ADVERTISEMENT

ಪಿಎಸ್‌ಐ ಅಕ್ರಮ ನೇಮಕಾತಿ ಹಗರಣ: ಹಣ ಬರುವವರೆಗೆ ಸಿಗದು ಅಂಕಪಟ್ಟಿ!

ಡೀಲ್ ಕುದುರಿಸಲು ಮುಂಗಡ ₹ 10 ಲಕ್ಷ ಪಡೆಯುತ್ತಿದ್ದ ಆರೋಪಿಗಳು

​ಪ್ರಜಾವಾಣಿ ವಾರ್ತೆ
Published 5 ಮೇ 2022, 5:17 IST
Last Updated 5 ಮೇ 2022, 5:17 IST
ಪಿಎಸ್‌ಐ ನೇಮಕ ಅಕ್ರಮಕ್ಕೆ ಸಂಬಂಧಿಸಿದಂತೆ ಬುಧವಾರ ಪೊಲೀಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ವಿಚಾರಣೆಗಾಗಿ ಕಲಬುರಗಿಯ ಐವಾನ್ ಇ ಶಾಹಿ ಅತಿಥಿಗೃಹದ ಸಿಐಡಿ ಕಚೇರಿಗೆ ಕರೆತಂದರು
ಪಿಎಸ್‌ಐ ನೇಮಕ ಅಕ್ರಮಕ್ಕೆ ಸಂಬಂಧಿಸಿದಂತೆ ಬುಧವಾರ ಪೊಲೀಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ವಿಚಾರಣೆಗಾಗಿ ಕಲಬುರಗಿಯ ಐವಾನ್ ಇ ಶಾಹಿ ಅತಿಥಿಗೃಹದ ಸಿಐಡಿ ಕಚೇರಿಗೆ ಕರೆತಂದರು   

ಕಲಬುರಗಿ: ‍‍ಪಿಎಸ್‌ಐ ಅಕ್ರಮ ನೇಮಕಾತಿ ಹಗರಣವು ದಿನಕ್ಕೊಂದು ತಿರುವು ಪಡೆಯುತ್ತಿದೆ. ಪರೀಕ್ಷೆಯಲ್ಲಿ ಉತ್ತೀರ್ಣಗೊಳಿಸಲು ಅಭ್ಯರ್ಥಿಗಳ ಜೊತೆ ಮಧ್ಯವರ್ತಿಗಳು ಹಣದ ಒಪ್ಪಂದ ಮಾಡಿಕೊಳ್ಳುತ್ತಿದ್ದರು. ಆದರೆ, ಪೂರ್ಣ ಮೊತ್ತ ಕೈ ಸಿಗುವವರೆಗೆ ಅಭ್ಯರ್ಥಿಗಳ ಮೂಲ ಅಂಕಪಟ್ಟಿ, ಒಎಂಆರ್‌ ಶೀಟ್‌ನ ಕಾರ್ಬನ್ ಪ್ರತಿಗಳನ್ನು ತಮ್ಮ ಬಳಿಯೇ ಇರಿಸಿಕೊಳ್ಳುತ್ತಿದ್ದರೆ ಹೊರತು ಅವರಿಗೆ ಹಿಂದಿರುಗಿಸುತ್ತಿರಲಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ.

‘ಅಫಜಲಪುರದ ರುದ್ರಗೌಡ ಡಿ. ಪಾಟೀಲ ಮತ್ತು ಅಮರ್ಜಾ ನೀರಾವರಿ ಯೋಜನೆಯ ಎಇ ಮಂಜುನಾಥ ಮೇಳ
ಕುಂದಿ ಅಭ್ಯರ್ಥಿಗಳನ್ನು ಭೇಟಿಯಾದಾಗ, ಅಂಕಪಟ್ಟಿ ಮತ್ತು ಒಎಂಆರ್‌ ಶೀಟ್‌ಗಳನ್ನು ತಮಗೇ ಕೊಡಬೇಕು ಎಂದು ತಾಕೀತು ಮಾಡಿ, ಪಡೆಯುತ್ತಿದ್ದರು. ನಿಗದಿತ ಹಣ ಬಂದ ಬಳಿಕವಷ್ಟೇ ಅವರಿಗೆ ಮೂಲ ಅಂಕಪಟ್ಟಿ ಕೊಡುತ್ತಿದ್ದರು’ ಎಂದು ಮೂಲಗಳು ತಿಳಿಸಿವೆ.

