ADVERTISEMENT

ಕಲಬುರಗಿ | ‘ಅಪರಾಜಿತ’ ಕಾಯ್ದೆ ಜಾರಿಗೆ ಒತ್ತಾಯ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2024, 6:53 IST
Last Updated 10 ಸೆಪ್ಟೆಂಬರ್ 2024, 6:53 IST
ಕಲಬುರಗಿಯಲ್ಲಿ ಸೋಮವಾರ ಜಿಲ್ಲಾ ಕೋಲಿ, ಕಬ್ಬಲಿಗ ಸಮನ್ವಯ ಸಮಿತಿಯ ಮುಖಂಡರು ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.  ಪ್ರಜಾವಾಣಿ ಚಿತ್ರ
ಕಲಬುರಗಿಯಲ್ಲಿ ಸೋಮವಾರ ಜಿಲ್ಲಾ ಕೋಲಿ, ಕಬ್ಬಲಿಗ ಸಮನ್ವಯ ಸಮಿತಿಯ ಮುಖಂಡರು ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.  ಪ್ರಜಾವಾಣಿ ಚಿತ್ರ   

ಕಲಬುರಗಿ: ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಗುಣತೀರ್ಥ ವಾಡಿಯಲ್ಲಿ ಯುವತಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದನ್ನು ಖಂಡಿಸಿ ಜಿಲ್ಲಾ ಕೋಲಿ, ಕಬ್ಬಲಿಗ ಸಮನ್ವಯ ಸಮಿತಿಯ ಮುಖಂಡರು ನಗರದಲ್ಲಿ ಸೋಮವಾರ ಪ್ರತಿಭಟಿಸಿದರು.

ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಜಮಾಯಿಸಿದ ಸಮುದಾಯದ ಮುಖಂಡರು ಘೋಷಣೆ ಕೂಗಿದರು. ಟೈರ್‌ಗೆ ಬೆಂಕಿಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲೂ ರಸ್ತೆ ತಡೆ ನಡೆಸಿದರು. ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಿ, ಯುವತಿಯ ಕುಟುಂಬಸ್ಥರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಇತ್ತೀಚಿನ ದಿನಗಳಲ್ಲಿ ಕೋಲಿ ಸಮಾಜದ ಬಾಲಕಿಯರ ಅಪಹರಣ, ಅತ್ಯಾಚಾರ, ಕೊಲೆ, ಯುವಕರಿಗೆ ಮಾನಸಿಕ ಹಿಂಸೆ ನೀಡಿ ಪ್ರಚೋದಿತ ಆತ್ಮಹತ್ಯೆಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ಹಲವು ಹೋರಾಟ ಮಾಡಿ ನ್ಯಾಯ ಮತ್ತು ಪರಿಹಾರಕ್ಕಾಗಿ ಮನವಿ ಮಾಡಿದರೂ ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಪ್ರತಿಭಟನಕಾರರು ಬೇಸರ ವ್ಯಕ್ತಪಡಿಸಿದರು.

ADVERTISEMENT

ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ರಾಜ್ಯ ಸರ್ಕಾರವು ಪಶ್ಚಿಮ ಬಂಗಾಳದ ಮಾದರಿಯಲ್ಲಿ ‘ಅಪರಾಜಿತ ಮಹಿಳೆ ಮತ್ತು ಮಕ್ಕಳ (ಪಶ್ಚಿಮ ಬಂಗಾಳ ಕ್ರಿಮಿನಲ್ ಕಾಯ್ದೆಗಳು ಮತ್ತು ತಿದ್ದುಪಡಿ) ಮಸೂದೆ ಜಾರಿಗೆ ತರಬೇಕು. ಕಲಬುರಗಿಯಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಣಯ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಗುಣತೀರ್ಥವಾಡಿಯ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಗಳನ್ನು ಅಪರಾಜಿತ ಕಾಯ್ದೆಯ ಅಡಿಯಲ್ಲಿ ಶಿಕ್ಷಿಸುವಂತೆ ಆಗಬೇಕು. ಸಂತ್ರಸ್ತೆಯ ಕುಟುಂಬದ ಸದಸ್ಯರಿಗೆ ರಾಜ್ಯ ಸರ್ಕಾರ ಒಂದು ಮನೆ, 5 ಎಕರೆ ಜಮೀನು ಮಂಜೂರು ಮಾಡಬೇಕು. ಒಬ್ಬ ಸದಸ್ಯರಿಗೆ ಸರ್ಕಾರಿ ನೌಕರಿ, ₹1 ಕೋಟಿ ಪರಿಹಾರವೂ ನೀಡಬೇಕು ಎಂದು ಮನವಿ ಮಾಡಿದರು.

ಲೋಕಸಭಾ ಚುನಾವಣೆಯ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್‌ ನಾಯಕರು ಭರವಸೆ ನೀಡಿದಂತೆ ಕೋಲಿ, ಕಬ್ಬಲಿಗ ಸಮುದಾಯಗಳನ್ನು ಪರಿಶಿಷ್ಟ ಪಟ್ಟಿಗೆ ಸೇರ್ಪಡೆ ಮಾಡಬೇಕು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿನಲ್ಲಿ ಕೋಲಿ, ಕಬ್ಬಲಿಗ ಸಮುದಾಯ ಪ್ರಮುಖ ಪಾತ್ರವಹಿಸಿದೆ. ಹೀಗಾಗಿ, ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆಯೂ ನಿರ್ಣಯ ತೆಗೆದುಕೊಳ್ಳಬೇಕು ಎಂದು ಕೋರಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಅವ್ವಣ್ಣ ಮ್ಯಾಕೇರಿ, ಶರಣಪ್ಪ ತಳವಾರ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಕಲಬುರಗಿಯಲ್ಲಿ ಸೋಮವಾರ ಜಿಲ್ಲಾ ಕೋಲಿ ಕಬ್ಬಲಿಗ ಸಮನ್ವಯ ಸಮಿತಿಯ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. ಪ್ರಜಾವಾಣಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.