ADVERTISEMENT

ಸಿಗದ ಮಂತ್ರಿ ಸ್ಥಾನ: ಪ್ರತ್ಯೇಕ ರಾಜ್ಯಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2021, 3:33 IST
Last Updated 6 ಆಗಸ್ಟ್ 2021, 3:33 IST

ಕಲಬುರ್ಗಿ: ಕಲ್ಯಾಣ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಜಾಗೃತಿ ಹೋರಾಟ ಸಮಿತಿ,ಕರ್ನಾಟಕ ಯುವಜನ ಒಕ್ಕೂಟ ಹಾಗೂ ನಾಲ್ಕುಚಕ್ರ ಸಂಘಟನೆಗಳ ಆಶ್ರಯದಲ್ಲಿ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.

ಇಲ್ಲಿನ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತದಲ್ಲಿ ಜಮಾವನೆಗೊಂಡ ಸಂಘಟನೆಗಳ ಕಾರ್ಯಕರ್ತರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಸಚಿವ ಸಂಪುಟದಲ್ಲಿ ಕಲಬುರ್ಗಿ ಜಿಲ್ಲೆ ಮತ್ತೆ ಅನ್ಯಾಯ ಮಾಡಲಾಗಿದೆ. ಈ ಹಿಂದೆ ಬಿ.ಎಸ್‌. ಯಡಿಯೂರಪ್ಪ ಅವರ ಅವಧಿಯಲ್ಲೂ ಯಾವುದೇ ಸ್ಥಾನ ನೀಡಲಿಲ್ಲ. ಆಗಿನ ಹೋರಾಟಗಳೂ ವಿಫಲವಾದವು. ಈಗ ಬಸವರಾಜ ಬೊಮ್ಮಾಯಿ ಅವರ ಸರ್ಕಾರದಲ್ಲೂ ಮತ್ತೆ ನಿರ್ಲಕ್ಷ್ಯ ಮಾಡಲಾಗಿದೆ. ಇದು ಜಿಲ್ಲೆಯ ಜನರ ತಾಳ್ಮೆ ಪರೀಕ್ಷೆ ಮಾಡುವಂತಿದೆ ಎಂದು ಸಮಿತಿ ಅಧ್ಯಕ್ಷ ಎಂ.ಎಸ್. ನರಿಬೋಳ ಕಿಡಿ ಕಾರಿದರು.

ಕರ್ನಾಟಕ ಯುವಜನ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಅನಂತ ಗುಡಿ ಮಾತನಾಡಿ, ‘371 ಜೆ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ವಿಫಲವಾಗಿದೆ. ಅದನ್ನು ಯಥಾವತ್ತಾಗಿ ಜಾರಿಗೊಳಿಸಿ ಇಲ್ಲವೇ ತೆಲಂಗಾಣ ಮಾದರಿಯಲ್ಲಿ ಕೇಂದ್ರ ಸರ್ಕಾರವೇ ಸಂವಿಧಾನದ ಆರ್ಟಿಕಲ್‌–3 ಅಡಿ ಪ್ರತ್ಯೇಕ ರಾಜ್ಯ ಘೋಷಣೆ ಮಾಡಲಿ’ ಎಂದು ಆಗ್ರಹಿಸಿದರು.

ADVERTISEMENT

‘ಈ ಭಾಗದ ಜನ ಪ್ರತಿನಿಧಿಗಳನ್ನು ಅಪಮಾನಗೈದ ನೀತಿಯನ್ನು ಉಗ್ರವಾಗಿ ಖಂಡಿಸುತೇವೆ. ನೂತನ ಮುಖ್ಯಮಂತ್ರಿ ಇದನ್ನು ಸೂಕ್ತವಾಗಿ ಪರಿಶೀಲಿಸಿ ಆಗಸ್ಟ್ 15ರ ಒಳಗೆ ಪ್ರಾತಿನಿಧ್ಯ ನೀಡಿ ಗೌರವಿಸಬೇಕು. ಇಲ್ಲದಿದ್ದರೆ ಪ್ರತ್ಯೇಕ ರಾಜ್ಯ ಸ್ಥಾಪಿಸಲು ಸಚಿವ ಸಂಪುಟದಲ್ಲಿ ಕಾನೂನು ಅಡಿ ಸೆಪ್ಟೆಂಬರ್ 18ರ ಒಳಗಾಗಿ ಸೂಕ್ತ ನಿರ್ಣಯವನ್ನು ತೆಗೆದುಕೊಂಡು ಕೇಂದ್ರಕ್ಕೆ ಸಲ್ಲಿಸಬೇಕು’ ಎಂದುಸಮಿತಿ ಕಾರ್ಯದರ್ಶಿ ಜಗನ್ನಾಥ ಮಂಠಾಳೆ ತಿಳಿಸಿದರು.

ಸಮಿತಿಯ ಪ್ರಧಾನ ಕಾರ್ಯದರ್ಶಿ ಜಿ.ವಿನೋದಕುಮಾರ, ಶರಣಗೌಡ ಪಾಟೀಲ ಹರಸೂರ, ತಾತಾಗೌಡ ಪಾಟೀಲ, ಡಾ.ರಾಜಶೇಖರ ಬಂಡೆ, ಮಹಾಂತೇಶ ಹರವಾಳ, ಮಾಲಾ ಕಣ್ಣಿ, ಮಾಲಾ ಧಣ್ಣೂರ ಸೇರಿದಂತೆ ಹಲವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.