ಕಾಳಗಿ: ತಾಲ್ಲೂಕಿನ ‘ಪಿಡಿಒ ಅಮಾನತು ಹಾಗೂ ಗ್ರಾ.ಪಂ ಅಧ್ಯಕ್ಷರ ಸದಸ್ಯತ್ವ ರದ್ದುಗೊಳಿಸಲು ಆಗ್ರಹಿಸಿ ಶೆಳ್ಳಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೇರೂರ(ಕೆ) ಮತ್ತು ಕಲ್ಲಹಿಪ್ಪರಗ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದ ಗ್ರಾಮಸ್ಥರು, ‘ಪಿಡಿಒ ಸರಿಯಾಗಿ ಪಂಚಾಯಿತಿಗೆ ಬರುವುದಿಲ್ಲ. ಕೆಲಸ ಕಾಮಗಾರಿ ಮಾಡದೆ ನಕಲಿ ಬಿಲ್ ಸೃಷ್ಟಿಸಿ ಮತ್ತು ತಮ್ಮ ಸ್ವಂತ ಉಪಯೋಗಕ್ಕೆ ಬಳಸಿಕೊಂಡು ಸರ್ಕಾರಕ್ಕೆ ಮೋಸ ಮಾಡುತ್ತಿದ್ದಾರೆ. ಗ್ರಾ.ಪಂ ಅಧ್ಯಕ್ಷರು ಮಹಿಳೆಯಾಗಿದ್ದು ಅವರ ಪತಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ನಮಗೆ ಯಾರು ಏನು ಮಾಡುತ್ತಾರೆ ಎಂದು ಸಿಬ್ಬಂದಿಗೆ ಬೆದರಿಕೆ ಹಾಕುತ್ತಿದ್ದಾರೆ.
ಪಿಡಿಒ ಜತೆಗೂಡಿ 15ನೇ ಹಣಕಾಸಿನ ಅನುದಾನ ಕೊಡದೆ ಸ್ವಂತಕ್ಕೆ ಬಳಸಿಕೊಂಡಿದ್ದಾರೆ. ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳದೆ ಜನರಿಗೆ ಮೋಸ ಮಾಡುತ್ತಿದ್ದಾರೆ’ ಎಂದು ಪ್ರತಿಭಟನಾಕಾರರು ದೂರಿದರು.
ಉದ್ಯೋಗ ಖಾತರಿ ಯೋಜನೆಯಲ್ಲಿ ಅವ್ಯವಹಾರವಾಗಿದ್ದು ತನಿಖೆ ಮಾಡಿ, ಸರ್ಕಾರಕ್ಕೆ ಮರಳಿ ಹಣ ಪಾವತಿಸಬೇಕು. ಸಂವಿಧಾನ ಜನಜಾಗೃತಿ ಜಾಥಾ ವೇಳೆ ಮಾಡಿರುವ ಖರ್ಚು ವೆಚ್ಚದ ಬಗ್ಗೆ ತನಿಖೆಯಾಗಬೇಕು. ಗ್ರಾ.ಪಂ ಮಾಜಿ ಸದಸ್ಯರ ಬಾಕಿ ಗೌರವಧನ ನೀಡಬೇಕು. ಮಾಜಿ ಸದಸ್ಯರ ಕೆಲಸಕ್ಕೆ ಇಟ್ಟ ಹಣವನ್ನು ದುರ್ಬಳಕೆ ಮಾಡಿಕೊಂಡಿರುವುದನ್ನು ಹಿಂತಿರುಗಿಸಬೇಕು’ ಎಂದು ಒತ್ತಾಯಿಸಿದರು.
ಕಾಶಿನಾಥ ವರನಾಳ(ಶೆಳ್ಳಗಿ), ಅಂಬರಾಯ ನೂಲಕರ, ಮಲ್ಲಿಕಾರ್ಜುನ ದಳಪತಿ, ನಾಗೇಂದ್ರ ಅಂಕನ, ಬಾಬುರಾವ ಯಳವಂತಗಿ, ಶಿವರಾಯ ಕಡಬೂರ, ರಾಜಕುಮಾರ ದೊಡ್ಡಮನಿ, ಬಸವರಾಜ ದೊಡ್ಡಮನಿ, ಗುರುಬಾಯಿ ಗಾಪನೂರ, ಕಾಶಿನಾಥ ದೊಡ್ಡಮನಿ, ಅರ್ಜುನ ಗಾಪನೂರ, ಬಲವಂತ ಕಮಕನೂರ, ಜಗನ್ನಾಥ ಕಮಕನೂರ, ಅರ್ಚನಾ ಉದಯಕರ ಅನೇಕರು ಪಾಲ್ಗೊಂಡಿದ್ದರು.
ಕಾಳಗಿ ತಾ.ಪಂ ನರೇಗಾ ಸಹಾಯಕ ನಿರ್ದೇಶಕ ಗಂಗಾಧರ ವಿಶ್ವಕರ್ಮ ಸ್ಥಳಕ್ಕೆ ಧಾವಿಸಿ, ಮನವಿ ಸ್ವೀಕರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.