ADVERTISEMENT

ಪಿಎಸ್‌ಐ ನೇಮಕಾತಿ ಪರೀಕ್ಷೆ: ಮೊಬೈಲ್‌ ಕೊಟ್ಟು ಸಿಕ್ಕಿಬಿದ್ದ ಶರಣಬಸಪ್ಪ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2022, 7:11 IST
Last Updated 24 ಏಪ್ರಿಲ್ 2022, 7:11 IST
ಕಲಬುರಗಿಯಲ್ಲಿ ಶನಿವಾರ ರಾತ್ರಿ ಸಿಐಡಿ ಅಧಿಕಾರಿಗಳು, ಆರೋಪಿಗಳಾದ ಮಹಾಂತೇಶ ಪಾಟೀಲ, ವಿಶಾಲ್‌ ಶಿರೂರ, ಹಯ್ಯಾಳಿ ದೇಸಾಯಿ, ಕಾನ್‌ಸ್ಟೆಬಲ್ ರುದ್ರಗೌಡ ಪಾಟೀಲ ಅವರನ್ನು ಪೊಲೀಸ್‌ ವಾಹನದಲ್ಲಿ ಎಂ.ಬಿ.ನಗರ ಠಾಣೆಗೆ ಕರೆದೊಯ್ದರು
ಕಲಬುರಗಿಯಲ್ಲಿ ಶನಿವಾರ ರಾತ್ರಿ ಸಿಐಡಿ ಅಧಿಕಾರಿಗಳು, ಆರೋಪಿಗಳಾದ ಮಹಾಂತೇಶ ಪಾಟೀಲ, ವಿಶಾಲ್‌ ಶಿರೂರ, ಹಯ್ಯಾಳಿ ದೇಸಾಯಿ, ಕಾನ್‌ಸ್ಟೆಬಲ್ ರುದ್ರಗೌಡ ಪಾಟೀಲ ಅವರನ್ನು ಪೊಲೀಸ್‌ ವಾಹನದಲ್ಲಿ ಎಂ.ಬಿ.ನಗರ ಠಾಣೆಗೆ ಕರೆದೊಯ್ದರು   

ಕಲಬುರಗಿ: ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಆರೋಪದಡಿ ಬಂಧಿತನಾದ ಅಫಜಲಪುರದ ವ್ಯಕ್ತಿ ಶರಣಬಸಪ್ಪ, ತನ್ನ ಮೊಬೈಲ್‌ ಅನ್ನು ಹಯ್ಯಾಳಿ ದೇಸಾಯಿ ಅವರಿಗೆ ನೀಡಿದ್ದ. ಬ್ಲೂಟೂತ್‌ ಮೂಲಕ ಪರೀಕ್ಷಾ ಕೇಂದ್ರದೊಳಗೆ ಉತ್ತರಗಳನ್ನು ರವಾನಿಸಲು ಅದೇ ಮೊಬೈಲ್‌ ಬಳಸಿದ್ದರಿಂದ ಶರಣಬಸಪ್ಪ ಕೂಡ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ.

ಏ. 21ರಂದು ಬಂಧಿಸಲಾದ ಶಾಸಕ ಎಂ.ವೈ. ಪಾಟೀಲ ಅವರ ಗನ್‌ಮ್ಯಾನ್‌ ಹಯ್ಯಾಳಿ ದೇಸಾಯಿ ಹಾಗೂ ಶರಣಬಸಪ್ಪ ಅಫಜಲಪುರದವರು. ಇಬ್ಬರೂ ಸ್ನೇಹಿತರು. ಸ್ನೇಹದ ಸಲುಗೆ ಬಳಸಿಕೊಂಡ ಹಯ್ಯಾಳಿಯು, ಶರಣಬಸಪ್ಪ ಅವರ ಮೊಬೈಲ್‌ ಇಸಿದುಕೊಂಡಿದ್ದ. ಆದರೆ, ಬ್ಲೂಟೂತ್‌ನಿಂದ ಉತ್ತರಗಳನ್ನು ರವಾನಿಸಲು ಎರಡು ಮೊಬೈಲ್‌ಗಳ ಅವಶ್ಯಕತೆ ಇತ್ತು. ಹೀಗಾಗಿ,ಸಿಎಆರ್ ಪೊಲೀಸ್ ಕಾನ್‌ಸ್ಟೆಬಲ್ ರುದ್ರಗೌಡ ಪಾಟೀಲ ಅವರ ಮೊಬೈಲ್‌ ಅನ್ನೂ ಅವರಿಗೆ ಹೇಳದೆಯೇ ಹಯ್ಯಾಳಿ ತೆಗೆದುಕೊಂಡು ಹೋಗಿದ್ದ ಎನ್ನಲಾಗಿದೆ.

