ADVERTISEMENT

ಪಿಎಸ್‌ಐ ನೇಮಕಾತಿ ಪ್ರಕರಣ: ಸಿಐಡಿ ಬಲೆಗೆ ಶಾಂತಿಬಾಯಿ, ಬಸ್ಯ ನಾಯ್ಕ

ಹೈದರಾಬಾದ್‌ನಲ್ಲಿ ಇಬ್ಬರು ಮಕ್ಕಳೊಂದಿಗೆ ತಲೆ ಮರೆಸಿಕೊಂಡಿದ್ದ ದಂಪತಿ

​ಪ್ರಜಾವಾಣಿ ವಾರ್ತೆ
Published 30 ಮೇ 2022, 12:34 IST
Last Updated 30 ಮೇ 2022, 12:34 IST
ಶಾಂತಿಬಾಯಿ ಹಾಗೂ ಬಸ್ಯ ನಾಯ್ಕ
ಶಾಂತಿಬಾಯಿ ಹಾಗೂ ಬಸ್ಯ ನಾಯ್ಕ   

ಕಲಬುರಗಿ: ಪಿಎಸ್‌ಐ ನೇಮಕಾತಿ ಪ್ರಕರಣದಲ್ಲಿ ತನಿಖೆಗೊಳಗಾಗುವ ಭೀತಿಯಿಂದ ತಲೆ ಮರೆಸಿಕೊಂಡಿದ್ದ ಅಭ್ಯರ್ಥಿ, ಸೇಡಂ ತಾಲ್ಲೂಕಿನ ಕೋನಾಪುರ ಎಸ್‌.ಎನ್. ತಾಂಡಾದ ಶಾಂತಿಬಾಯಿ, ಪತಿ ಬಸ್ಯ ನಾಯ್ಕ ಅವರನ್ನು ಸಿಐಡಿ ಪೊಲೀಸರು ಹೈದರಾಬಾದ್‌ನಿಂದ ಬಂಧಿಸಿ ಸೋಮವಾರ ಕಲಬುರಗಿಗೆ ಕರೆತಂದಿದ್ದಾರೆ.

ಪ್ರಮುಖ ಆರೋಪಿಗಳು ಸಿಕ್ಕಿದ್ದರೂ ಶಾಂತಿಬಾಯಿ ಎರಡು ತಿಂಗಳಿಂದ ನಾಪತ್ತೆಯಾಗಿದ್ದರು. ದಂಪತಿ ತಮ್ಮೊಂದಿಗೆ ಇಬ್ಬರು ಮಕ್ಕಳನ್ನೂ ಕರೆತಂದಿದ್ದಾರೆ.

ಈಗಾಗಲೇ ಬಂಧನದಲ್ಲಿರುವ ಶಹಾಬಾದ್ ನಗರಸಭೆ ಸಿಬ್ಬಂದಿಯಾಗಿದ್ದ ಜ್ಯೋತಿ ಪಾಟೀಲ ಮೂಲಕ ವ್ಯವಹಾರ ಕುದುರಿಸಿಕೊಂಡಿದ್ದ ಶಾಂತಿಬಾಯಿ ಪ್ರಕರಣದ ಕಿಂಗ್‌ಪಿನ್ ಮಂಜುನಾಥ ಮೇಳಕುಂದಿಗೆ ಹಣ ನೀಡಿ ಅಕ್ರಮವಾಗಿ ಪರೀಕ್ಷೆ ಬರೆದ ಆರೋಪ ಎದುರಿಸುತ್ತಿದ್ದಾರೆ.

ADVERTISEMENT

ಏಪ್ರಿಲ್ 10ರಂದು ಶಾಂತಿಬಾಯಿ ವಾಸವಾಗಿರುವ ಕೋನಾಪುರ ಎಸ್.ಎನ್. ತಾಂಡಾಕ್ಕೆ ಭೇಟಿ ನೀಡಿದ್ದ ಸಿಐಡಿ ಡಿವೈಎಸ್‌ಪಿ ಶಂಕರಗೌಡ ‍ಪಾಟೀಲ ಅವರು ಕರೆ ಮಾಡಿದಾಗ ಕೆಲ ಹೊತ್ತಿನಲ್ಲೇ ಬರುವುದಾಗಿ ಹೇಳಿದ್ದ ಬಸ್ಯ ನಾಯ್ಕ ಪತ್ನಿ ಹಾಗೂ ಮಕ್ಕಳನ್ನು ಕರೆದುಕೊಂಡು ಪರಾರಿಯಾಗಿದ್ದ. ಆ ಬಳಿಕ ಇಬ್ಬರ ಮೊಬೈಲ್ ಫೋನ್‌ಗಳೂ ಸ್ವಿಚ್ ಆಫ್ ಆಗಿದ್ದವು. ಸಿಐಡಿ ವಶದಲ್ಲಿದ್ದ ಜ್ಯೋತಿ ಪಾಟೀಲ ನೀಡಿದ ಸುಳಿವು ಆಧರಿಸಿ ಹುಡುಕಾಟ ನಡೆಸಿದ್ದರೂ ಪತ್ತೆಯಾಗಿರಲಿಲ್ಲ. ಆದರೆ, ಪತ್ತೆ ಕಾರ್ಯವನ್ನು ಮುಂದುವರಿಸಿದ್ದ ಅಧಿಕಾರಿಗಳು ಕೊನೆಗೂ ಆರೋಪಿಗಳನ್ನು ಬಂಧಿಸಿದ್ದಾರೆ.

