ADVERTISEMENT

ಪಿಎಸ್ಐ ನೇಮಕಾತಿ ಅಕ್ರಮ: ಮಹಾರಾಷ್ಟ್ರದಲ್ಲಿ ಮುಖ್ಯ ಆರೋಪಿ ಆರ್.ಡಿ. ಪಾಟೀಲ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2022, 7:35 IST
Last Updated 23 ಏಪ್ರಿಲ್ 2022, 7:35 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಸಿ ಅಕ್ರಮ ನಡೆಸಿದ ಆರೋಪ ಹೊತ್ತಿರುವ ಅರ್.ಡಿ. ಪಾಟೀಲ (ರುದ್ರಗೌಡ) ಅವರನ್ನು ಸಿಐಡಿ ಪೊಲೀಸರು ಮಹಾರಾಷ್ಟ್ರದಲ್ಲಿ ಶನಿವಾರ ವಶಕ್ಕೆ ಪಡೆದುಕೊಂಡಿದ್ದಾರೆ.

ರುದ್ರಗೌಡ ಅವರ ಅಣ್ಣ ಅಫಜಲಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಾಂತೇಶ ಪಾಟೀಲ ಅವರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದರು. ಮುಖ್ಯ ಆರೋಪ ಎದುರಿಸುತ್ತಿರುವ ರುದ್ರಗೌಡ ಒಂದು ವಾರದಿಂದ ತಲೆ‌ಮರೆಸಿಕೊಂಡಿದ್ದರು.

ರುದ್ರಗೌಡ ಅವರ ಮೊಬೈಲ್ ಲೊಕೇಶನ್ ಪತ್ತೆ ಮಾಡಿದ ಸಿಐಡಿ ಪೊಲೀಸರು, ಮಹಾರಾಷ್ಟ್ರದಲ್ಲಿ ಇರುವ ಬಗ್ಗೆ ಖಚಿತ ಮಾಹಿತಿ ಕಲೆ ಹಾಕಿದ್ದರು. ಶನಿವಾರ ಬೆಳಿಗ್ಗೆ ವಶಕ್ಕೆ ಪಡೆದು, ಆರೋಪಿಯನ್ನು ಕಲಬುರಗಿ ಕಡೆಗೆ ಕರೆದುಕೊಂಡು ಬರುತ್ತಿದ್ದಾರೆ. ಮಧ್ಯಾಹ್ನ 4ರ ಸುಮಾರಿಗೆ ಕಲಬುರಗಿ ತಲುಪುವ ಸಾಧ್ಯತೆ ಇದೆ ಎಂದು ಮೂಲಗಳು 'ಪ್ರಜಾವಾಣಿ'ಗೆ ಮಾಹಿತಿ ನೀಡಿವೆ.

ADVERTISEMENT

545 ಪಿಎಸ್ಐ ನೇಮಕಾತಿ ಪರೀಕ್ಷೆ ವೇಳೆ, ಇಲ್ಲಿನ ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಗಳಿಗೆ ಬ್ಲ್ಯೂಟೂತ್ ಮೂಲಕ ಪರೀಕ್ಷೆಗೆ ಸಹಾಯ ಮಾಡಿದ್ದಾರೆ ಎಂಬ ಆರೋಪ ರುದ್ರಗೌಡ ಮೇಲಿದೆ.

ಸಾಂಗವಾಗಿ ನಡೆದ ಸಾಮೂಹಿಕ ವಿವಾಹ: ಮಹಾಂತೇಶ ಪಾಟೀಲ ಹಾಗೂ ಆರ್.ಡಿ. ಪಾಟೀಲ ಸಹೋದರರು ಅಫಜಲಪುರದಲ್ಲಿ ಶನಿವಾರ ಆಯೋಜಿಸಿದ್ದ 101 ಸಾಮೂಹಿಕ ವಿವಾಹ ಕಾರ್ಯಕ್ರಮ ಯಾವುದೇ ಅಡಚಣೆ ಇಲ್ಲದೇ ನೆರವೇರಿತು. ಇಬ್ಬರೂ ಸಹೋದರರ ತಾಯಿಯೇ ಮುಂದೆ ನಿಂತು ಎಲ್ಲ ಮದುವೆ ಮಾಡಿಸಿದರು.

ಮದುವೆ ಮಂಟಪದಲ್ಲಿ ಕೂಡ ಪೊಲೀಸ್ ಕಾವಲು ನೀಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.