ಸಹೋದರರಾದ ರುದ್ರಗೌಡ ಡಿ. ಪಾಟೀಲ ಹಾಗೂ ಮಹಾಂತೇಶ ಡಿ. ಪಾಟೀಲ ಅವರು ನಿಯೋಜಿಸಿದ್ದ ಸಹಚರರು, ವಾಮಮಾರ್ಗಕ್ಕಾಗಿ ಈ ಇಬ್ಬರ ಮೊಬೈಲ್‌ಗಳನ್ನು ಬಳಸಿಕೊಂಡಿದ್ದರು. ಪರೀಕ್ಷಾ ಕೇಂದ್ರದಿಂದ ತುಸು ದೂರದಲ್ಲಿ ಕುಳಿತು ಯಾವ ಪ್ರಶ್ನೆ, ಯಾವ ಆಯ್ಕೆ ಟಿಕ್‌ ಮಾಡಬೇಕು ಎಂದು ಬ್ಲೂಟೂತ್‌ನಲ್ಲಿ ಹೇಳುತ್ತಿದ್ದರು. ಅದರಂತೆ ಹಯ್ಯಾಳಿ ಹಾಗೂ ವಿಶಾಲ್‌ ಟಿಕ್‌ ಮಾಡಿದ್ದರು. ಪರೀಕ್ಷೆ ಮುಗಿಸಿದ ಬಳಿಕ ಬ್ಲೂಟೂತ್‌ ಉಪಕರಣ ಹಾಳು ಮಾಡಿದ್ದರು.

ADVERTISEMENT

‘ಒಎಂಆರ್‌ ಶೀಟಿನಲ್ಲಿ ನಡೆದ ಅಕ್ರಮಕ್ಕಿಂತ ದೊಡ್ಡ ಅಕ್ರಮ ಬ್ಲೂಟೂತ್‌ ಬಳಕೆಯಿಂದ ನಡೆದಿದೆ. ಬ್ಲೂಟೂತ್‌ ಉಪಕರಣ ನಾಶಪಡಿಸಿದರೆ ಎಲ್ಲವೂ ಗಾಳಿಯಲ್ಲಿ ಮಾಯವಾಗುತ್ತದೆ, ತಾವು ಸುರಕ್ಷಿತವಾಗುತ್ತೇವೆ ಎಂಬ ಕಲ್ಪನೆ ಆರೋಪಿಗಳಿಗೆ ಇತ್ತು. ಆದರೆ, ತನಿಖೆ ವೇಳೆ ನಿರ್ದಿಷ್ಟ ಮಾರ್ಗ ಅನುಸರಿಸಿದ ಕಾರಣ ಬ್ಲೂಟೂತ್‌ನಿಂದಲೇ ಹೆಚ್ಚಿನ ಮಾಹಿತಿ ಲಭ್ಯವಾಯಿತು’ ಎಂದು ಸಿಐಡಿ ಮೂಲಗಳು ತಿಳಿಸಿವೆ.

ಮಹಾಂತೇಶ ಪಾಟೀಲ, ವಿಶಾಲ್‌ ಶಿರೂರ, ಹಯ್ಯಾಳಿ ದೇಸಾಯಿ,ಸಿಎಆರ್ ಪೊಲೀಸ್ ಕಾನ್‌ಸ್ಟೆಬಲ್ ರುದ್ರಗೌಡ ಪಾಟೀಲ ಅವರನ್ನು ಶನಿವಾರ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ನಾಲ್ವರನ್ನೂ ಏ. 29ರವರೆಗೆ ಸಿಐಡಿ ಕಸ್ಟಡಿಗೆ ವಹಿಸಲಾಗಿದೆ. ಎಲ್ಲರನ್ನೂ ವಿಚಾರಣೆ ನಡೆಸಿದ ಅಧಿಕಾರಿಗಳು, ರಾತ್ರಿ 10ರ ನಂತರ ಇಲ್ಲಿನ ಎಂ.ಬಿ.ನಗರ ಪೊಲೀಸ್‌ ಠಾಣೆಗೆ ಕರೆದೊಯ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.