₹40 ಲಕ್ಷಕ್ಕೆ ಡೀಲ್!

ಪಿಎಸ್‌ಐ ಹುದ್ದೆಗೆ ಆಯ್ಕೆಯಾಗುವಂತೆ ನೋಡಿಕೊಳ್ಳಲು ಜ್ಯೋತಿ ಪಾಟೀಲ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದರು. ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಶಾಂತಿಬಾಯಿ ಹೆಸರು ಬರುವುದಕ್ಕೂ ಮುನ್ನವೇ ₹10 ಲಕ್ಷ ಹಣವನ್ನು ಮುಂಗಡ ಪಡೆದಿರುವುದಾಗಿ ಜ್ಯೋತಿ ತಿಳಿಸಿದ್ದರು. ಆಯ್ಕೆಪಟ್ಟಿಯಲ್ಲಿ ಹೆಸರು ಕಾಣಿಸಿ ಕೊಂಡ ಬಳಿಕ ಉಳಿದ ₹30 ಲಕ್ಷವನ್ನು ಕೊಡಲು ಸಿದ್ಧತೆ ಮಾಡಿಕೊಂಡಿದ್ದರು. ಅಷ್ಟರಲ್ಲಿ ಹಗರಣ ಬೆಳಕಿಗೆ ಬಂತು. ಹೀಗಾಗಿ, ಉಳಿದ ಹಣವನ್ನು ನೀಡಲು ಆಗಿರಲಿಲ್ಲ.

ಆರ್‌.ಡಿ. ಪಾಟೀಲ ಮತ್ತೆ 4 ದಿನ ಸಿಐಡಿ ಕಸ್ಟಡಿಗೆ

ಪಿಎಸ್‌ಐ ಪ್ರಕರಣದ ಪ್ರಮುಖ ಆರೋಪಿ ಆರ್‌.ಡಿ. ಪಾಟೀಲಗೆ ಮತ್ತೆ ನಾಲ್ಕು ದಿನಗಳವರೆಗೆ ಸಿಐಡಿ ಕಸ್ಟಡಿಗೆ ನೀಡಿ ಇಲ್ಲಿನ ಪ್ರಧಾನ ಜೆಎಂಎಫ್‌ಸಿ ನ್ಯಾಯಾಲಯ ಆದೇಶ ಹೊರಡಿಸಿದೆ.

ಕಲಬುರಗಿಯ ಎಂ.ಎಸ್. ಇರಾನಿ ಕಾಲೇಜಿನ ಪಿಎಸ್‌ಐ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ಎಸಗಿ ಅಭ್ಯರ್ಥಿಯನ್ನು ಪಾಸ್ ಮಾಡಿಸಿದ ಆರೋಪ ಎದುರಿಸುತ್ತಿರುವ ಆರ್‌.ಡಿ. ಪಾಟೀಲ ಅವರನ್ನು ಏಳು ದಿನಗಳ ಕಾಲ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಆದರೆ, ತನಿಖೆಗೆ ಸಹಕಾರ ನೀಡದೇ ಇರುವುದರಿಂದ ಮತ್ತೆ ಏಳು ದಿನ ವಶಕ್ಕೆ ನೀಡಬೇಕು ಎಂದು ಸಿಐಡಿ ಪರ ಹಾಜರಾಗಿದ್ದ ಸಹಾಯಕ ಸರ್ಕಾರಿ ಅಭಿಯೋಜಕ ಶಿವಶರಣಪ್ಪ ಹೋತಪೇಟ ಮನವಿ ಮಾಡಿದರು.

ನ್ಯಾಯಾಧೀಶ ಸಂತೋಷ ಶ್ರೀವಾಸ್ತವ ಅವರು ಮತ್ತೆ ನಾಲ್ಕು ದಿನ ಸಿಐಡಿ ವಶಕ್ಕೆ ನೀಡಿ ಆದೇಶ ಹೊರಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.