾಮದ ಮಹಿಳೆಯರು, ರೈತರೂ ಖಾಲಿಕೊಡಗಳೊಂದಿಗೆ ಪ್ರತಿಭಟನೆ ನಡೆಸಿದರು.   

ಆಳಂದ: ತಾಲ್ಲೂಕಿನ ಯಳಸಂಗಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಅಧಿಕವಾಗಿದ್ದು, ಸಮರ್ಪಕ ನೀರು ಪೂರೈಕೆ ಕೈಗೊಳ್ಳದ ಗ್ರಾ.ಪಂ. ಪಿಡಿಒ ಹಾಗೂ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಗ್ರಾಮದ ಮಹಿಳೆಯರು, ರೈತರು ಗ್ರಾ.ಪಂ. ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ನೂರಾರು ಮಹಿಳೆಯರು ಖಾಲಿಕೊಡಗಳೊಂದಿಗೆ ಆಗಮಿಸಿ ಪಂಚಾಯಿತಿ ಕಚೇರಿ ಮುಂದೆ ಧರಣಿ ಕುಳಿತರು. ಯುವಕರು ಕಚೇರಿಗೆ ಬೀಗ ಹಾಕಲು ಮುಂದಾದರು. ಸ್ಥಳಕ್ಕೆ ಪಂಚಾಯಿತಿ ಸಿಬ್ಬಂದಿ, ಪಿಡಿಒ ಶಿವಾನಂದ ಮಹಾನಿಂಗ ಆಗಮಿಸಿದರು. ಈ ಸಂದರ್ಭದಲ್ಲಿ ಪ್ರತಿಭಟನಾನಿರತ ಮಹಿಳೆಯರ ಆಕ್ರೋಶವನ್ನು ಪಿಡಿಒ ಎದುರಿಸಬೇಕಾಯಿತು. ‘ಗ್ರಾಮದ ಅರ್ಧದಷ್ಟು ಮನೆಗಳಿಗೆ ಮಾತ್ರ ನೀರು ಪೂರೈಕೆ ಮಾಡಲಾಗುತ್ತಿದೆ, ನಾವೂ ಈ ಗ್ರಾಮದವರು ಅಲ್ಲನ್ರೀ, ನಮಗೆ ಯಾಕ ನೀರು ಕೊಡುತ್ತಿಲ್ಲ, ಕನಿಷ್ಠ ಕುಡಿಯಲು ಎರಡು ಕೊಡ ನೀರು ಕೊಡಿ’ ಎಂದು ಮಹಿಳೆ ಲಕ್ಷ್ಮಿಬಾಯಿ ಕೊಂಡಗಳೆ, ಸಿದ್ದಮ್ಮ ಜಂದೆ ಅಳಲು ತೋಡಿಕೊಂಡರು.

ಗ್ರಾ.ಪಂ. ಸದಸ್ಯ ರಾಜಕುಮಾರ, ಮುಖಂಡ ಭೀಮಣ್ಣ ಶಿವಪೂರೆ ಮುಖ್ಯಪೈಪ್‌ಲೈನ್‌ಗೆ ಅನಧೀಕೃತ ನಲ್ಲಿ ಸಂಪರ್ಕ ಕಡಿತಗೊಳಿಸಿದರೆ ಟ್ಯಾಂಕ್‌ ಭರ್ತಿಯಾಗಿ ಎಲ್ಲರಿಗೂ ಕನಿಷ್ಠ ಐದು ಕೊಡ ನೀರು ಪೂರೈಕೆ ಸಾಧ್ಯವಾಗಲಿದೆ. ಅಲ್ಲದೆ ಖಾಸಗಿ ರೈತರ ಜಮೀನಿನಲ್ಲಿ ಜಿ.ಪಂ.ಅನುದಾನದಲ್ಲಿ ಹಾಕಿದ ಕೊಳವೆಬಾವಿಯಿಂದ ನೀರು ಪೂರೈಕೆ ಕೈಗೊಳ್ಳಿ, ನೀರಿನ ಸಮಸ್ಯೆ ಭಯಂಕರವಾಗಿದ್ದು, ಗ್ರಾಮಸ್ಥರು ಹಗಲಿರುಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ’ ಎಂದರು.

ADVERTISEMENT

ಮೂರು ದಿನಗಳಲ್ಲಿ ಗ್ರಾಮದ ಅನಧೀಕೃತ ನಲ್ಲಿ ಸಂಪರ್ಕ ಕಡಿತಗೊಳಿಸಿ, ಸಮರ್ಪಕ ನೀರು ಪೂರೈಕೆ ಕೈಗೊಳ್ಳದಿದ್ದರೆ ಏ.15ರಂದು ನಿಂಬಾಳ-ನಿಂಬರ್ಗಾ ಮುಖ್ಯರಸ್ತೆ ಬಂದ್‌ ಮಾಡಿ ಧರಣಿ ಕೈಗೊಳ್ಳುವುದಾಗಿ ಪ್ರತಿಭಟನಾನಿರತರು ಪಿಡಿಒಗೆ ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ರವಿ ಕೊಂಡಗೋಳೆ, ಅಣ್ಣಪ್ಪ ಕೊಂಡಗೋಳ, ಸಿರಾಜ್‌ ಅಳಗೆ, ಮಾಳಪ್ಪ ಪೂಜಾರಿ, ಸಾತಲಿಂಗಪ್ಪ ಯಲ್ದೆ, ಕಮಲಾಬಾಯಿ ಕೊಂಡಗೋಳ, ಕಲಾವತಿ ಮಠಪತಿ, ಸಂಗಮ್ಮ ಟಕ್ಕಳಕಿ, ಸಿದ್ದಮ್ಮ ಜಂಧೆ, ನೀಲಮ್ಮ ಅವಟೆ, ಶಾರಾದಾಬಾಯಿ ದಬಾಡೆ, ಮಲ್ಲಿಕಾರ್ಜುನ ಯಳಸಂಗಿ, ಶಂಕರ ಯಲ್ದೆ, ಲಕ್ಷ್ಮಣ ಗೌಡೆ ಭಾಗವಹಿಸಿದ್ದರು. ಮಹಿಳೆಯರು ಬಿಸಿಲು ಲೆಕ್ಕಿಸದೇ ಗ್ರಾ.ಪಂ. ಕಚೇರಿ ಮುಂದೆ ಧರಣಿ ಕೈಗೊಂಡರೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಲಿಲ್ಲ.