‘ಪಿಎಸ್‌ಐ ನೇಮಕಾತಿಯ ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿನ ಅಭ್ಯರ್ಥಿಗಳಿಗೆ ಆಯ್ಕೆ ಸಮಿತಿಯು ಪರಿಶೀಲನೆ ವೇಳೆ ಮೂಲ ದಾಖಲೆಗಳನ್ನು ಹಾಜರುಪಡಿಸಲು ಸೂಚಿಸುತ್ತಿತ್ತು. ಆಗ ಅಂಕಪಟ್ಟಿಗಳು ಬೇಕಾಗುತ್ತವೆ ಎಂಬುದನ್ನು ಅರಿತಿದ್ದ ಆರೋಪಿಗಳು ಪೂರ್ತಿ ಹಣ ಪಾವತಿ ಆಗುವವರೆಗೂ ದಾಖಲೆಗಳನ್ನು ತಮ್ಮ ಬಳಿಯೇ ಇಟ್ಟುಕೊಳ್ಳುತ್ತಿದ್ದರು’ ಎಂದು ಗೊತ್ತಾಗಿದೆ.

ADVERTISEMENT

‘ಪಿಎಸ್‌ಐ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದ ಕಲಬುರಗಿ ಜಿಲ್ಲೆ ಸೇಡಂ ತಾಲ್ಲೂಕು ಕೋನಾಪುರ ಎಸ್‌.ಎನ್‌. ತಾಂಡಾದ ನಿವಾಸಿ ಶಾಂತಿಬಾಯಿಗೆ ಸೇರಿದ ಒಎಂಆರ್‌ ಶೀಟ್ ಮಂಜುನಾಥ ಮನೆಯಲ್ಲಿ ಪತ್ತೆಯಾಗಿದೆ. ಪರೀಕ್ಷೆಯಲ್ಲಿ ಉತ್ತೀರ್ಣಗೊಳಿಸಲು ಶಾಂತಿಬಾಯಿ ಮಂಜುನಾಥಗೆ ₹ 10 ಲಕ್ಷ ನೀಡಿದ್ದಾರೆ. ಉಳಿದ ಹಣವನ್ನು ತರಲು ಅವರ ಪತಿ ಬಸ್ಯನಾಯ್ಕಗೆ ಮಂಜುನಾಥ ಹೇಳಿದ್ದರು. ಮಂಗಳವಾರ ಬಂಧಿತರಾದ ಅಭ್ಯರ್ಥಿ ಪ್ರಭು ಹಾಗೂ ಶರಣಪ್ಪ ಅವರೂ ರುದ್ರಗೌಡ ಪಾಟೀಲ ಜೊತೆ ಒಪ್ಪಂದ ಮಾಡಿಕೊಂಡು ಪರೀಕ್ಷೆಗೆ ಮುಂಚೆ ₹ 20 ಲಕ್ಷ ಹಾಗೂ ಫಲಿತಾಂಶ ಪ್ರಕಟವಾದ ಬಳಿಕ ₹ 30 ಲಕ್ಷ ಹಣವನ್ನು ರುದ್ರಗೌಡಗೆ ತಲುಪಿಸಲಾಗಿತ್ತು’ ಎಂದು ಆರೋಪಿಗಳು ತಿಳಿಸಿದ್ದಾರೆ. ಇದಕ್ಕಾಗಿ ಅಭ್ಯರ್ಥಿಯ ತಂದೆ ಶರಣಪ್ಪ ಕಲಬುರಗಿಯಲ್ಲಿದ್ದ ತಮ್ಮ ನಿವೇಶನ ಮಾರಿದ್ದರು.

ತಾಂಡಾದಲ್ಲಿ ಮೌನ:ಪಿಎಸ್‌ಐ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರ ಬಂಧನದಿಂದ ತಪ್ಪಿಸಿಕೊಳ್ಳಲು ಪರಾರಿಯಾಗಿರುವ, ಸೇಡಂ ತಾಲ್ಲೂಕಿನಶಾಂತಿಬಾಯಿ ಅವರ ಮನೆ ಇರುವ ಕೋನಾಪುರ ತಾಂಡಾದಲ್ಲಿ ಮೌನ ಆವರಿಸಿದೆ.

