ADVERTISEMENT

ಪಿಎಸ್‌ಐ ಅಕ್ರಮ: ದಿವ್ಯಾ ಪತಿ ಸೇರಿ 12 ಜನರ ಜಾಮೀನು ಅರ್ಜಿ ತಿರಸ್ಕೃತ

​ಪ್ರಜಾವಾಣಿ ವಾರ್ತೆ
Published 12 ಮೇ 2022, 4:25 IST
Last Updated 12 ಮೇ 2022, 4:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಲಬುರಗಿ: ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಬಂಧಿತರಾಗಿರುವ 12 ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ಇಲ್ಲಿನ ಮೂರನೇ ಜೆಎಂಎಫ್‌ ನ್ಯಾಯಾಲಯ ಹಾಗೂ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯಗಳು ಬುಧವಾರ ತಿರಸ್ಕರಿಸಿವೆ.

ಸೋಮವಾರ ವಿಚಾರಣೆ ನಡೆಸಿದ್ದ ಮೂರನೇ ಜೆಎಂಎಫ್‌ ನ್ಯಾಯಾಲಯದ ನ್ಯಾಯಾಧೀಶ ಬಸವರಾಜ ನೇಸರಗಿ ಅವರು ಬುಧವಾರಕ್ಕೆ ತೀರ್ಪನ್ನು ಕಾಯ್ದಿರಿಸಿದ್ದರು. ಜಾಮೀನು ನೀಡಿದರೆ ವಿಚಾರಣೆಗೆ ಹಿನ್ನಡೆಯಾಗಲಿದ್ದು, ಹೊರಬಂದ ಬಳಿಕ ಆರೋಪಿಗಳು ಸಾಕ್ಷ್ಯ ನಾಶಕ್ಕೆ ಯತ್ನಿಸುವ ಸಾಧ್ಯತೆ ಇದೆ ಎಂದು ಸಿಐಡಿ ಪರ ವಕೀಲ, ಸಹಾಯಕ ಸರ್ಕಾರಿ ಅಭಿಯೋಜಕ ಶಿವಶರಣಪ್ಪ ಹೋತಪೇಟ ಅವರು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟರು.

ಈ ಅಂಶಗಳನ್ನು ಪರಿಗಣಿಸಿದ ನ್ಯಾಯಾಧೀಶರು ಆರೋಪಿಗಳಾದ ಮಹಾಂತೇಶ ಪಾಟೀಲ, ಹಯ್ಯಾಳಿ ನಿಂಗಣ್ಣ ದೇಸಾಯಿ, ರುದ್ರಗೌಡ ಬಲರಾಯಪ್ಪ, ಶರಣಪ್ಪ ಬೋರಗಿ, ವಿಶಾಲ ಬಸವರಾಜ ಶಿರೂರ, ಮಲ್ಲಿಕಾರ್ಜುನ ಮೇಳಕುಂದಿ, ದಿವ್ಯಾ ಅವರಿಗೆ ಆಶ್ರಯ ನೀಡಿದ ಮಹಾರಾಷ್ಟ್ರದ ಸುರೇಶ ಕಾಟೆಗಾಂವ, ಕಾಳಿದಾಸ ಹಾಗೂ ದಿವ್ಯಾ ಕಾರು ಚಾಲಕ ಸದ್ದಾಂ ಅವರಿಗೆ ಜಾಮೀನು ತಿರಸ್ಕರಿಸಿದರು.

ADVERTISEMENT

ಇತರ ಮೂವರು ಆರೋಪಿಗಳಾದ ದಿವ್ಯಾ ಹಾಗರಗಿ ಪತಿ ರಾಜೇಶ್ ಹಾಗರಗಿ, ಅಭ್ಯರ್ಥಿ ಪ್ರವೀಣಕುಮಾರ್ ಹಾಗೂ ಜ್ಞಾನಜ್ಯೋತಿ ಇಂಗ್ಲಿಷ್‌ ಮಾಧ್ಯಮ ಶಾಲೆಯ ಶಿಕ್ಷಕಿ ಸುಮಾ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಶುಕ್ಲಾಕ್ಷ ಪಾಲನ್ ಅವರು ಎಲ್ಲ ಮೂವರ ಅರ್ಜಿಗಳನ್ನು ತಿರಸ್ಕರಿಸಿದರು.

