ADVERTISEMENT

ಕಲಬುರಗಿ | ಎಂ.ಜಿ ರಸ್ತೆ ದುರಸ್ತಿಗೆ ಆಗ್ರಹ: ಸಂಚಾರ ತಡೆದು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2025, 6:49 IST
Last Updated 10 ಜುಲೈ 2025, 6:49 IST
ಕಲಬುರಗಿ ನಗರದ ಎಂ.ಜಿ ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ 30 ಮತ್ತು 32ನೇ ವಾರ್ಡ್‌ಗಳ ಮುಖಂಡರು ಬುಧವಾರ ವಾಜಪೇಯಿ ವೃತ್ತದ ಹತ್ತಿರ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು
ಕಲಬುರಗಿ ನಗರದ ಎಂ.ಜಿ ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ 30 ಮತ್ತು 32ನೇ ವಾರ್ಡ್‌ಗಳ ಮುಖಂಡರು ಬುಧವಾರ ವಾಜಪೇಯಿ ವೃತ್ತದ ಹತ್ತಿರ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು   

ಕಲಬುರಗಿ: ನಗರದ 30 ಮತ್ತು 32ನೇ ವಾರ್ಡ್‌ ಮಧ್ಯದಲ್ಲಿರುವ ಎಂ.ಜಿ ರಸ್ತೆ ಹಾಳಾಗಿದ್ದು ಶೀಘ್ರ ರಸ್ತೆ ಅಭಿವೃದ್ಧಿಗೆ ಕ್ರಮ ತೆಗೆದುಕೊಳ್ಳುವಂತೆ ಎರಡೂ ವಾರ್ಡ್‌ಗಳ ಮುಖಂಡರು ಬುಧವಾರ ವಾಜಪೇಯಿ ವೃತ್ತ ಹತ್ತಿರ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಮುಖಂಡರು, ‘ಮಹಾತ್ಮಾ ಗಾಂಧಿ ರಸ್ತೆ ಬಸವೇಶ್ವರ ಕಾಲೊನಿ ಮತ್ತು ಗುಬ್ಬಿ ಕಾಲೊನಿಯ ಮಧ್ಯೆದ ರಸ್ತೆ, ರಿಂಗ್ ರೋಡವರೆಗೆ ಹಾದು ಹೋಗುವ ರಸ್ತೆ ಹಾಳಾಗಿರುವುದರಿಂದ ದ್ವಿಚಕ್ರ ವಾಹನ ಸವಾರರಿಗೆ, ಬಡಾವಣೆಯ ಜನರಿಗೆ ತೊಂದರೆಯಾಗಿದೆ. ಶಾಲಾ ವಾಹನಗಳ ಸಂಚಾರಕ್ಕೆ ರಸ್ತೆ ಅನುಕೂಲವಾಗಿಲ್ಲ’ ಎಂದರು.  

‘ಇದು ದೊಡ್ಡದಾದ ಡಾಂಬರೀಕರಣ ಡಿವೈಡರ್ ರಸ್ತೆ. ಸುಮಾರು 8 ವರ್ಷಗಳಾದರೂ ಇಲ್ಲಿ ರಸ್ತೆಯ ಯಾವುದೇ ಕಾಮಗಾರಿ ನಡೆದಿಲ್ಲ. ಇಲ್ಲಿ ಬಸವೇಶ್ವರ ಕಾಲೊನಿ ಮತ್ತು ಗುಬ್ಬಿ ಕಾಲೊನಿಯ ವಾಣಿಜ್ಯ ಮಳಿಗೆಗಳು, ನಾಗರಿಕರು ಸಾಕಷ್ಟು ತೆರಿಗೆ ಪಾವತಿಸುತ್ತಾರೆ. ಯಾವುದೇ ರೀತಿಯ ಕರ ಬಾಕಿಯಿಲ್ಲ. ಆದರೂ ರಸ್ತೆ ಮಾಡಿಲ್ಲ‘ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಎಲ್ ಅಂಡ್‌ ಟಿ ಕಾಮಗಾರಿಯಿಂದ ಹಾಳಾದ ರಸ್ತೆಗಳನ್ನು ಆದಷ್ಟು ಬೇಗ ಸರಿಪಡಿಸಬೇಕು. ಕೂಡಲೇ ಎಂ.ಜಿ ರಸ್ತೆಯ ಕಾಮಗಾರಿ ಪ್ರಾರಂಭಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವುದು ಖಚಿತ’ ಎಂದು ಎಚ್ಚರಿಸಿದರು.

ಈ ವೇಳೆ ಮುಖಂಡರಾದ ಜಗದೇವ ಎಂ. ಗುತ್ತೇದಾರ, ಸಿದ್ದರಾಜ ಬಿರಾದಾರ, ರಾಜು ಹೊಡಲ, ವಿಕಾಸ ಕರಣಿಕ್, ಸೂರ್ಯಕಾಂತ್ ಸಿರಗಾಪುರ, ಬಸವರಾಜ ಕೊರವಾರ್, ಶರಣು ದೋಣಿ, ಸಿದ್ದಪ್ಪ ಹುಳಿಪಲ್ಲ್ಯಾ, ಶ್ರೀಕಾಂತ ಚಿಂಚೋಳಿ, ಶಾಂತಗೌಡ, ಪವನ ಸ್ವಾಮಿ, ಸನ್ನಿ, ಪಾಂಡು, ಶಿವು, ವೀರೇಶ್ ಸೇರಿದಂತೆ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.