ಪ್ರಕರಣ ಬೆಳಕಿಗೆ ಬಂದಾಗಿನಿಂದ ಶಾಂತಿಬಾಯಿ, ಪತಿ ಬಸ್ಯನಾಯ್ಕ ಪರಾರಿಯಾಗಿದ್ದಾರೆ. ತಾಂಡಾದಲ್ಲಿ ತಗಡಿನ ಶೆಡ್‌ನ ಚಿಕ್ಕ ಮನೆಯಲ್ಲಿ ಬಸ್ಯನಾಯ್ಕ, ಶಾಂತಿಬಾಯಿ, ಅವರ ಇಬ್ಬರು ಮಕ್ಕಳು, ಬಸ್ಯನಾಯ್ಕ ತಾಯಿ, ಸಹೋದರ, ಅವರ ಪತ್ನಿ ವಾಸವಿದ್ದಾರೆ. 5 ವರ್ಷಗಳ ಹಿಂದೆ ಸೇಡಂ ತಾಲ್ಲೂಕಿನ ಕೋಲಕುಂದಾ ತಾಂಡಾದ ಶಾಂತಿಬಾಯಿ ಬಸ್ಯನಾಯ್ಕ ಅವರನ್ನು ಮದುವೆಯಾಗಿದ್ದರು. ಅಂದಿನಿಂದ ಸರ್ಕಾರಿ ನೌಕರಿಗಾಗಿ ಪ್ರಯತ್ನ ನಡೆಸಿದ್ದರು’ ಎಂದು ತಾಂಡಾ ನಿವಾಸಿಯೊಬ್ಬರು ತಿಳಿಸಿದ್ದಾರೆ.

ಹಯ್ಯಾಳಿ, ರುದ್ರಗೌಡ ಅಮಾನತು:ಪಿಎಸ್‌ಐ ಅಕ್ರಮ ನೇಮಕಕ್ಕೆ ಸಂಬಂಧಿಸಿದಂತೆ ಬಂಧಿತರಾದ ಶಾಸಕರ ಗನ್ ಮ್ಯಾನ್ ಆಗಿದ್ದ ಹಯ್ಯಾಳಿ ದೇಸಾಯಿ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಅಮಾನತುಗೊಳಿಸಿದ್ದಾರೆ.

ಮತ್ತೊಬ್ಬ ಬಂಧಿತ ಅಭ್ಯರ್ಥಿ, ಸಿಎನ್‌ಆರ್ ಕಾನ್‌ಸ್ಟೆಬಲ್ ರುದ್ರಗೌಡ ಅವರನ್ನು ಕಲಬುರಗಿ ಪೊಲೀಸ್ ಕಮಿಷನರ್ ಡಾ.ವೈ.ಎಸ್. ರವಿಕುಮಾರ್ ಅಮಾನತುಗೊಳಿಸಿದ್ದಾರೆ.

‘ಸದ್ಯ ಸಿಐಡಿ ಕಸ್ಟಡಿಯಲ್ಲಿರುವ ಅಮರ್ಜಾ ನೀರಾವರಿ ಯೋಜನೆಯ ಸಹಾಯಕ ಎಂಜಿನಿಯರ್ ಮಂಜುನಾಥ ಮೇಳಕುಂದಿ ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವ ಕುರಿತು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ’ ಎಂದು ಕರ್ನಾಟಕ ನೀರಾವರಿ ನಿಗಮದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರೋಪಿಗಳು 10 ದಿನ ಸಿಐಡಿ ವಶಕ್ಕೆ:

ಕಲಬುರಗಿ: ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಬಂಧಿಸಲಾದ ಅಭ್ಯರ್ಥಿ ಪ್ರಭು, ಅವರ ತಂದೆ ಶರಣಪ್ಪ ಹಾಗೂ ಅಕ್ರಮಕ್ಕೆ ಸಾಥ್ ನೀಡಿದ ಚಂದ್ರಕಾಂತ ‌ಕುಲಕರ್ಣಿಗೆ ‌ಇಲ್ಲಿ‌ನ ಮೂರನೇ ಜೆಎಂಎಫ್ ನ್ಯಾಯಾಲಯವು 10 ದಿನಗಳವರೆಗೆ ಸಿಐಡಿ ವಶಕ್ಕೆ ನೀಡಿ ಆದೇಶ ಹೊರಡಿಸಿದೆ.

ಆರೋಪಿಗಳಾದ ಜ್ಞಾನಜ್ಯೋತಿ ಇಂಗ್ಲಿಷ್ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಕಾಶಿನಾಥ ಚಿಲ್, ಅಮರ್ಜಾ ನೀರಾವರಿ ಯೋಜನೆ ಸಹಾಯಕ ಎಂಜಿನಿಯರ್ ‌ಮಂಜುನಾಥ ಮೇಳಕುಂದಿ ‌ಹಾಗೂ ಅಭ್ಯರ್ಥಿ ಶ್ರೀಧರ ಪವಾರ ಅವರನ್ನು ಎಂಟು ದಿನಗಳವರೆಗೆ ಸಿಐಡಿ ವಶಕ್ಕೆ ಒಪ್ಪಿಸಿ ನ್ಯಾಯಾಧೀಶ ಸಂತೋಷ ಶ್ರೀವಾಸ್ತವ ಆದೇಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.