ಸಿಐಡಿ ಪರವಾಗಿ ಒಂದನೇ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಎಸ್.ಆರ್.ನರಸಿಂಹಲು ಹಾಜರಾಗಿದ್ದರು.

ದಿವ್ಯಾ ಬಳಸಿದ್ದ ಮೊಬೈಲ್ ಪತ್ತೆ
ಪಿಎಸ್‌ಐ ಅಕ್ರಮ ನೇಮಕಾತಿ ವೇಳೆ ದಿವ್ಯಾ ಹಾಗರಗಿ ಬಳಸಿದ್ದ ಮೊಬೈಲ್ ಫೋನನ್ನು ಸಿಐಡಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಮಹಾರಾಷ್ಟ್ರದಲ್ಲಿ ಬಂಧನದ ವೇಳೆ ಹಳೆಯ ಮೊಬೈಲ್ ಫೋನ್ ಸಿಕ್ಕರೆ ಎಲ್ಲ ಮಾಹಿತಿ ಹೊರಬೀಳಲಿದೆ ಎಂದು ಗಾಬರಿಯಿಂದ ಮೊಬೈಲ್ ಬಿಸಾಕಿದ್ದರು. ಆದರೆ, ಧಾವಂತದಲ್ಲಿ ಬಿಸಾಕಿದ್ದ ಮೊಬೈಲ್‌ಅನ್ನು ಆಗಷ್ಟೇ ಖರೀದಿಸಿದ್ದರು. ಹಳೆಯ ಮೊಬೈಲ್ ಇವರ ಬಳಿಯೇ ಇತ್ತು. ಅದನ್ನು ವಶಪಡಿಸಿಕೊಂಡಿರುವ ಅಧಿಕಾರಿಗಳು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಿದ್ದಾರೆ.

ಬಂಧಿತ ವೈಜನಾಥ ಪತ್ನಿ ಜೈಲರ್!
ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಬಂಧಿತ, ಪ್ರಸ್ತುತ ಸಿಐಡಿ ವಶದಲ್ಲಿರುವ 6ನೇ ಕೆಎಸ್‌ಆರ್‌ಪಿ ಬಟಾಲಿಯನ್‌ನ ಸಹಾಯಕ ಕಮಾಂಡೆಂಟ್ ವೈಜನಾಥ ರೇವೂರನ ಪತ್ನಿ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಜೈಲರ್ ಆಗಿದ್ದಾರೆ.

ಕೆಲ ವರ್ಷಗಳಿಂದ ಕಲಬುರಗಿ ಕಾರಾಗೃಹದಲ್ಲಿ ಜೈಲರ್ ಆಗಿದ್ದು, ಪ್ರಸ್ತುತ ದಿವ್ಯಾ ಹಾಗರಗಿ, ಜ್ಯೋತಿ ಪಾಟೀಲ ಹಾಗೂ ಜ್ಞಾನಜ್ಯೋತಿ ಶಾಲೆಯ ಶಿಕ್ಷಕಿಯರು ಬಂಧಿತರಾಗಿರುವ ಬ್ಯಾರಕ್‌ನ ಭದ್ರತಾ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

ಜ್ಯೋತಿ ಪಾಟೀಲ ಅಮಾನತು
ಶಹಾಬಾದ್
:ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಬಂಧನಕ್ಕೊಳಗಾದ ಇಲ್ಲಿನ ನಗರಸಭೆಯ ದ್ವಿತೀಯ ದರ್ಜೆ ಸಹಾಯಕಿ (ಎಸ್‌ಡಿಎ) ಜ್ಯೋತಿ ಪಾಟೀಲ ಅವರನ್ನು ಅಮಾತುಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.