ಶಿವಾನಂದ ಮಹಾನಿಂಗ ಪಿಡಿಒ ಯಳಸಂಗಿ
ಶಾಂತಾಬಾಯಿ ಅವಟೆ ಗ್ರಾಮಸ್ಥೆ
ಯಳಸಂಗಿ ಗ್ರಾಮದಲ್ಲಿ ಹೆಚ್ಚಿದ ನೀರಿನ ಸಮಸ್ಯೆ ಅನಧಿಕೃತ ಸಂಪರ್ಕ ಕಡಿತಕ್ಕೆ ಪೊಲೀಸರಿಗೆ ದೂರು ಗ್ರಾಪಂ ಪಿಡಿಒ ವಿರುದ್ಧ ಮಹಿಳೆಯರ ಆಕ್ರೋಶ
ಯಳಸಂಗಿ ಗ್ರಾಮಕ್ಕೆ ನೀರು ಸರಬುರಾಜು ಮಾಡುವ ಮುಖ್ಯ ಪೈಪ್‌ಲೈನ್‌ಗೆ ಅನಧಿಕೃತ ನಲ್ಲಿ ಸಂಪರ್ಕ ಕಡಿತಗೊಳಿಸಲು ನಿಂಬರ್ಗಾ ಪೋಲಿಸ್‌ ಠಾಣೆಯಲ್ಲಿ ದೂರು ಸಲ್ಲಿಸಿದ್ದು ಪೋಲಿಸರ ನೆರವಿನಿಂದ ಸಮಸ್ಯೆ ಬಗೆಹರಿಸಲಾಗುವುದು
– ಶಿವಾನಂದ ಮಹಾನಿಂಗ ಪಿಡಿಒ ಯಳಸಂಗಿ
ಸತತ 20 ದಿನಗಳಿಂದ ನಮ್ಮ ಓಣಿಯಲ್ಲಿ ನೀರು ಪೂರೈಕೆ ಮಾಡಿಲ್ಲ ಗ್ರಾಮದಲ್ಲಿ ಕುಡಿಯುವ ನೀರು ಲಭ್ಯವಿದ್ದರೂ ಪಂಚಾಯಿತಿ ನಿರ್ಲಕ್ಷ್ಯದಿಂದ ನೀರಿನ ಸಮಸ್ಯೆ ಉಂಟಾಗಿದೆ. ನೀರಿಗಾಗಿ ದಿನವೀಡಿ ಅಲೆಯುತ್ತಿದ್ದೇವೆ
– ಶಾಂತಾಬಾಯಿ ಅವಟೆ ಗ್ರಾಮಸ್ಥೆ
ಪೇಚಿಗೆ ಸಿಲುಕಿದ ಪಿಡಿಒ
ಧರಣಿ ಆರಂಭದಲ್ಲಿ ಪಿಡಿಒ ಶಿವಾನಂದ ಅವರು ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಗ್ರಾಮದಲ್ಲಿ ಖಾಸಗಿ ರೈತರಿಂದ ನೀರು ಪಡೆಯಲಾಗಿದೆ. ಆದರೆ ನೀರು ಕಡಿಮೆಯಾದ ಹಿನ್ನಲೆಯಲ್ಲಿ ಸಮಸ್ಯೆ ಆಗಿದೆ ಎಂದು ಪ್ರತಿಭಟನಾಕಾರರ ಮುಂದೆ ಹೇಳಿದರು. ಇದು ಸಹಜವಾಗಿ ಪ್ರತಿಭಟನಾಕಾರರ ಕೋಪ ಹೆಚ್ಚಲು ಕಾರಣವಾಯ್ತು. ‘ಸುಳ್ಳು ಆಡಬೇಡಿ ಗ್ರಾಮದಲ್ಲಿ ಯಾವ ರೈತರ ಖಾಸಗಿ ಕೊಳವೆ ಬಾವಿಗೆ ಸಂಪರ್ಕಿಸಿದ್ದು ಪೈಪ್‌ಲೈನ್‌ ಅಳವಡಿಸಿದ್ದು ನಡೆಯರಿ ತೋರಿಸಿ ಎಂದು ಪಟ್ಟು ಹಿಡಿದರು. ಅಲ್ಲದೆ ತಕ್ಷಣ ತಾ.ಪಂ. ಇಒ ಚಂದ್ರಶೇಖರ್‌ ಹಾಗೂ ನೋಡಲ್‌ ಅಧಿಕಾರಿ ಜೆಇಗೆ ಕರೆ ಮಾಡಿದರು. ಇದರಿಂದ ಮುಜಗರಕ್ಕೆ ಒಳಗಾದ ಪಿಡಿಒ ಪೇಚಿಗೆ ಸಿಲುಕಿದ ಪ್ರಸಂಗ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.